ADVERTISEMENT

ಕೊಲೆ ಮುಚ್ಚಿ ಹಾಕಲು ಬೃಹತ್ ಮೊತ್ತ ಬಳಕೆ: ₹70 ಲಕ್ಷ ಮೂಲ ಪತ್ತೆಗೆ ಐ.ಟಿ ತನಿಖೆ?

ಕಸ್ಟಡಿ ಅಂತ್ಯ ಸಂಭವ

ಆದಿತ್ಯ ಕೆ.ಎ
Published 21 ಜೂನ್ 2024, 23:30 IST
Last Updated 21 ಜೂನ್ 2024, 23:30 IST
ದರ್ಶನ್‌
ದರ್ಶನ್‌   

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣ ಮುಚ್ಚಿ ಹಾಕಲು ಆರೋಪಿಗಳು ₹70 ಲಕ್ಷ ಹಣ ಬಳಕೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದ್ದು, ಹಣದ ಮೂಲ ಪತ್ತೆಗೆ ತನಿಖಾಧಿಕಾರಿಗಳು ಮುಂದಾಗಿದ್ದಾರೆ.

ಪ್ರಕರಣದಲ್ಲಿ ದೊಡ್ಡ ಮೊತ್ತದ ಹಣವನ್ನು ಜಪ್ತಿ ಮಾಡಲಾಗಿದೆ. ಬೃಹತ್ ಮೊತ್ತದ ನಗದು ಕೈಬದಲಾವಣೆಯಾಗಿರುವ ಕುರಿತು ಪೊಲೀಸರು ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹಣದ ವಹಿವಾಟಿನ ಬಗ್ಗೆ ಐ.ಟಿ ಅಧಿಕಾರಿಗಳು ತನಿಖೆ ಆರಂಭಿಸುವ ಸಾಧ್ಯತೆ ಇದೆ. 

‘ಹಣದ ಮೂಲ ಪತ್ತೆ ಮಾಡುವಂತೆ ಆದಾಯ ತೆರಿಗೆ ಇಲಾಖೆಯ ಆಧಿಕಾರಿಗಳಿಗೆ ಪಶ್ಚಿಮ ವಿಭಾಗದ ಪೊಲೀಸರು ಕೋರಿದ್ದಾರೆ. ಐ.ಟಿ ಅಧಿಕಾರಿಗಳು, ಹಣ ಯಾರಿಗೆಲ್ಲಾ ವರ್ಗಾವಣೆಗೊಂಡಿತ್ತು ಎಂಬುದರ ಕುರಿತು ತನಿಖೆ ನಡೆಸಲಿದ್ದಾರೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

‘ಆರೋಪಿ ಪ್ರದೋಷ್‌ ಮೂಲಕ, ಪೊಲೀಸರಿಗೆ ಶರಣಾದ ಆರೋಪಿಗಳಾದ ಕಾರ್ತಿಕ್, ರಾಘವೇಂದ್ರ, ನಿಖಿಲ್, ಕೇಶವಮೂರ್ತಿಗೆ ತಲಾ ₹5 ಲಕ್ಷವನ್ನು ದರ್ಶನ್‌ ನೀಡಿದ್ದರು. ಆ ₹20 ಲಕ್ಷ ಸೇರಿ ಒಟ್ಟು ₹30 ಲಕ್ಷವನ್ನು ಜೂನ್ 18ರಂದು ಪೊಲೀಸರು ಜಪ್ತಿ ಮಾಡಿದ್ದರು. ಪ್ರದೋಷ್‌ ಮನೆಯಲ್ಲೂ ಅಪಾರ ಪ್ರಮಾಣದ ನಗದು ಪತ್ತೆಯಾಗಿತ್ತು. ಪ್ರಕರಣದಿಂದ ಪಾರಾಗಲು, ಮಾಜಿ ಕಾರ್ಪೊರೇಟರ್‌ ಸಹ ಆಗಿರುವ ತಮ್ಮ ಸ್ನೇಹಿತ ಮೋಹನ್‌ ರಾಜ್‌ ಎಂಬವರಿಂದ ದರ್ಶನ್‌ ₹40 ಲಕ್ಷ ಸಾಲ ಪಡೆದಿದ್ದರು. ಆ ಪೈಕಿ ದರ್ಶನ್‌ ಅವರ ರಾಜರಾಜೇಶ್ವರಿನಗರದ ನಿವಾಸದಿಂದ ₹37.40 ಲಕ್ಷವನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರಿಗೆ ಪತಿ ನೀಡಿದ್ದ ₹3 ಲಕ್ಷ ಜಪ್ತಿ ಮಾಡಲಾಗಿದೆ. ಈ ಹಣದ ಮೂಲ ಪತ್ತೆಗೆ ಅಧಿಕಾರಿಗಳು ಮುಂದಾಗಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ದರ್ಶನ್‌ ಅವರು ತಮ್ಮ ನಿವಾಸದಲ್ಲಿದ್ದ ಬ್ಯಾಗ್‌ನಲ್ಲಿ ಹಣ ಇಟ್ಟಿದ್ದರು. ಸ್ಥಳ ಮಹಜರು ವೇಳೆ ಅದನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ಮೋಹನ್‌ರಾಜ್‌ ನಾಪತ್ತೆ

ದರ್ಶನ್‌ಗೆ ಹಣ ನೀಡಿದ್ದರು ಎನ್ನಲಾಗಿರುವ ಮೋಹನ್‌ರಾಜ್  ನಾಪತ್ತೆ ಆಗಿದ್ದಾರೆ. ಅವರ ಮೊಬೈಲ್‌ ಸ್ವಿಚ್ಡ್ ಆಫ್‌ ಆಗಿದೆ. ಮೊಬೈಲ್‌ ಲೊಕೇಶನ್‌ ಪತ್ತೆ ಹಚ್ಚಲಾಗುತ್ತಿದೆ. ವಿಚಾರಣೆಗೆ ಬರುವಂತೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ದರ್ಶನ್‌ ಅವರಿಗೆ ಮೋಹನ್‌ರಾಜ್‌ ಯಾವ ಸ್ಥಳದಲ್ಲಿ, ಹೇಗೆ ಹಣ ತಲುಪಿಸಿದ್ದರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ದರ್ಶನ್‌ ಅವರೇ ಕರೆ ಮಾಡಿ ಹಣ ಕೇಳಿದ್ದರೆ ಅಥವಾ ಬೇರೆ ಯಾರಾದರೂ ಹಣ ಕೊಡುವಂತೆ ಹೇಳಿದ್ದರೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.    

ಬಾಯ್ಬಿಡುತ್ತಿಲ್ಲ ದರ್ಶನ್‌?

‘ದರ್ಶನ್ ಅವರು 10 ದಿನಗಳಿಂದ ಪೊಲೀಸ್‌ ಕಸ್ಟಡಿಯಲ್ಲಿ ಇದ್ದರೂ ತನಿಖೆಗೆ ಸಹಕಾರ ನೀಡುತ್ತಿಲ್ಲ’ ಎಂಬುದು ಗೊತ್ತಾಗಿದೆ.

‘ತಮ್ಮ ಹೆಸರನ್ನು ಎಲ್ಲಿಯೂ ಬಾಯ್ಬಿಡದಂತೆ ಪ್ರದೋಷ್‌ಗೆ ₹30 ಲಕ್ಷ ನೀಡಿದ್ದೆ’ ಎಂದು ದರ್ಶನ್‌ ಅವರು ಸ್ವಇಚ್ಛಾ ಹೇಳಿಕೆ ನೀಡಿದ್ದರು. ದರ್ಶನ್ ಅವರು, ಹಣ, ಇತರೆ ಆರೋಪಿಗಳು ಹಾಗೂ ಅಭಿಮಾನಿ ಬಳಗವನ್ನು ಬಳಸಿಕೊಂಡು ಈ ಕೃತ್ಯದಲ್ಲಿ ಭಾಗಿ ಆಗಿರುವುದು ತನಿಖೆಯಿಂದ ದೃಢಪಟ್ಟಿದೆ. ಕೃತ್ಯದ ನಂತರ ದರ್ಶನ್ ಅವರು ರಾಜಕಾರಣಿಗಳು, ಚಿತ್ರರಂಗದ ಗಣ್ಯರು ಹಾಗೂ ಪ್ರಭಾವಿಗಳನ್ನು ಸಂಪರ್ಕಿಸಿದ್ದರು. ಅದಕ್ಕೂ ಸಾಕ್ಷ್ಯಗಳು ಲಭಿಸಿವೆ. ಎಲ್ಲ ಸಾಕ್ಷ್ಯಗಳನ್ನು ಅವರ ಎದುರಿಗಿಟ್ಟು ವಿಚಾರಣೆ ನಡೆಸಲಾಗುತ್ತಿದೆ. ಆದರೂ, ಅವರು ಬಾಯ್ಬಿಡುತ್ತಿಲ್ಲ. ಮತ್ತೆ ಕಸ್ಟಡಿಗೆ ಪಡೆದುಕೊಂಡಿರುವ ದರ್ಶನ್‌, ಧನರಾಜ್‌, ವಿನಯ್‌ ಹಾಗೂ ಪ್ರದೋಷ್‌ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ನ್ಯಾಯಾಲಯದ ಸೂಚನೆ ಮೇರೆಗೆ ಚಿತ್ರೀಕರಣ ಮಾಡಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

ಕಸ್ಟಡಿ ಅಂತ್ಯ

ಹೆಚ್ಚಿನ ವಿಚಾರಣೆಗೆ ಎರಡು ದಿನ ನಾಲ್ವರು ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಕೃತ್ಯದ ಒಳಸಂಚು, ಸಾಕ್ಷಿದಾರರ ಹೇಳಿಕೆ, ತಾಂತ್ರಿಕ ಸಾಕ್ಷ್ಯ ಕಲೆ ಹಾಕಿರುವ ಪೊಲೀಸರು ತನಿಖೆಯನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ. ‘ನಾಲ್ವರು ಆರೋಪಿಗಳ ಪೊಲೀಸ್‌ ಕಸ್ಟಡಿ ಶನಿವಾರಕ್ಕೆ ಅಂತ್ಯವಾಗಲಿದ್ದು, ಸಂಜೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು. ಮತ್ತೆ ಕಸ್ಟಡಿಗೆ ಕೇಳುವುದಿಲ್ಲ. ಈ ಪ್ರಕರಣದಲ್ಲಿ ಕಸ್ಟಡಿ ಅವಧಿಯನ್ನು ಪೂರ್ಣವಾಗಿ ಬಳಕೆ ಮಾಡಿಕೊಂಡು ತನಿಖೆ ನಡೆಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಜೀವಾವಧಿ ಶಿಕ್ಷೆಯ ಕೃತ್ಯ

ಆರೋಪಿಗಳು ಪ್ರಭಾವಿಗಳು ಹಣಬಲ ಹಾಗೂ ಅಭಿಮಾನಿ ಬಳಗ ಹೊಂದಿದ್ದಾರೆ. ಇವರಿಗೆ ಜಾಮೀನು ನೀಡಿದರೆ ತಮ್ಮ ಪ್ರಭಾವ ಬಳಸಿ ಸಾಕ್ಷಿದಾರರಿಗೆ ಬೆದರಿಕೆ ಹಾಕುವ ಹಾಗೂ ವ್ಯವಸ್ಥಿತ ರೀತಿಯಲ್ಲಿ ಮತ್ತಷ್ಟು ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ. ಪ್ರಕರಣದ ಎಲ್ಲ ಆರೋಪಿಗಳು ಕೃತ್ಯ ಒಳಸಂಚು ಹಾಗೂ ಸಾಕ್ಷ್ಯನಾಶದಲ್ಲಿ ಭಾಗಿ ಆಗಿರುವುದು ಸಾಕ್ಷಿದಾರರ ಹೇಳಿಕೆಗಳು ತಾಂತ್ರಿಕ ಸಾಕ್ಷ್ಯಗಳಲ್ಲಿ ಗೊತ್ತಾಗಿದೆ. ಇದು ಜೀವಾವಧಿ ಶಿಕ್ಷೆಯ ಕೃತ್ಯವಾಗಿದ್ದು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬಾರದು ಎಂದು ತನಿಖಾಧಿಕಾರಿಗಳು ನ್ಯಾಯಾಲಯದಲ್ಲಿ ಕೋರಿದ್ದಾರೆ. ಇದನ್ನೂ ಉಲ್ಲೇಖಿಸಿಯೇ ರಿಮಾಂಡ್‌ ಅರ್ಜಿ ಸಲ್ಲಿಸಲಾಗಿದೆ. 

ಪವಿತ್ರಾಗೌಡ ವಿಚಾರಣಾಧೀನ ಕೈದಿ 6024

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ಪವಿತ್ರಾಗೌಡ ಅವರಿಗೆ ವಿಚಾರಣಾಧೀನ ಕೈದಿ ನಂಬರ್‌: 6024 ನೀಡಲಾಗಿದೆ. ಕಾರಾಗೃಹದ ‘ಡಿ’ ಬ್ಯಾರಕ್‌ನಲ್ಲಿ ಪವಿತ್ರಾ ಅವರನ್ನು ಇರಿಸಲಾಗಿದೆ. ಉಳಿದ ಆರೋಪಿಗಳನ್ನು ಪ್ರತ್ಯೇಕ ಸೆಲ್‌ನಲ್ಲಿ ಇಡಲಾಗಿದೆ. ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಪವಿತ್ರಾ ಸೇರಿ ಉಳಿದ ಆರೋಪಿಗಳನ್ನು ಪೊಲೀಸರು ಭದ್ರತೆಯಲ್ಲಿ ಕರೆದೊಯ್ದು ಜೈಲಿಗೆ ಬಿಟ್ಟು ಬಂದಿದ್ದರು. ‘ಪವಿತ್ರಾ ತಮ್ಮ ಬ್ಯಾರಕ್‌ನಲ್ಲಿ ಮೌನಕ್ಕೆ ಜಾರಿದ್ದಾರೆ. ಇತರೆ ಕೈದಿಗಳೊಂದಿಗೆ ಅಷ್ಟಾಗಿ ಮಾತುಕತೆ ನಡೆಸುತ್ತಿಲ್ಲ. ತಿಂಡಿ ಊಟ ನೀಡಿದರೆ ಸ್ವಲ್ಪ ಮಾತ್ರವೇ ಸೇವಿಸುತ್ತಿದ್ದಾರೆ. ಶುಕ್ರವಾರ ಮಧ್ಯಾಹ್ನ ಅವರ ಸಂಬಂಧಿಕರು ಕಾರಾಗೃಹಕ್ಕೆ ಬಂದು ಮಾತನಾಡಿಸಿ ತೆರಳಿದರು’ ಎಂದು ಕಾರಾಗೃಹದ ಮೂಲಗಳು ತಿಳಿಸಿವೆ.

ಏನೇನು ಸಾಕ್ಷ್ಯ ಸಂಗ್ರಹ ‌

28 – ಸ್ಥಳಗಳಲ್ಲಿ ಮಹಜರು

139 – ಸಾಕ್ಷ್ಯ ಸಂಗ್ರಹ

₹70 ಲಕ್ಷ – ಇದುವರೆಗೂ ಆರೋಪಿಗಳಿಂದ ಜಪ್ತಿ ಮಾಡಲಾದ ಹಣ

17 – ಆರೋಪಿಗಳ ಬಂಧನ

4 – ಪೊಲೀಸ್‌ ಕಸ್ಟಡಿಯಲ್ಲಿರುವ ಆರೋಪಿಗಳು

13 – ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳು

ಪವಿತ್ರಾಗೌಡ 
ಧನರಾಜ್‌ 
ವಿನಯ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.