ADVERTISEMENT

ಜಾಫರ್ ಷರೀಫ್: ರೈಲ್ವೆ ಗೇಜ್ ಪರಿವರ್ತನೆಯ ಹರಿಕಾರ, ಸಂಸದರ ಅನುದಾನ ಬಳಕೆಗೆ ಮಾದರಿ

ನಿಷ್ಠುರ ಮಾತಿನ ಚತುರ ರಾಜಕಾರಿಣಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2018, 8:55 IST
Last Updated 25 ನವೆಂಬರ್ 2018, 8:55 IST
   

ಬೆಂಗಳೂರು: ಸಂಸದರಾಗಿ, ರೈಲ್ವೆ ಸಚಿವರಾಗಿ ರಾಜ್ಯದ ಜನರಿಗೆ ಚಿರಪರಿಚಿತರಾಗಿದ್ದಸಿ.ಕೆ. ಜಾಫರ್‌ ಷರೀಫ್ (ಚಳ್ಳಕೆರೆ ಕರೀಂ ಜಾಫರ್ ಷರೀರ್)ಅವರ ಸಾವಿನೊಂದಿಗೆ ನಾಡು ಹಿರಿಯ ನಾಯಕರೊಬ್ಬರನ್ನು ಕಳೆದುಕೊಂಡಿದೆ. ಚುನಾವಣೆಯ ಹೊಸಿಲಲ್ಲಿ ಕಾಂಗ್ರೆಸ್‌ ಪಾಲಿಗೆ ಇದು ಆಘಾತಕಾರಿಸಂಗತಿಯೂ ಹೌದು.

ದೇಶದ ರೈಲ್ವೆ ಮಾರ್ಗ ಅಭಿವೃದ್ಧಿ, ಗೇಜ್ ಪರಿವರ್ತನೆ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಶಿಕ್ಷಣ ಸಂಸ್ಥೆಗಳ ಸುಧಾರಣೆಗೆ ಅಪಾರ ಕೊಡುಗೆ ನೀಡಿದ್ದರು. ಯಲಹಂಕ ರೈಲ್ವೆ ನಿಲ್ದಾಣದ ಸಮೀಪ ಇರುವ 'ರೈಲು ಮತ್ತು ಗಾಲಿ ಕಾರ್ಖಾನೆ' ಸ್ಥಾಪನೆಯಾಗಲು ಜಾಫರ್ ಷರೀಫ್ ಶ್ರಮಿಸಿದ್ದರು.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಅವರ ಹುಟ್ಟೂರು (ಜನನ: ನ.3, 1933). ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ಕಾಂಗ್ರೆಸ್ ಇಬ್ಭಾಗವಾದಾಗ ಇಂದಿರಾ ಗಾಂಧಿ ಬಣದೊಂದಿಗೆ ಗುರುತಿಸಿಕೊಂಡರು. ಇಂದಿರಾ ಗಾಂಧಿಯ ಆಪ್ತವಲಯದಲ್ಲಿದ್ದ ಜಾಫರ್ ಬೆಂಗಳೂರು ಉತ್ತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.

ADVERTISEMENT

ಪ್ರಧಾನಿ ಪಿ.ವಿ.ನರಸಿಂಹರಾವ್ ಸಚಿವ ಸಂಪುಟದಲ್ಲಿ ಷರೀಫ್ ಅವರು (1991- 1995) ರೈಲ್ವೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ರಾಜ್ಯದಲ್ಲಿ ರೈಲ್ವೇ ಗೇಜ್ ಪರಿವರ್ತನೆಗೆ ಆದ್ಯತೆ ಕೊಟ್ಟಿದ್ದರು. 2004ರ ಲೋಕಸಭೆ ಚುನಾವಣೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಸಾಂಗ್ಲಿಯಾನ ವಿರುದ್ಧ ಸೋಲನುಭವಿಸಿದ ನಂತರ ತೆರೆಮರೆಗೆ ಸರಿದಿದ್ದರು. ನಂತರದ ದಿನಗಳಲ್ಲಿ ಗೆಲುವು ಅವರಿಗೆ ಮರೀಚಿಕೆಯೇ ಆಯಿತು.

ಸಂಸದರ ಪ್ರದೇಶಾಭಿವೃದ್ಧಿಅನುದಾನವನ್ನು ಸಾರ್ಥಕ ಕಾರ್ಯಗಳಿಗೆ ಬಳಕೆ ಮಾಡಿದ ದಾಖಲೆಯೂ ಅವರ ಹೆಸರಿನಲ್ಲಿದೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಶಾಲೆ, ಕಾಲೇಜು, ಕಂಪ್ಯೂಟರ್ ಶಿಕ್ಷಣ ಕೇಂದ್ರಗಳನ್ನು ಅಭಿವೃದ್ಧಿಪಡಿಸಿದ್ದರು. 1999ರಲ್ಲಿ ಕಿರಿಯ ಪುತ್ರ, 2008ರಲ್ಲಿ ಪತ್ನಿ ನಿಧನರಾಗಿದ್ದರು. 2009ರಲ್ಲಿ ಲೋಕಸಭೆ ಚುನಾವಣೆಗೆ ಕೇವಲ ಮೂರು ದಿನಗಳ ಮೊದಲು ಹಿರಿಯ ಪುತ್ರನನ್ನು ಕಳೆದುಕೊಂಡಿದ್ದರು.

ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಡನೆ ಆಪ್ತ ಸಂಬಂಧ ಹೊಂದಿದ್ದರೂ ಕಾಂಗ್ರೆಸ್‌ಗೆ ಅವರ ನಿಷ್ಠೆ ಮೀಸಲಾಗಿತ್ತು. ಆದರೆ ಪಕ್ಷ ತಮ್ಮನ್ನು ನಿರ್ಲಕ್ಷಿಸುತ್ತಿದೆ ಎನಿಸಿದಾಗಲೆಲ್ಲಾ ಮುಂಚೂಣಿ ನಾಯಕರಿಗೆ ಇರಿಸುಮುರಿಸಾಗುವ ಹೇಳಿಕೆಗಳನ್ನು ನೀಡುವ ಮೂಲಕ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು. ಇದು 'ಜಾಫರ್ ಷರೀಫ್ ಸಿಂಡ್ರೋಮ್' ಎಂದು ಒಂದು ರಾಜಕೀಯ ಪರಿಭಾಷೆಯಾಗಿಯೇ ಬೆಳೆದಿದೆ.ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಇಂಥ ಪ್ರಸಂಗಗಳು ಹಲವು ಬಾರಿ ನಡೆದಿದ್ದವು. ಜೆಡಿಎಸ್ ಅಥವಾ ಬಿಜೆಪಿ ಸೇರಬಹುದು ಎನ್ನುವ ಮಾತುಗಳು ಕೇಳಿಬರುತ್ತಿದ್ದವು.

2014ರ ಲೋಕಸಭೆ ಚುನಾವಣೆಯಲ್ಲಿ ಜಾಫರ್ ಷರೀಫ್ ಮೈಸೂರು-ಕೊಡಗು ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್ ಪಡೆದು ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಚಲಾವಣೆಗೆ ಬಂದಿದ್ದವು. ಆದರೆ ಕೊನೆಗಳಿಗೆಯಲ್ಲಿ ಮನಸ್ಸು ಬದಲಿಸಿದ್ದರು.

‘ಜಾಫರ್‌ ಷರೀಫ್‌ ಅವರು ಜೆಡಿಎಸ್‌ ಅಭ್ಯರ್ಥಿಯಾಗುತ್ತೇನೆ ಎಂದು ನಮಗೆ ಮಾತು ಕೊಟ್ಟಿದ್ದರು. ಈಗ ಕೈಕೊಟ್ಟು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಮತ್ತೊಬ್ಬ ಅಭ್ಯರ್ಥಿಯನ್ನು ಹುಡುಕಿ ಕಣಕ್ಕಿಳಿಸಬೇಕಾದ ಅಗ್ನಿಪರೀಕ್ಷೆ ದೇವೇಗೌಡನಿಗೆ ಎದುರಾಗಿದೆ. ನಾನು ನ್ಯಾಯವಾಗಿ ನಡೆದುಕೊಂಡಿದ್ದರೆ ಪರೀಕ್ಷೆಯಲ್ಲಿ ಗೆಲ್ಲುತ್ತೇನೆ’ ಎಂದು ದೇವೇಗೌಡರು ಹಾಸನದಲ್ಲಿ ಬೇಸರದಿಂದ ಮಾತನಾಡಿದ್ದರು.

ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ನಂತರ ರಾಜ್ಯ ಕಾಂಗ್ರೆಸ್ ಸಮಿತಿ ತಮ್ಮನ್ನು ಕಡೆಗಣಿಸುತ್ತಿದೆ ಎಂಬ ಅಸಮಾಧಾನ ಅವರಲ್ಲಿ ನೆಲೆನಿಂತಿತ್ತು. ರಾಜ್ಯ ನಾಯಕರಿಗೆ ಸಡ್ಡು ಹೊಡೆದು 2012ರಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ತಮ್ಮ ಮೊಮ್ಮಗನಿಗೆ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರ. ಈ ಮೂಲಕ ಹೈಕಮಾಂಡ್ ಮಟ್ಟದಲ್ಲಿ ತಮ್ಮ ಪ್ರಭಾವ ಇನ್ನೂ ಕುಗ್ಗಿಲ್ಲ ಎಂಬುದನ್ನು ಸಾಬೀತುಪಡಿಸಿದ್ದರು.

ಜಾಫರ್ ಷರೀಫ್ ಅವರ ಸಾವಿನೊಂದಿಗೆ ನಾಡು ಹಿರಿಯ ರಾಜಕಾರಿಣಿಯೊಬ್ಬರನ್ನು ಕಳೆದುಕೊಂಡಂತೆ ಆಗಿದೆ.ಸಂಸದರಾಗಿ, ರೈಲ್ವೆ ಸಚಿವರಾಗಿ, ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕನಾಗಿ ರಾಜಕಾರಣದಲ್ಲಿ ಬಹುಕಾಲ ಬೆಳಗಿದ ಜಾಫರ್ ಷರೀಫ್ ಅವರನ್ನು ರಾಜ್ಯ ನೆನಪಿನಲ್ಲಿ ಇರಿಸಿಕೊಳ್ಳುತ್ತದೆ.

ಜಾಫರ್‌ ಬದುಕು ಸಾಗಿಬಂದ ಹಾದಿ

1971- ಮೊದಲ ಬಾರಿ ಸಂಸದರಾಗಿಲೋಕಸಭೆಗೆ ಆಯ್ಕೆ

1977- ಲೋಕಸಭೆಗೆ ಎರಡನೇ ಬಾರಿ ಆಯ್ಕೆ

1980- ಲೋಕಸಭೆಗೆಮೂರನೇ ಬಾರಿ ಆಯ್ಕೆ

1980-84- ರೈಲ್ವೆ ಖಾತೆ ರಾಜ್ಯ ಸಚಿವ

1984- ಲೋಕಸಭೆಗೆ ನಾಲ್ಕನೇ ಬಾರಿ ಆಯ್ಕೆ, ನೀರಾವರಿ ಖಾತೆ ರಾಜ್ಯ ಸಚಿವ

1988-89- ಕಲ್ಲಿದ್ದಲು ಖಾತೆ ರಾಜ್ಯ ಸಚಿವ

1989- ಲೋಕಸಭೆಗೆ ಐದನೇ ಬಾರಿ ಆಯ್ಕೆ

1989-90- ಸಾರ್ವಜನಿಕ ಉದ್ಯಮಗಳ ಸಮಿತಿ ಸದಸ್ಯ, ಸರ್ಕಾರದ ಖಾತ್ರಿ ಸಮಿತಿಯ ಸದಸ್ಯ, ವಾಣಿಜ್ಯ ಸಲಹಾ ಸಮಿತಿ ಸದಸ್ಯ, ಆರೋಗ್ಯ-ಇಂಧನ-ಅಣುಶಕ್ತಿ ಮತ್ತು ಮಾಧ್ಯಮ ವ್ಯವಹಾರಗಳಾ ಖಾತೆ ಸಲಹಾ ಸಮಿತಿ ಸದಸ್ಯ

1991-95- ಲೋಕಸಭೆಗೆ ಆರನೇ ಬಾರಿಆಯ್ಕೆ, ರೈಲ್ವೆ ಖಾತೆ ಸಚಿವ

1998- ಲೋಕಸಭೆಗೆ ಏಳನೇ ಬಾರಿ ಆಯ್ಕೆ, ಪತ್ರಿಕಾ ವ್ಯವಹಾರ ಮತ್ತು ಸ್ವತಂತ್ರ ಸೈನಿಕ ಸಮ್ಮಾನ್ ಪಿಂಚಣಿ ಯೋಜನೆ ಸಮಿತಿಗಳ ಸದಸ್ಯ

2004- ಲೋಕಸಭೆ ಚುನಾವಣೆಯಲ್ಲಿ ಪರಾಭವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.