ಬೆಂಗಳೂರು: ‘ಹೋಬಳಿಗೊಂದು ವಸತಿ ಶಾಲೆ ಆರಂಭಿಸಬೇಕು ಎಂದು ನಿರ್ಧರಿಸಲಾಗಿದ್ದು, ಈ ವರ್ಷದಲ್ಲಿ 20 ವಸತಿಶಾಲೆಗಳನ್ನು ಆರಂಭಿಸಲಾಗುತ್ತಿದೆ. ಅವುಗಳಲ್ಲಿ ಪರಿಶಿಷ್ಟ ಪಂಗಡಗಳಿಗೆ ನಾಲ್ಕು ಶಾಲೆಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಬಾಂಕ್ವೆಟ್ ಸಭಾಂಗಣದಲ್ಲಿ ಗುರುವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ವಾಲ್ಮೀಕಿ ಅವರಿಗೆ ಗೌರವ ಸೂಚಿಸುವ ಸಲುವಾಗಿ ರಾಯಚೂರು ವಿಶ್ವವಿದ್ಯಾಲಯವನ್ನು ‘ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಲಾಗುತ್ತದೆ’ ಎಂದರು.
ಬುಡಕಟ್ಟು ಸಂಸ್ಕೃತಿ ಕ್ಷೇತ್ರದಲ್ಲಿ ದುಡಿದ ಚಿತ್ರದುರ್ಗದ ಗಡ್ಡದಾರ ಹಟ್ಟಿಯ ಕಿಲಾರಿ ಜೋಗಯ್ಯ, ಸಾಮಾಜಿಕ ಕ್ಷೇತ್ರದಲ್ಲಿ ಚಾಮರಾಜನಗರದ ಗುಂಡ್ಲುಪೇಟೆಯ ಮದ್ದೂರು ಕಾಲೊನಿಯ ರತ್ನ ಎಸ್., ಬೆಳಗಾವಿಯ ರಾಜಶೇಖರ ತಳವಾರ, ಬೆಂಗಳೂರಿನ ಮಾಗಡಿ ರಸ್ತೆಯ ಕೆ.ಎಸ್.ಮೃತ್ಯುಂಜಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿನ ಸೇವೆಗಾಗಿ ವಿಜಯನಗರದ ಹರಪನಹಳ್ಳಿಯ ಟೀಚರ್ಸ್ ಕಾಲೊನಿಯ ರತ್ನಮ್ಮ ಬಿ.ಸೋಗಿ ಅವರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
‘ದೇಶದಲ್ಲಿ ಮಹಾಕಾವ್ಯಗಳನ್ನು ಬರೆದವರೆಲ್ಲಾ ತಳಸಮುದಾಯದವರೇ. ಮಹಾಭಾರತ ಬರೆದ ವ್ಯಾಸಮುನಿ ಬೆಸ್ತ ಸಮುದಾಯದವರು, ಶಾಕುಂತಲ ನಾಟಕ ಬರೆದ ಕಾಳಿದಾಸ ಕುರುಬ ಸಮುದಾಯದವರು, ರಾಮಾಯಣ ಬರೆದದ್ದು ಮಹರ್ಷಿ ವಾಲ್ಮೀಕಿ. ಆದರೆ ಅವರ ಪ್ರತಿಭೆಯನ್ನು ನಿರಾಕರಿಸುವ ಉದ್ದೇಶದಿಂದ ಅವರ ಸುತ್ತ ಒಂದು ಕತೆಯನ್ನು ಕಟ್ಟಲಾಗಿದೆ’ ಎಂದರು.
‘ಆ ಕಾಲದಲ್ಲಿ ತಳಸಮುದಾಯವರಿಗೆ ಶಿಕ್ಷಣ ನಿಷಿದ್ಧವಾಗಿತ್ತು. ಅಂಥದ್ದರಲ್ಲಿ ಸಂಸ್ಕೃತ ಕಲಿತು ಇವರೆಲ್ಲಾ ಮಹಾಕಾವ್ಯಗಳನ್ನು ಬರೆದಿದ್ದಾರೆ. 24,000 ಶ್ಲೋಕಗಳಿರುವ ರಾಮಾಯಣ ಬರೆದ ವಾಲ್ಮೀಕಿ ದರೋಡೆ ಮಾಡುತ್ತಿದ್ದರು ಎಂದು ಹೇಳುತ್ತಾರೆ. ಶಾಲಾ ಪಠ್ಯಪುಸ್ತಕಗಳಲ್ಲಿ ಇದನ್ನೇ ಹೇಳಿಕೊಂಡು ಬರಲಾಗಿದೆ. ಆದರೆ ದರೋಡೆ ಮಾಡಿಕೊಂಡು ಓಡಾಡುತ್ತಿದ್ದದ್ದೇ ನಿಜವಾಗಿದ್ದರೆ, ಅವರಿಂದ ಮಹಾಕಾವ್ಯ ಬರೆಯಲು ಸಾಧ್ಯವಿತ್ತೇ’ ಎಂದು ಪ್ರಶ್ನಿಸಿದರು.
‘ನಿಷೇಧದ ಮಧ್ಯೆಯೂ ಅವಕಾಶ ಸಿಕ್ಕಾಗ ಇವರೆಲ್ಲಾ ಕಲಿತರು. ಸಂವಿಧಾನವನ್ನು ಅಂಗೀಕರಿಸುವ ಮುನ್ನಾ ದಿನ ಬಾಬಾಸಾಹೇಬ್ ಅಂಬೇಡ್ಕರ್ ಅವರು, ರಾಜಕೀಯ ಸ್ವಾತಂತ್ರ್ಯವೇನೋ ಸಿಕ್ಕಿದೆ. ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಗಬೇಕೆಂದರೆ ಶಿಕ್ಷಣ ಬೇಕು ಎಂದು ಹೇಳಿದ್ದರು. ಹೀಗಾಗಿಯೇ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ತಳ ಸಮುದಾಯಗಳು ಮುಂದಕ್ಕೆ ಬರಬೇಕು ಎಂದೇ ಅವರ ಶಿಕ್ಷಣಕ್ಕೆ ಆದ್ಯತೆ ನೀಡಿದ್ದೇವೆ’ ಎಂದರು.
‘ಬಿಜೆಪಿಯವರು ಸಮಾನತೆ, ಜಾತಿವಾದ ಇಲ್ಲ ಎಂದೆಲ್ಲಾ ಹೇಳುತ್ತಾರೆ. ಅದನ್ನು ಹೋಗಲಾಡಿಸಲು ಏನಾದರೂ ಕೆಲಸ ಮಾಡಿದ್ದಾರಾ? ನಾವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಎಂದು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಉಪಯೋಜನೆಗಳನ್ನು ಕಡ್ಡಾಯ ಮಾಡಲು ಜಾರಿಗೆ ತಂದಿದ್ದೇವೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 11 ವರ್ಷವಾಗುತ್ತಿದೆ, ಇಂತಹ ಕಾಯ್ದೆಯನ್ನು ಏಕೆ ಜಾರಿಗೆ ತಂದಿಲ್ಲ. ಬಿಜೆಪಿ ಆಡಳಿತದಲ್ಲಿರುವ ಒಂದಾದರೂ ರಾಜ್ಯದಲ್ಲಿ ಜಾರಿಗೆ ತಂದಿದ್ದಾರಾ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.