ADVERTISEMENT

ಅರಸು ಅವರನ್ನು ಸ್ಮರಿಸಲಿಲ್ಲ, ಉತ್ತರಾಧಿಕಾರಿ ಬೆಳಸಲಿಲ್ಲ: ದಿನೇಶ್ ಅಮೀನ್ ಮಟ್ಟು

ಬಿ.ವಿ. ಕಕ್ಕಿಲ್ಲಾಯ ಜನ್ಮಶತಾಬ್ದಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 13:26 IST
Last Updated 11 ಆಗಸ್ಟ್ 2019, 13:26 IST
ದಿನೇಶ್ ಅಮೀನ್‌ ಮಟ್ಟು
ದಿನೇಶ್ ಅಮೀನ್‌ ಮಟ್ಟು   

ಮಂಗಳೂರು: ‘ಭೂ ಸುಧಾರಣೆ ಕಾಯಿದೆ ತಂದ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರನ್ನು ಸ್ಮರಿಸಲಿಲ್ಲ. ಪಕ್ಷದಲ್ಲಿ ಉತ್ತರಾಧಿಕಾರಿಗಳನ್ನೂ ಬೆಳೆಸಲಿಲ್ಲ. ಇದುವೇ ಕಾಂಗ್ರೆಸ್‌ನ ಇಂದಿನ ಸ್ಥಿತಿಗೆ ಕಾರಣವಾಗಿದೆ’ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ ಮಟ್ಟು ಹೇಳಿದರು.

ನಗರದಲ್ಲಿ ಭಾನುವಾರ ಬಿ.ವಿ.ಕಕ್ಕಿಲಾಯ ಶತಾಬ್ದಿ ಕಾರ್ಯಕ್ರಮದಲ್ಲಿ ‘ಕರ್ನಾಟಕದಲ್ಲಿ ಭೂ ಸುಧಾರಣೆ ಎಲ್ಲಿಂದ? ಎಲ್ಲಿಗೆ?’ ಕುರಿತ ಚರ್ಚೆಯಲ್ಲಿ ಅವರು ಮಾತನಾಡಿದರು.

‘ಈ ಅವನತಿಯಲ್ಲಿ ಕರಾವಳಿಯ ತ್ರಿಮೂರ್ತಿಗಳ (ಜನಾರ್ದನ ಪೂಜಾರಿ, ವೀರಪ್ಪ ಮೊಯಿಲಿ ಮತ್ತು ಆಸ್ಕರ್‌ ಫೆರ್ನಾಂಡಿಸ್‌) ಕೊಡುಗೆ ಅಪಾರ’ ಎಂದ ಅವರು, ‘ಪ್ರಜಾವಾಣಿ’ಯಲ್ಲಿ ‘ಕೂಡಿ ಕಟ್ಟಿದ್ದನ್ನು ಒಡೆದು ಮುರಿದರು’ ಎಂಬ ಅಂಕಣ ಬರೆದಿದ್ದೆನು. ಅಂದು ಡಿಲೀಟ್‌ ಮಾಡಿದ್ದ ಅದರ ಕೊನೆ ಪ್ಯಾರಾವನ್ನು ಈ ಹೇಳುತ್ತೇನೆ. ‘ತ್ರಿಮೂರ್ತಿಗಳು ಹೈಕಮಾಂಡ್‌ ಹೊಗಳುತ್ತಾ ಕಾಂಗ್ರೆಸ್ ಸೃಷ್ಟಿ, ಪಾಲನೆಯ ಜೊತೆ ಲಯವನ್ನೂ ಮಾಡಿದ್ದಾರೆ’ ಎಂದರು.

ADVERTISEMENT

‘ಅರಸು ಭೂ ಸುಧಾರಣೆಯಿಂದ ಕರಾವಳಿಯಲ್ಲಿ ಲಕ್ಷಕ್ಕೂ ಅಧಿಕ ಗೇಣಿದಾರರಿಗೆ ಭೂಮಿ ಸಿಕ್ಕಿತ್ತು. ಗೇಣಿದಾರ ಸಮುದಾಯದ ವ್ಯಕ್ತಿಗೆ ಉತ್ತರಾಧಿಕಾರ ನೀಡಬೇಕು ಎಂಬ ಕಾರಣಕ್ಕಾಗಿ ಮೊಯಿಲಿ ಮೂಲಕ ಜನಾರ್ದನ ಪೂಜಾರಿಯನ್ನು ಅರಸು ಸಂಸದರನ್ನಾಗಿ ಮಾಡಿಸಿದರು. ಭೂ ಸುಧಾರಣೆ, ಮೀಸಲಾತಿ, ವಂಚಿತ ಸಮುದಾಯಗಳಿಗೆ ಅಧಿಕಾರ ನೀಡುವ ಕೆಲಸಗಳನ್ನು ಅರಸು ಮಾಡಿದ್ದರು. ಅವರದ್ದು ಅವಸರದ ಸುಧಾರಣೆಯಾಗಿತ್ತು’ ಎಂದರು.

‘ಆದರೆ, ಅರಸು ಕಾಂಗ್ರೆಸ್ ಬಿಟ್ಟ ಬಳಿಕ, ಅರಸನ್ನು ಸ್ಮರಿಸಿದರೆ ಇಂದಿರಾಗೆ ಮುನಿಸು ಉಂಟಾಗಬಹದು ಎಂದು ತ್ರಿಮೂರ್ತಿಗಳು ಆ ಕಾರ್ಯಗಳನ್ನೇ ಮೂಲೆಗುಂಪು ಮಾಡಿದರು. ಅದರಿಂದ ಪಕ್ಷ ಕರಾವಳಿಯಲ್ಲಿ ಇಂಥ ಸ್ಥಿತಿಗೆ ಬಂದಿದೆ’ ಎಂದರು.

‘ಕೃಷಿ ಲಾಭದಾಯಕವಲ್ಲದ ಕಾರಣ, ಭೂಮಿ ಪಡೆದ ಗೇಣಿದಾರ ಕುಟುಂಬಗಳು ಹೋರಾಟವನ್ನು ಸ್ಮರಿಸುತ್ತಿಲ್ಲ. ಕೆಲಸಕ್ಕಾಗಿ ಮನೆ ಬಿಟ್ಟು ಓಡಿ ಹೋದವರಿಂದಲೇ ಕರಾವಳಿ ಉದ್ಧಾರವಾಗಿವೆ. ಸರ್ಕಾರಗಳಿಂದ ಅಲ್ಲ. ಭೂ ಸುಧಾರಣೆಗಾಗಿ ‘ಕಾಗೋಡು’ ಹೋರಾಟ ಹಾಗೂ ಎಡ ಪಕ್ಷಗಳ ಕೊಡುಗೆ ಬಿಟ್ಟು ಬೇರೆ ಭಾರಿ ಚಳವಳಿಗಳು ನಡೆದಿಲ್ಲ. ಹೀಗಾಗಿ ಪುಕ್ಕಟೆ ಸಿಕ್ಕ ಭೂಮಿಯ ಬಗ್ಗೆ ಈಗಿನ ಯುವಜನತೆಗೆ ಕೃತಜ್ಞತೆಯೂ ಇಲ್ಲ’ ಎಂದರು.

‘ತಾಕತ್ತಿದ್ದರೆ, ನೀವೇ ಬರಬೇಕಿತ್ತು’
‘ಕನ್ಹಯ್ಯಾ ಕುಮಾರ್ ಪ್ರಶ್ನಿಸಲು ಯಾವುದೋ ಪಾಪದ ಹುಡುಗಿಯನ್ನು ಕಳುಹಿಸಿದ್ದಾರೆ. ಆತನನ್ನು ಸೈದ್ಧಾಂತಿಕ ಎದುರಿಸುವ ತಾಕತ್ತಿದ್ದರೆ, ಚಕ್ರವರ್ತಿ ಸೂಲಿಬೆಲೆ ಅಥವಾ ಮತ್ತಿತರರನ್ನು ನೇರವಾಗಿ ಕಳುಹಿಸಬೇಕಿತ್ತು. ಯಾರದೋ ಕಾರ್ಯಕ್ರಮಕ್ಕೆ ಯಾರನ್ನೂ ಛೂ ಬಿಟ್ಟು ಯುವಜನತೆಯನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ’ ಎಂದು ದಿನೇಶ್ ಅಮೀನ್‌ ಮಟ್ಟು ಸಂಘ ಪರಿವಾರದ ಸಂಘಟನೆಗಳಿಗೆ ಮಾರ್ಮಿಕವಾಗಿ ಟಾಂಗ್‌ ನೀಡಿದರು.

ಶನಿವಾರದ ಸಂವಾದದಲ್ಲಿ ಜೈ ಶ್ರೀರಾಮ್‌ ಘೋಷಣೆ ಕೂಗುವಂತೆ ಯುವತಿಯೊಬ್ಬಳು ಪ್ರಶ್ನಿಸಿದ್ದು, ಅದಕ್ಕೆ ಕನ್ಹಯ್ಯಾ ಕುಮಾರ್‌ ತಕ್ಷಣವೇ ಉತ್ತರಿಸಿರುವುದು ವೈರಲ್ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.