ಬೆಂಗಳೂರು: ‘ಕೋವಿಡ್ ಪೀಡಿತರಿಗೆ ಅಗತ್ಯವಿರುವ ‘ರೆಮ್‌ಡಿಸಿವಿರ್’ ಔಷಧ ಹಂಚಿಕೆಯಲ್ಲಿ ಪಾರದರ್ಶಕತೆ ತರಲು ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಿಸಲಾಗಿದೆ. ಸೋಂಕಿತ ವ್ಯಕ್ತಿಯ ಹೆಸರಿನಲ್ಲಿ ಯಾವ ಆಸ್ಪತ್ರೆಗೆ ಔಷಧ ಹಂಚಿಕೆ ಮಾಡಲಾಗಿದೆ ಎಂಬ ಬಗ್ಗೆ ಇನ್ನುಮುಂದೆ ದೂರವಾಣಿ ಸಂದೇಶ ರವಾನೆಯಾಗುತ್ತದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
‘ರೆಮ್‌ಡಿಸಿವಿರ್’ ಔಷಧಕ್ಕೆ ಸಂಬಂಧಿಸಿದಂತೆ ಸರ್ಕಾರವು covidwar.karnataka.gov.in/service2 ಪೋರ್ಟಲ್ ಅಭಿವೃದ್ಧಿಪಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುಧಾಕರ್, ‘ಸೋಂಕಿತ ವ್ಯಕ್ತಿಯ ಎಸ್ಆರ್‌ಎಫ್ ಐಡಿಗೆ ಔಷಧ ಹಂಚಿಕೆಯಾಗಿ, ಆಸ್ಪತ್ರೆ ಅದನ್ನು ಆ ವ್ಯಕ್ತಿಯ ಚಿಕಿತ್ಸೆಗೆ ಬಳಸದಿದ್ದಲ್ಲಿ ಸರ್ಕಾರಕ್ಕೆ ವರದಿ ಮಾಡುವ ಆಯ್ಕೆಯನ್ನೂ ಪೋರ್ಟಲ್‌ನಲ್ಲಿ ನೀಡಲಾಗಿದೆ. ಕಾಳಸಂತೆಯಲ್ಲಿ ಮಾರಾಟ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಇದು ಸಹಕಾರಿಯಾಗಲಿದೆ’ ಎಂದು ಹೇಳಿದ್ದಾರೆ.
ಹಾಸಿಗೆ ಸಂಖ್ಯೆ ಹೆಚ್ಚಳ: ರಾಜ್ಯದಲ್ಲಿ ಕೋವಿಡ್ ಕಾಣಿಸಿಕೊಳ್ಳುವ ಮೊದಲು ಆರೋಗ್ಯ ಇಲಾಖೆಯಡಿ 1,970 ಹಾಸಿಗೆಗಳು ಆಮ್ಲಜನಕ ಸಂಪರ್ಕ ಹೊಂದಿದ್ದವು. ಈಗ ಆ ಸಂಖ್ಯೆ 23,971ಕ್ಕೆ ಏರಿಕೆಯಾಗಿದೆ. ಅದೇ ರೀತಿ, ತೀವ್ರ ನಿಗಾ ಘಟಕದ (ಐಸಿಯು) ಹಾಸಿಗೆಗಳ ಸಂಖ್ಯೆ444 ರಿಂದ 1,145ಕ್ಕೆ ಹೆಚ್ಚಳವಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಕೂಡ ಹಾಸಿಗೆಗಳ ಸಂಖ್ಯೆಯನ್ನು ಏರಿಕೆ ಮಾಡಲಾಗಿದೆ.
‘ಕೋವಿಡ್ ನಂತರದ ಕಾಲದಲ್ಲಿ ಆರೋಗ್ಯ ಮೂಲಸೌಕರ್ಯದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಆರ್ಥಿಕ ಸಂಕಷ್ಟವಿದ್ದರೂ ಹೆಚ್ಚು ಸಂಪನ್ಮೂಲಗಳನ್ನು ಬಳಸಿ, ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಗಮನಹರಿಸಲಾಗಿದೆ. ಇದರಿಂದ ಭವಿಷ್ಯದಲ್ಲಿ ‘ಆರೋಗ್ಯ ಕರ್ನಾಟಕ’ ನಿರ್ಮಾಣವಾಗಲಿದೆ’ ಎಂದು ಸುಧಾಕರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.