ಬೆಂಗಳೂರು: ‘ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ) ಮಸೂದೆ–2021’ ಯಾವುದೇ ರೀತಿಯ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನೂ ಸಕ್ರಮಗೊಳಿಸುವುದಿಲ್ಲ. ಅಂತಹ ರಚನೆಗಳಿಗೆ ತಾತ್ಕಾಲಿಕ ರಕ್ಷಣೆಯನ್ನಷ್ಟೇ ಈ ಮಸೂದೆ ನೀಡಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಮಸೂದೆ ಮಂಡಿಸಿ ಮಾತನಾಡಿದ ಅವರು, ‘ಸುಪ್ರೀಂಕೋರ್ಟ್ ಆದೇಶ ಪಾಲನೆಗಾಗಿ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಅಧಿಕಾರಿಗಳು ಆರಂಭಿಸಿದ್ದರು. ಇದರಿಂದ ಸಮಾಜದಲ್ಲಿ ಶಾಂತಿಭಂಗ ಆಗುವ ಅಪಾಯ ಎದುರಾಗಿದೆ. ಈ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಅನಧಿಕೃತ ಧಾರ್ಮಿಕ ಕಟ್ಟಡಗಳಿಗೆ ತಾತ್ಕಾಲಿಕವಾಗಿ ರಕ್ಷಣೆ ಒದಗಿಸುವುದಕ್ಕೆ ಸೀಮಿತವಾಗಿ ಮಸೂದೆ ತರಲಾಗಿದೆ’ ಎಂದು ವಿವರಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಇನ್ನೂ ಬಾಕಿ ಇದೆ. ನ್ಯಾಯಾಲಯದ ಅಂತಿಮ ತೀರ್ಮಾನ ಬರಬೇಕಿದೆ. ನ್ಯಾಯಾಲಯದ ಅಂತಿಮ ಆದೇಶ ಬರುವವರೆಗೆ ಅಥವಾ ರಾಜ್ಯ ಸರ್ಕಾರದ ಮುಂದಿನ ತೀರ್ಮಾನದವರೆಗೆ ಅಂತಹ ಧಾರ್ಮಿಕ ಕಟ್ಟಡಗಳಿಗೆ ಈ ಮಸೂದೆ ರಕ್ಷಣೆ ನೀಡಲಿದೆ ಎಂದರು.
ಅನಧಿಕೃತ ಧಾರ್ಮಿಕ ಕಟ್ಟಡಗಳಿಗೆ ಸಂಬಂಧಿಸಿದಂತೆ ಸರ್ಕಾರ ನಿರ್ದಿಷ್ಟವಾಗಿ ಒಂದು ತೀರ್ಮಾನಕ್ಕೆ ಬರಲೇಬೇಕಿದೆ. ಪ್ರತಿ ಪ್ರಕರಣವನ್ನೂ ಪ್ರತ್ಯೇಕವಾಗಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳುವ ಯೋಚನೆಯಿದೆ. ಅಲ್ಲಿಯವರೆಗೂ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡದಂತೆ ಈ ಮಸೂದೆ ತಡೆಯಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೊಸದಾಗಿ ಯಾವುದೇ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸದಂತೆಯೂ ಮಸೂದೆ ನಿರ್ಬಂಧಿಸಲಿದೆ ಎಂದು ಮಾಧುಸ್ವಾಮಿ ಹೇಳಿದರು.
2009ರಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಲಾಗಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ ಇಡೀ ದೇಶಕ್ಕೆ ಅನ್ವಯಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ನೀಡಿದೆ. ಸುಪ್ರೀಂಕೋರ್ಟ್ ಸೂಚನೆಯನ್ನು ಪಾಲಿಸಬೇಕೆಂಬ ಅಧಿಕಾರಿಗಳ ತೀರ್ಮಾನದಿಂದ ಈಗ ರಾಜ್ಯದಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ಸೌಹಾರ್ದ ಕಾಯುವುದಕ್ಕೆ ಪೂರಕವಾಗಿ ಮಸೂದೆ ತರಲಾಗಿದೆ ಎಂದರು.
ಧ್ವನಿಮತದ ಮೂಲಕ ಅಂಗೀಕಾರ: ಚರ್ಚೆಯ ಬಳಿಕ ಧ್ವನಿಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು. ವಿಧಾನಸಭೆ ಈ ಮಸೂದೆಗೆ ಮಂಗಳವಾರ ಒಪ್ಪಿಗೆ ನೀಡಿತ್ತು.
ಇದನ್ನೂ ಓದಿ:ನಿಖಿಲ್ ಕುಮಾರಸ್ವಾಮಿ ದಂಪತಿಗೆ ಪುತ್ರನ ಆಗಮನ
‘ಮೌಢ್ಯ ಬಿತ್ತುವ ತಾಣಗಳು’
ಅನಧಿಕೃತ ಧಾರ್ಮಿಕ ಕಟ್ಟಡಗಳಿಗೆ ರಕ್ಷಣೆ ಒದಗಿಸಲು ನಾಗರಿಕ ಸರ್ಕಾರವೊಂದು ಮಸೂದೆ ಮಂಡಿಸುವುದು ಸಂವಿಧಾನ ವಿರೋಧಿ ನಡೆ. ಎಲ್ಲ ಧರ್ಮಗಳ ಧಾರ್ಮಿಕ ಕಟ್ಟಡಗಳೂ ಮೌಢ್ಯ ಬಿತ್ತುವ ತಾಣಗಳಾಗಿವೆ. ಅಸಮಾನತೆ, ಅಸ್ಪೃಶ್ಯತೆಯನ್ನು ಪೋಷಿಸುತ್ತಿವೆ. ಅಂತಹ ಅಕ್ರಮ ಕಟ್ಟಡಗಳನ್ನು ಏಕೆ ರಕ್ಷಿಸಬೇಕು’ ಎಂದು ಜೆಡಿಎಸ್‌ನ ಮರಿತಿಬ್ಬೇಗೌಡ ಆಕ್ರೋಶದಿಂದ ಪ್ರಶ್ನಿಸಿದರು. ಸುಪ್ರೀಂಕೋರ್ಟ್ ಆದೇಶ ಪಾಲಿಸಿ, ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಬೇಕು. ಅಸಮಾನತೆಯನ್ನು ತೊಡೆದುಹಾಕಲು ಸರ್ಕಾರ ಕಾನೂನು ಮಾಡಬೇಕು. ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ರಕ್ಷಿಸುವುದರಿಂದ ಸಮಾಜಕ್ಕೆ ಯಾವುದೇ ರೀತಿಯಲ್ಲೂ ಒಳಿತಾಗುವುದಿಲ್ಲ ಎಂದು ಹೇಳಿದರು.
ಮಸೂದೆಯಲ್ಲಿ ಏನಿದೆ?
‘ಕೋಮು ಸೌಹಾರ್ದ ಕಾಪಾಡುವ ಸಲುವಾಗಿ ಮತ್ತು ಸಾರ್ವಜನಿಕರ ಯಾವುದೇ ಧಾರ್ಮಿಕ ಭಾವನೆಗಳಿಗೆ ನೋವುಂಟಾಗದಂತೆ ತಡೆಯುವ ಉದ್ದೇಶದಿಂದ ಈ ಕಾಯ್ದೆಯ ಜಾರಿಯಾದ ದಿನಾಂಕಕ್ಕೆ ಮುಂಚೆ ಸಾರ್ವಜನಿಕ ಸ್ಥಳದಲ್ಲಿ ನಿರ್ಮಿಸಲಾದ ಧಾರ್ಮಿಕ ಕಟ್ಟಡಗಳ ಸಂರಕ್ಷಣೆಗೆ ನಿಯಮಗಳನ್ನು ರೂಪಿಸಲು ಅವಕಾಶ ಕಲ್ಪಿಸುವುದು ಈ ಮಸೂದೆಯ ಪ್ರಮುಖ ಉದ್ದೇಶ’ ಎಂದು ತಿಳಿಸಲಾಗಿದೆ.
ಈ ಮಸೂದೆ ಕಾಯ್ದೆಯ ರೂಪದಲ್ಲಿ ಜಾರಿಯಾದ ದಿನದಿಂದ ಸಾರ್ವಜನಿಕ ಸ್ಥಳಗಳಲ್ಲಿ ಅಂತಹ ಅನಧಿಕೃತ ಧಾರ್ಮಿಕ ಕಟ್ಟಡಗಳ ನಿರ್ಮಾಣವನ್ನು ನಿರ್ಬಂಧಿಸುವುದು ಕೂಡ ಉದ್ದೇಶಗಳಲ್ಲಿ ಸೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.