ADVERTISEMENT

ಯತ್ನಾಳ್ ಅಭಿಯಾನಕ್ಕೆ ಕಡಿವಾಣ ಹಾಕಿ: ವರಿಷ್ಠರಿಗೆ ವಿಜಯೇಂದ್ರ ನಿಷ್ಠರ ಬಣದ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 21:46 IST
Last Updated 20 ನವೆಂಬರ್ 2024, 21:46 IST
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿಯ ಮಾಜಿ ಸಚಿವರು ಮತ್ತು ಮಾಜಿ ಶಾಸಕರು.
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿಯ ಮಾಜಿ ಸಚಿವರು ಮತ್ತು ಮಾಜಿ ಶಾಸಕರು.   

ಬೆಂಗಳೂರು: ವಕ್ಫ್ ನೋಟಿಸ್‌ ವಿರುದ್ಧ ಪ್ರತ್ಯೇಕ ಹೋರಾಟ ನಡೆಸುವುದಾಗಿ ಪ್ರಕಟಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣಕ್ಕೆ ಬಿ.ವೈ.ವಿಜಯೇಂದ್ರ ನಿಷ್ಠರ ಬಣ ಸಡ್ಡು ಹೊಡೆದಿದೆ. ಯತ್ನಾಳ ಬಣದ ಜನ ಜಾಗೃತಿ ಅಭಿಯಾನಕ್ಕೆ ಕಡಿವಾಣ ಹಾಕಬೇಕು ಎಂದು ಪಕ್ಷದ ವರಿಷ್ಠರನ್ನು ಆಗ್ರಹಿಸಿದೆ.

ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ನಿವಾಸದಲ್ಲಿ ಬುಧವಾರ ವಿಜಯೇಂದ್ರ ನಿಷ್ಠರ ಸಭೆ ನಡೆಯಿತು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ‘ಅಗತ್ಯ ಬಿದ್ದರೆ ದೆಹಲಿಗೆ ಹೋಗಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಅವರನ್ನು ಭೇಟಿ ಮಾಡಿ ರಾಜ್ಯದ ಬೆಳವಣಿಗೆ ಕುರಿತು ಚರ್ಚೆ ನಡೆಸುತ್ತೇವೆ’ ಎಂದರು.

ADVERTISEMENT

‘ವಕ್ಫ್ ಮಂಡಳಿ ವಿರುದ್ಧ ಯತ್ನಾಳ್ ನೇತೃತ್ವದ ಭಿನ್ನಮತೀಯರು ನಡೆಸಲು ಉದ್ದೇಶಿಸಿರುವ ಜನಜಾಗೃತಿ ಅಭಿಯಾನ ತಡೆಯಲು ತಕ್ಷಣವೇ ಮಧ್ಯಪ್ರವೇಶಿಸಬೇಕು. ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ವಿವಿಧ ತಂಡಗಳಲ್ಲಿ ನಡೆಯುವ ‘ನಮ್ಮ ಭೂಮಿ ನಮ್ಮ ಹಕ್ಕು’ ಹೋರಾಟದಲ್ಲಿ ಅವರು ಭಾಗಿಯಾಗಬೇಕೆಂದು ವರಿಷ್ಠರಿಗೆ ಮನವಿ ಮಾಡಲು ತೀರ್ಮಾನಿಸಲಾಯಿತು’ ಎಂದು ಅವರು ತಿಳಿಸಿದರು.

‘ಪಕ್ಷದ ಅಧ್ಯಕ್ಷರೇ ಹೋರಾಟ ಮತ್ತು ಪ್ರತಿಭಟನೆಗಳಿಗೆ ಸಾರಥ್ಯ ವಹಿಸುವುದು ಸಂಪ್ರದಾಯ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಯತ್ನಾಳ, ರಮೇಶ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ ಮತ್ತಿತರರು ಅಭಿಯಾನ ನಡೆಸಲು ಹೊರಟಿದ್ದು, ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು’ ಎಂದರು.

‘ಬಿ.ಎಸ್‌.ಯಡಿಯೂರಪ್ಪ ಮತ್ತು ವಿಜಯೇಂದ್ರ ನಾಯಕತ್ವದ ವಿರುದ್ಧ ಅಪಸ್ವರ ಎತ್ತುತ್ತಿರುವ ಬಗ್ಗೆಯೂ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ ರೇಣುಕಾಚಾರ್ಯ,  ‘ವಕ್ಫ್‌ ವಿರುದ್ಧ ಹೋರಾಟ ನಡೆಸಲು ತಂಡ ರಚನೆ ಮಾಡುತ್ತಾರೆ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ, ಅದಕ್ಕೆ ಪರ್ಯಾಯವಾಗಿ ಅಭಿಯಾನ ನಡೆಸಲು ಮುಂದಾಗಿದ್ದಾರೆ. ವಾಸ್ತವವಾಗಿ ಇದನ್ನು ಹೈಜಾಕ್ ಮಾಡಿದವರೇ ಯತ್ನಾಳ್‌ ಮತ್ತು ಅವರ ತಂಡ’ ಎಂದರು.

ಸಭೆಯಲ್ಲಿ ಮಾಜಿ ಸಚಿವ ಬಿ.ಸಿ.ಪಾಟೀಲ, ಎಸ್.ಕೆ.ಬೆಳ್ಳುಬ್ಬಿ, ಮಾಡಾಳ್ ವಿರೂಪಾಕ್ಷಪ್ಪ, ರೂಪಾಲಿನಾಯ್ಕ್, ಸುನಿಲ್ ವಲ್ಯಾಪುರೆ, ಸುನಿಲ್ ನಾಯ್ಕ, ನಾಗೇಂದ್ರ, ವೈ.ಸಂಪಂಗಿ, ನಿರಂಜನಕುಮಾರ್, ವೆಂಕಟಮುನಿಯಪ್ಪ ಸೇರಿ ಹಲವು ಮಾಜಿ ಶಾಸಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.