ಬೆಂಗಳೂರು: ‘ಮುಜರಾಯಿ ಇಲಾಖೆಯ ವ್ಯಾಪ್ತಿಯ ಶ್ರೀಮಂತ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ‘ಸಾಮಾನ್ಯ ಸಂಗ್ರಹಣಾ ನಿಧಿ’ಯನ್ನು ಆದಾಯ ಇಲ್ಲದಿರುವ ‘ಸಿ’ ವರ್ಗದ ದೇವಸ್ಥಾನಗಳಿಗೆ ಬಳಸುವುದನ್ನು ಕಡ್ಡಾಯಗೊಳಿಸುವ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆಯನ್ನು ಸೂಕ್ತ ಸ್ಪಷ್ಟೀಕರಣದೊಂದಿಗೆ ಮತ್ತೆ ಸಲ್ಲಿಸಿ, ರಾಜ್ಯಪಾಲರಿಂದ ಅನುಮೋದನೆ ಪಡೆಯಲಾಗುವುದು’ ಎಂದು ಮುಜರಾಯಿ ಇಲಾಖೆ ಹೇಳಿದೆ.
‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ– 1997’ಕ್ಕೆ 2023ರಲ್ಲಿ ತಿದ್ದುಪಡಿ ತಂದಾಗಲೂ ರಾಜ್ಯಪಾಲರು ಕೆಲವು ಸ್ಪಷ್ಟೀಕರಣ ಕೇಳಿದ್ದರು. ಕಾನೂನು ಇಲಾಖೆಯ ಮೂಲಕ ಸೂಕ್ತ ಸ್ಪಷ್ಟೀಕರಣ ನೀಡಿ ಅನುಮೋದನೆ ಪಡೆಯಲಾಗಿತ್ತು. ಈ ಬಾರಿ ಕೂಡ ರಾಜ್ಯಪಾಲರು ಕೆಲವು ಸ್ಪಷ್ಟೀಕರಣ ಕೇಳಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
‘ರಾಜ್ಯ ಹೈಕೋರ್ಟ್ ಈ ಕಾಯ್ದೆಯನ್ನು ರದ್ದುಗೊಳಿಸಿ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಹೀಗಾಗಿ ಈ ಕಾಯ್ದೆ ಚಾಲ್ತಿಯಲ್ಲಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳ ಆಡಳಿತಕ್ಕೆ ಪ್ರಾಂತ್ಯಾವಾರು ಕಾಯ್ದೆಗಳಿವೆ. ಕರ್ನಾಟಕದಲ್ಲಿ ಏಕರೂಪದ ಕಾಯ್ದೆ ತರುವ ಉದ್ದೇಶದಿಂದ 1997ರಲ್ಲಿ ಈ ಕಾಯ್ದೆಯನ್ನು ಸರ್ಕಾರ ರೂಪಿಸಿತ್ತು. 2003ರ ಮೇ 1ರಿಂದ ಕಾಯ್ದೆ ಜಾರಿಯಲ್ಲಿದೆ. ಈ ಕಾಯ್ದೆಗೆ 2011ರಲ್ಲಿ ತಿದ್ದುಪಡಿ ತಂದು ‘ಸಾಮಾನ್ಯ ಸಂಗ್ರಹಣಾ ನಿಧಿ’ ಸಂಗ್ರಹಿಸಲಾಗುತ್ತಿದೆ. ಸದ್ಯ ವಾರ್ಷಿಕ ಅಂದಾಜು ₹ 8 ಕೋಟಿ ಸಂಗ್ರಹವಾಗುತ್ತಿದೆ. ಅದನ್ನು ಹಿಂದೂ ಧಾರ್ಮಿಕ ಸಂಸ್ಥೆಗಳ ವಿವಿಧ ಉದ್ದೇಶಗಳಿಗೆ ಬಳಸಲಾಗುತ್ತಿದೆ’ ಎಂದು ಸಚಿವರು ವಿವರಿಸಿದ್ದಾರೆ.
‘ಇತರೆ ಧರ್ಮಗಳಿಗೆ ಸಂಬಂಧಪಟ್ಟಂತೆ ರಾಜ್ಯಪಾಲರು ಕೇಳಿರುವ ಸ್ಪಷ್ಟೀಕರಣ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ’ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.