ಶಾಂತಿ–ಸೌಹಾರ್ದದ ತವರಾದ ಕನ್ನಡ ನಾಡಿನಲ್ಲಿ ಮುಸ್ಲಿಂ ವರ್ತಕರಿಗೆ ‘ಬಹಿಷ್ಕಾರ’ ಹಾಕುವ ಹೊಸ ಚಾಳಿ ಶುರುವಾಗಿದೆ. ಒಂದು ಕಡೆ ಶುರುವಾದ ಈ ಚಟುವಟಿಕೆ ನಾನಾ ದಿಕ್ಕುಗಳಿಗೆ ಹರಡಿದೆ. ಈ ಹೊತ್ತಿನಲ್ಲಿ ಸಾಮರಸ್ಯ ಕಾಪಾಡಿ, ಸರ್ವಜನಾಂಗದ ಶಾಂತಿಯ ತೋಟವಾಗಿ ಕರ್ನಾಟಕವನ್ನು ಉಳಿಸಿಕೊಳ್ಳುವ ಆಲೋಚನೆಗಳನ್ನು ಬಿತ್ತಬೇಕಿದೆ. ವಿವಿಧ ಸಮುದಾಯಗಳ ಗುರುಗಳು ಆಡಿದ ತಿಳಿಮಾತು ಅರಿವನ್ನು ವಿಸ್ತರಿಸುವ, ಸಹಬಾಳ್ವೆಗೆ ಪ್ರೇರೇಪಿಸುವ ಜೊತೆಗೆ ಉರಿಯನ್ನು ಆರಿಸಲಿ...
**
‘ಬಹುತ್ವ ಭಾರತ ಉಳಿಯಲಿ’
ಶ್ರೇಷ್ಠತೆಯ ವ್ಯಸನ ಏನೆಲ್ಲ ಅನರ್ಥ, ಅನಾಹುತಗಳಿಗೆ ಕಾರಣವಾಗುತ್ತದೆ. ಎಲ್ಲ ಧರ್ಮಗಳು ಸಾರುವುದು ಸತ್ಯ, ಅಹಿಂಸೆ, ಪ್ರೇಮ, ಸಹೋದರತ್ವ, ದಯೆ ಮುಂತಾದ ಮೌಲ್ಯಗಳನ್ನು. ಯಾವ ಧರ್ಮವೂ ತನ್ನಷ್ಟಕ್ಕೆ ತಾನು ಶ್ರೇಷ್ಠ ಅಥವಾ ಕನಿಷ್ಠ ಆಗುವುದಿಲ್ಲ. ಆಯಾ ಧರ್ಮದ ಅನುಯಾಯಿಗಳು ತಮ್ಮ ನಡವಳಿಕೆಯಿಂದ ಧರ್ಮಕ್ಕೆ ಗೌರವ ಇಲ್ಲವೇ ಅಗೌರವ ತರುವರು. ಭಾರತ ಬಹುತ್ವದಲ್ಲಿ ಏಕತೆ ಕಾಯ್ದುಕೊಂಡು ಬಂದಿದೆ. ಹಾಗಾಗಿ ಪರಸ್ಪರ ಸೌಹಾರ್ದದಿಂದ ಬಾಳಬೇಕು. ಎಲ್ಲ ಧರ್ಮಗಳು, ಸಂತರು, ಶರಣರು ಇದನ್ನೇ ಪ್ರತಿಪಾದಿಸಿದ್ದಾರೆ. ಅದನ್ನು ನಾವು ಕಾಯ್ದುಕೊಳ್ಳಬೇಕು.
-ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ,ಸಾಣೇಹಳ್ಳಿ
**
‘ದ್ವೇಷ ಬಿಟ್ಟು ಶಾಂತಿ ಸ್ಥಾಪಿಸೋಣ’
ಕರ್ನಾಟಕ ಸೌಹಾರ್ದತೆಯ ನಾಡು, ಅದಕ್ಕೆ ನೋವುಂಟಾಗುವ ಯಾವುದೇ ಕಾರ್ಯಗಳು ಆಗದಿರಲಿ. ಎಲ್ಲ ಧರ್ಮದಲ್ಲಿಯೂ ಸದ್ಗುಣಿಗಳು ಹಾಗೂ ದುರ್ಗುಣಿಗಳು ಇದ್ದೇ ಇರುತ್ತಾರೆ. ದುರ್ಗುಣ ಹೊಂದಿರುವ ವ್ಯಕ್ತಿ ತಪ್ಪು ಮಾಡಿದರೆ ಆ ವ್ಯಕ್ತಿಗೆ ಶಿಕ್ಷೆ ಕೊಡಬೇಕು. ಸಮುದಾಯಕ್ಕೆ ಶಿಕ್ಷೆ ಆಗಬಾರದು. ಶಾಂತಿ, ಸೌಹಾರ್ದತೆಯಿಂದ ಕೂಡಿ ಬದುಕುವ ಮೂಲಕ ಬಸವಾದಿ ಶರಣರು, ದಾಸರು, ಸಂತರು ಕಟ್ಟಿದ ಈ ನಾಡಿನಲ್ಲಿ ದ್ವೇಷವನ್ನು ಬಿಟ್ಟು ಪ್ರೀತಿ ಮತ್ತು ಶಾಂತಿಯನ್ನು ಸ್ಥಾಪಿಸೋಣ.
-ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಪೀಠ.
**
‘ಧಾರ್ಮಿಕ ಸಾಂಕ್ರಾಮಿಕ ಹೆಚ್ಚಬಾರದು’
ಧರ್ಮದ ಆಧಾರದಲ್ಲಿ ವ್ಯಾಪಾರಕ್ಕೆ ತಡೆ ಒಡ್ಡುವುದು ಅನ್ನದ ಮಾರ್ಗಗಳನ್ನು ಕಸಿಯುವ ಕೆಲಸ. ಮುಂದಿನ ದಿನಗಳಲ್ಲಿ ತಮ್ಮ ಜಾತಿಯವರ ಅಂಗಡಿಗಳಿಗಷ್ಟೇ ಹೋಗಬೇಕಾದ ಸ್ಥಿತಿ ಬರಬಹುದು. ಈ ರೀತಿಯ ಅಪಸವ್ಯಗಳು ನಡೆಯಬಾರದು. ಧಾರ್ಮಿಕ ಸಾಂಕ್ರಾಮಿಕಕ್ಕೆ ಔಷಧಿ ಇಲ್ಲ. ಈ ನಾಡಿನ ಧಾರ್ಮಿಕ, ಸೌಹಾರ್ದ ಮತ್ತು ಸಾಮರಸ್ಯದ ಪರಂಪರೆಗೆ ಧಕ್ಕೆ ತರುವ ಚಟುವಟಿಕೆಗಳನ್ನು ಹೊಸಕಿ ಹಾಕಬೇಕು. ಎಷ್ಟೋ ದೇವಸ್ಥಾನಗಳಿಗೆ ಮುಸಲ್ಮಾನರೂ ಕಾಣಿಕೆ ನೀಡುತ್ತಾರೆ. ಪಡೆಯಬಾರದು ಎನ್ನಲು ಸಾಧ್ಯವೇ? ವಿಷಕಾರುವುದನ್ನು ಬಿಟ್ಟು ವಿಶಾಲವಾಗಿ ಯೋಚಿಸಬೇಕಿದೆ.
-ಷಡಕ್ಷರಿ ಮುನಿ ದೇಶೀಕೇಂದ್ರ ಸ್ವಾಮೀಜಿ, ಆದಿಜಾಂಬವ ಮಠ
**
‘ಸಾಮರಸ್ಯವೇ ಕರ್ನಾಟಕದ ಸೌಂದರ್ಯ’
ಕರ್ನಾಟಕ ಸೌಹಾರ್ದದ ನಾಡು. ಬಸವಣ್ಣ, ಕುವೆಂಪು, ಟಿಪ್ಪು ಸುಲ್ತಾನ್ ಸೌಹಾರ್ದದ ಪಾಠ ಹೇಳಿ ಕೊಟ್ಟಿದ್ದಾರೆ. ಸಾಮರಸ್ಯವೇ ನಾಡಿನ ಸೌಂದರ್ಯ. ಧಾರ್ಮಿಕ ಸಹಿಷ್ಣುತೆಗೆ ಭಂಗ ತರುವ ಕೆಲಸವನ್ನು ಯಾರೂ ಮಾಡಬಾರದು. ಹಿಜಾಬ್ ವಿಷಯ ಹಿಂದೂ–ಮುಸ್ಲಿಮರ ನಡುವಿನ ಸಮಸ್ಯೆ ಅಲ್ಲ. ಅದು ಇಸ್ಲಾಮಿಕ್ ಷರಿಯತ್ ಮತ್ತು ಕಾನೂನಿನ ನಡುವಣ ಸಾಂವಿಧಾನಿಕ ವಿಚಾರ. ಕರ್ನಾಟಕದ ಆರೂವರೆ ಕೋಟಿ ಜನರಲ್ಲಿ ಬಹುಸಂಖ್ಯಾತರು ಶಾಂತಿಪ್ರಿಯರು. ಸೌಹಾರ್ದತೆಗೆ ಧಕ್ಕೆ ತರುವ ಜನ ಎಲ್ಲಾ ಸಮುದಾಯಗಳಲ್ಲೂ ಇರುತ್ತಾರೆ. ಅಂಥವರು ಯಾವುದೇ ಧರ್ಮದವರಾಗಿದ್ದರೂ ಲೆಕ್ಕಕ್ಕೆ ತೆಗೆದುಕೊಳ್ಳಬಾರದು.
-ಮೌಲಾನಾ ಎನ್.ಕೆ. ಷಾಫಿ ಸಾ– ಆದಿ, ಕರ್ನಾಟಕ ವಕ್ಫ್ ಮಂಡಳಿ ಅಧ್ಯಕ್ಷ
**
‘ವಿಶ್ವ ಮಾನವರಾಗೋಣ’
ಮಂದಿರ, ಮಸೀದಿ, ಚರ್ಚುಗಳ ಮುಂದೆ ವ್ಯಾಪಾರ ಮಾಡುವ ವಿವಿಧ ಧರ್ಮಗಳ ಜನರು ಈ ನಾಡಿನ ಬಹು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಾರೆ. ದ್ವೇಷ, ಮತ್ಸರ ಇಲ್ಲದೆ ಭಾವೈಕ್ಯತೆಯಿಂದ ಬಾಳುತ್ತಿದ್ದಾರೆ. ಆದರೆ, ಈಗ ಅವರನ್ನು ಬೇರ್ಪಡಿಸುವ ಪ್ರಯತ್ನ ಅತ್ಯಂತ ಆಘಾತಕಾರಿ. ಎಲ್ಲ ಧರ್ಮಗಳ ಪವಿತ್ರ ಸ್ಥಳಗಳೂ ಎಲ್ಲರನ್ನೂ ಒಗ್ಗೂಡಿಸುವ ಕೇಂದ್ರಗಳಾಗಬೇಕು. ಜನರಲ್ಲಿ ಪ್ರೀತಿ, ಒಗ್ಗಟ್ಟು ಹಾಗೂ ಸಮಾನತೆಯನ್ನು ಸಾರುವ ತಾಣಗಳಾಗಬೇಕು. ಇಂತಹ ಆಧ್ಯಾತ್ಮಿಕ ಸ್ಥಳಗಳ ಹೊಸ್ತಿಲಲ್ಲಿ ಇಂತಹ ಬೇಧ ತಾರತಮ್ಯದ ನಡೆಗಳು ಅಪಾಯಕಾರಿ. ಇಂತಹ ಘಟನೆಗಳು ಮರುಕಳಿಸದಂತೆ ಜವಾಬ್ದಾರಿ ವಹಿಸಬೇಕಿದೆ.
-ಪೀಟರ್ ಮಚಾದೊ, ಬೆಂಗಳೂರಿನ ಆರ್ಚ್ ಬಿಷಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.