ಬೆಂಗಳೂರು: ಏಳು ವರ್ಷಗಳ ಹಿಂದೆ 104 ಉಪಗ್ರಹಗಳನ್ನು ಹೊತ್ತು ಉಡಾವಣೆಗೊಂಡಿದ್ದ ಪಿಎಸ್‌ಎಲ್‌ವಿ–37 ರಾಕೆಟ್‌ನ ಮೇಲಿನ ಹಂತ (ಅವಶೇಷ) ನಿರೀಕ್ಷೆಯಂತೆ ಭೂವಾತಾವರಣವನ್ನು ಪ್ರವೇಶಿಸಿದೆ. ಈ ಮೂಲಕ ಬಾಹ್ಯಾಕಾಶ ಅವಶೇಷಗಳ (ಸ್ಪೇಸ್ ಡೆರ್ಬೀಸ್) ನಿರ್ವಹಣೆಯಲ್ಲಿ ಇಸ್ರೊ ಮಹತ್ವದ ಯಶಸ್ಸನ್ನು ಸಾಧಿಸಿದೆ.
2017ರ ಫ್ರೆಬುವರಿಯಲ್ಲಿ ಕಾರ್ಟೊಸ್ಯಾಟ್–2 ಡಿ ಎಂಬ ದೊಡ್ಡ ಉಪಗ್ರಹದ ಜತೆಗೆ 103 ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿತ್ತು. ಈ ಉಡಾವಣೆ ಬಾಹ್ಯಾಕಾಶ ವಿಜ್ಞಾನದ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿತ್ತು.
ನಿಗದಿತ ಕಕ್ಷೆಗಳಿಗೆ ಉಪಗ್ರಹಗಳನ್ನು ಸೇರಿಸಿದ ಬಳಿಕ ರಾಕೆಟ್‌ನ ಮೇಲಿನ ಹಂತ (ಪಿಎಸ್4) ಕಕ್ಷೆಯಲ್ಲೇ ಉಳಿದಿತ್ತು. ಇದನ್ನು ನಿಯಮಿತವಾಗಿ ಗಮನಿಸಲಾಗುತ್ತಿತ್ತು. ಭೂವಾತಾವರಣದ ಸೆಳೆತದ ಕಾರಣ ಕ್ರಮೇಣ ಇದರ ಭ್ರಮಣದ ಎತ್ತರ ಕುಸಿಯುತ್ತಲೇ ಇತ್ತು. ಇದೇ ಸೆಪ್ಟೆಂಬರ್‌ವರೆಗೆ ಇಸ್ರೊ ಪಿಎಸ್4 ಮೇಲೆ ಕಣ್ಣಿಟ್ಟಿತ್ತು. ಇದರ ಕ್ಷಯಿಸುವಿಕೆ ಪ್ರಕ್ರಿಯೆ ಸಹಜ ಮತ್ತು ಅಕ್ಟೋಬರ್ ಮೊದಲ ವಾರ ಅದು ಭೂವಾತಾವರಣವನ್ನು ಪ್ರವೇಶಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಅವಶೇಷಗಳು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಬೀಳಲಿವೆ ಎಂದು ತಿಳಿಸಿದೆ.
ಬಾಹ್ಯಾಕಾಶದಲ್ಲಿ ಉಪಗ್ರಹಗಳ ಅವಶೇಷಗಳ ರಾಶಿ ಹೆಚ್ಚುತ್ತಿರುವುದನ್ನು ತಗ್ಗಿಸುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಮಾರ್ಗಸೂಚಿಯ ಅನ್ವಯ ಭಾರತ ನಡೆದುಕೊಂಡಿದೆ. ಯಾವುದೇ ಅವಶೇಷ 25 ವರ್ಷಗಳಿಗಿಂತ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಇರದಂತೆ ನೋಡಿಕೊಳ್ಳಬೇಕು ಎಂದು ಮಾರ್ಗಸೂಚಿ ಸ್ಪಷ್ಟವಾಗಿ ತಿಳಿಸಿದೆ ಎಂದೂ ಇಸ್ರೊ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.