ADVERTISEMENT

ಮತಾಂತರ: ಬೆಂಗಳೂರಿನಲ್ಲಿ ಮಾಜಿ ಕಾರ್ಪೊರೇಟರ್ ಸೇರಿ ಮೂವರ ಬಂಧನ

ಹುಬ್ಬಳ್ಳಿ ನವನಗರ ಠಾಣೆ ಎಫ್‌ಐಆರ್: ಬೆಂಗಳೂರು ಬನಶಂಕರಿ ಠಾಣೆ ಪೊಲೀಸರ ತನಿಖೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 3:07 IST
Last Updated 14 ಅಕ್ಟೋಬರ್ 2022, 3:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹಿಂದೂ ಯುವಕನನ್ನು ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರಿಸಿ ಖತ್ನಾ (ಮುಂಜಿ) ಮಾಡಿಸಿಪೀಡಿಸಿದ್ದ ಪ್ರಕರಣದಲ್ಲಿ ಮಾಜಿ ಕಾರ್ಪೊರೇಟರ್ ಸೇರಿ ಮೂವರನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ ಐದಕ್ಕೆ ಏರಿದೆ.

‘ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಶ್ರೀಧರ್ ಎಂಬುವರನ್ನು ಮತಾಂತರ ಮಾಡಿ ಕಿರುಕುಳ ನೀಡಲಾಗಿತ್ತು. ಶ್ರೀಧರ್ ನೀಡಿದ್ದ ಹೇಳಿಕೆ ಆಧರಿಸಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯ (ಐಪಿಸಿ 295ಎ) ಹಾಗೂ ಪರಿಶಿಷ್ಟ ಜಾತಿ– ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಹುಬ್ಬಳ್ಳಿಯ ನವನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಕೃತ್ಯ ನಡೆದ ಸ್ಥಳದ ಆಧಾರದಲ್ಲಿ ಪ್ರಕರಣವನ್ನು ಬನಶಂಕರಿ ಠಾಣೆಗೆ ಇತ್ತೀಚೆಗೆ ವರ್ಗಾಯಿಸಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿಗಳಾದ ಬನಶಂಕರಿಯ ಕಾವೇರಿನನಗರ ನಿವಾಸಿ ಶಬೀರ್ (34) ಹಾಗೂ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಮೊಹಮ್ಮದ್ ಅಸಾನ್ ಅಲಿಯಾಸ್ ಅತ್ತಾವರ್ ರೆಹಮಾನ್ (45) ಎಂಬುವವರನ್ನು ಮಾತ್ರ ಬಂಧಿಸಲಾಗಿತ್ತು. ಇದೀಗ, ಬನಶಂಕರಿ ವಾರ್ಡ್‌ ಮಾಜಿ ಕಾರ್ಪೊರೇಟರ್ ಅನ್ಸರ್ ಪಾಷಾ (47) ಮತ್ತು ಆತನ ಸಹಚರರಾದ ನಯಾಜ್ ಪಾಷಾ (36), ಹಾಜೀ ಸಾಬ್ (34) ಅವರನ್ನು ಮಂಡ್ಯದಲ್ಲಿ ಬಂಧಿಸಿ ನಗರಕ್ಕೆ ಕರೆತರಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಅನ್ಸರ್ ಪಾಷಾ ಹಾಗೂ ಹಾಜೀಸಾಬ್, ಸಂತ್ರಸ್ತ ಶ್ರೀಧರ್ ಅವರಿಗೆ ಖತ್ನಾ ಮಾಡಿಸಿದ್ದ ಧಾರ್ಮಿಕ ಕೇಂದ್ರದ ಸದಸ್ಯರಾಗಿದ್ದರು. ಇನ್ನೊಬ್ಬ ಆರೋಪಿ ನಯಾಜ್, ಖತ್ನಾ ಮಾಡಿಸಿದ್ದಕ್ಕಾಗಿ ಶ್ರೀಧರ್‌ ಅವರಿಗೆ ₹ 35 ಸಾವಿರ ನೀಡಿದ್ದ. ಮತಾಂತರ ಮಾಡುವುದು ಇವರೆಲ್ಲರ ಉದ್ದೇಶವಾಗಿತ್ತು’ ಎಂದಿವೆ.

ನಾನಾ ಆಮಿಷವೊಡ್ಡಿ ಮತಾಂತರ: ‘ಸಂತ್ರಸ್ತ ಶ್ರೀಧರ್, ಡಿಪ್ಲೊಮಾ ವ್ಯಾಸಂಗ ಮಾಡಿದ್ದರು. ಅವರ ತಂದೆ–ತಾಯಿ ತೀರಿಕೊಂಡಿದ್ದರು. ಆಸ್ತಿ ವಿಚಾರವಾಗಿ ಸಂಬಂಧಿಕರಲ್ಲಿ ಜಗಳವಿತ್ತು. ಹೀಗಾಗಿ, ನಗರ ತೊರೆದು ಬೆಂಗಳೂರಿಗೆ ಬಂದು ಸೈಬರ್ ಕೇಂದ್ರವೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಅವರಿಗೆ ನಾನಾ ಆಮಿಷವೊಡ್ಡಿದ್ದ ಆರೋಪಿಗಳು, ಮತಾಂತರ ಆಗುವಂತೆ ಪೀಡಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಶ್ರೀಧರ್ ಅವರಿಗೆ ಒತ್ತಾಯದಿಂದ ಖತ್ನಾ ಮಾಡಿಸಿದ್ದ ಆರೋಪಿಗಳು, ಸಲ್ಮಾನ್ ಎಂಬುದಾಗಿ ಹೆಸರು ಬದಲಿಸಿದ್ದರು. ಮಸೀದಿಯೊಂದರಲ್ಲಿ ಕೆಲದಿನ ಅಕ್ರಮ ಬಂಧನದಲ್ಲಿರಿಸಿದ್ದರು. ‘ನಿತ್ಯವೂ ಕುರಾನ್ ಓದಬೇಕು. ಇಲ್ಲದಿದ್ದರೆ, ನೀನು ಉಗ್ರನೆಂದು ಹೇಳಿ ವಿಡಿಯೊ ಹರಿಬಿಡುತ್ತೇವೆ’ ಎಂಬುದಾಗಿ ಆರೋಪಿಗಳು ಬೆದರಿಸಿದ್ದರು.’

‘ಶ್ರೀಧರ್ ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಪರಿಚಯವಾದ ಯುವತಿಯನ್ನು ಭೇಟಿಯಾಗಲು ಹುಬ್ಬಳ್ಳಿಯ ನವನಗರಕ್ಕೆ ಹೋಗಿದ್ದರು. ಅವರ ಬಗ್ಗೆ ಅನುಮಾನಗೊಂಡಿದ್ದ ಸ್ಥಳೀಯರು, ಥಳಿಸಿ ಠಾಣೆಗೆ ಒಪ್ಪಿಸಿದ್ದರು. ಪೊಲೀಸರ ವಿಚಾರಣೆ ವೇಳೆ ಶ್ರೀಧರ್, ಮತಾಂತರ ಸಂಗತಿ ಹೇಳಿ ರಕ್ಷಣೆ ಕೋರಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.