ಹೊಸನಗರ: ವಿಧವೆ ಸೊಸೆಗೆ ಮರುವಿವಾಹ ಮಾಡಿರುವ ಅತ್ತೆ–ಮಾವ ಸಮಾಜಕ್ಕೆ ಮಾದರಿಯಾಗಿದ್ದಾರೆ.
ತಾಲ್ಲೂಕಿನ ಮಾರುತಿಪುರ ಗ್ರಾಮದ ಹೊಸಕೆಸರೆಯ ಕಡೇಕಲ್ ನರಸಿಂಹ ಮತ್ತು ಲೋಲಾಕ್ಷಿ ಅವರು ತಮ್ಮ ಸೊಸೆಗೆ ಮರು ವಿವಾಹ ಮಾಡಿಸಿದ್ದಾರೆ.
ಪುತ್ರನ ಸಾವಿನಿಂದ ಸೊಸೆಯ ಬಾಳು ಸಂಕಷ್ಟಕ್ಕೆ ಸಿಲುಕಿದಾಗ, ‘ಅವಳಿಗೊಂದು ಗಂಡಿನಾಸರೆ ಬೇಕು. ನಮಗೆ ಅವರೇ ಮುಂದೆ ದಾರಿ ದೀಪ’ ಎಂದೆಣಿಸಿ ಮರು ವಿವಾಹ ಮಾಡಿಸಿದ್ದಾರೆ.
ಅವರ ಪುತ್ರ ಪ್ರಶಾಂತ್ ಎರಡು ವರ್ಷಗಳ ಹಿಂದೆ ಅನಾರೋಗ್ಯದಿಂದ ನಿಧನ ಹೊಂದಿದ್ದರು. ಇದರಿಂದ ಪತ್ನಿ ವೀಣಾ (22) ಕನಸಿನ ಗೋಪುರ ಕುಸಿದು ಬಿದ್ದಿತ್ತು. ಪುತ್ರ ಯಶ್ಮಿಕ್‌ನ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆಯೂ ವೀಣಾ ಮೇಲಿತ್ತು. ಅತ್ತೆ ಮಾವಂದಿರಿಗೂ ಒಬ್ಬನೇ ಮಗನ ಸಾವನ್ನು ಅರಗಿಸಿಕೊಳ್ಳುವುದು ಕಷ್ಟವಾಗಿತ್ತು. ಸೊಸೆಗೆ ಅವರೇ ನಿಂತು ಮರುವಿವಾಹ ಮಾಡಿಸಿ, ವರನನ್ನು ಮನೆ ಮಗನಾಗಿ ಮನೆ ತುಂಬಿಸಿಕೊಂಡಿದ್ದಾರೆ.
ವೀಣಾ ಅವರ ಕೈಹಿಡಿದಿರುವ ಗಣೇಶ (27) ಅವರು ಹೊಸನಗರ ತಾಲ್ಲೂಕಿನ ಈಚಲಕೊಪ್ಪ ಸಮೀಪದ ಬಿಲ್ಗೋಡಿ ಗ್ರಾಮದವರು.
*
ಮಗನ ಭವಿಷ್ಯದ ಕುರಿತು ಚಿಂತೆಯಾಗಿತ್ತು. ಈಗ ಜೀವನ ಎದುರಿಸುವ ಧೈರ್ಯ ಬಂದಿದೆ. ಬಾಳಿಗೊಂದು ಹೊಸ ಅರ್ಥ ದೊರಕಿದೆ.
-ವೀಣಾ, ನರಸಿಂಹ ಲೋಕಾಕ್ಷಿ ದಂಪತಿ ಸೊಸೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.