ADVERTISEMENT

ರೇಣುಕ ಸ್ವಾಮಿ ಕೊಲೆ: ಪವಿತ್ರಾ ಗೌಡ, ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ. 21ಕ್ಕೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 15:23 IST
Last Updated 7 ನವೆಂಬರ್ 2024, 15:23 IST
<div class="paragraphs"><p>ದರ್ಶನ್,&nbsp;ಪವಿತ್ರಾ ಗೌಡ</p></div>

ದರ್ಶನ್, ಪವಿತ್ರಾ ಗೌಡ

   

ಬೆಂಗಳೂರು: ಚಿತ್ರದುರ್ಗದ ರೇಣುಕ ಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್‌ ಅವರ ನಿಯಮಿತ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ಇದೇ 21ಕ್ಕೆ ನಿಗದಿಪಡಿಸಿದೆ.

ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ, 7ನೇ ಆರೋಪಿ ಅನುಕುಮಾರ್ ಅಲಿಯಾಸ್‌ ಅನು, 11ನೇ ಆರೋಪಿ ಆರ್‌.ನಾಗರಾಜು, 12ನೇ ಆರೋಪಿ ಎಂ.ಲಕ್ಷ್ಮಣ್‌ ಪ್ರತ್ಯೇಕವಾಗಿ ಸಲ್ಲಿಸಿದ್ದ ಜಾಮೀನು ಅರ್ಜಿಗಳು ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ನಿಗದಿಯಾಗಿದ್ದವು.

ADVERTISEMENT

ಬೆಳಿಗ್ಗೆ ಕೋರ್ಟ್‌ ಕಲಾಪ ಆರಂಭವಾಗುತ್ತಿದ್ದಂತೆಯೇ, ಎಂ.ಲಕ್ಷ್ಮಣ್‌ ಪರ ವಕೀಲ ಸುಯೋಗ ಹೇರಳೆ ಮತ್ತು ಆರ್‌.ನಾಗರಾಜು ಪರ ಜಿ.ಲಕ್ಷ್ಮಿಕಾಂತ್‌, ‘ಪ್ರಕರಣಕ್ಕೆ ಸಂಬಂಧಿಸಿದ ಏಳು ಸಂಪುಟಗಳ ಸಂಪೂರ್ಣ ದೋಷಾರೋಪ ಪಟ್ಟಿಯನ್ನು ಕೋರ್ಟ್‌ಗೆ ಇವತ್ತಷ್ಟೇ ಸಲ್ಲಿಸಿದ್ದೇವೆ. ಆದ್ದರಿಂದ, ಒಂದಷ್ಟು ಸಮಯಾವಕಾಶ ನೀಡಬೇಕು’ ಎಂದು  ನ್ಯಾಯಪೀಠಕ್ಕೆ ಮನವಿ ಮಾಡಿದರು.

ಅಂತೆಯೇ, ಬೆಳಗಿನ ಕಲಾಪದ ಅಂತ್ಯಕ್ಕೆ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್‌ ಪಿ.ಪ್ರಸನ್ನಕುಮಾರ್ ಹಾಜರಾಗಿ, ’ಈ ಎಲ್ಲಾ ಅರ್ಜಿಗಳನ್ನೂ ಒಂದೇ ದಿನ ವಿಚಾರಣೆಗೆ ಕೈಗೆತ್ತಿಕೊಂಡರೆ ಕೋರ್ಟ್‌ನ ಸಮಯ ಪರಿಪಾಲನೆಗೂ ಅನುಕೂಲವಾಗುತ್ತದೆ. ಆದ್ದರಿಂದ, ಇವುಗಳ ಜೊತೆಗೇ ಮೊದಲ ಆರೋಪಿ ಪವಿತ್ರಾ ಗೌಡ ಮತ್ತು ದರ್ಶನ್‌ ಅವರ ನಿಯಮಿತ ಜಾಮೀನು ಅರ್ಜಿಗಳನ್ನು ಒಟ್ಟಿಗೇ ಒಂದೇ ದಿನ ವಿಚಾರಣೆಗೆ ನಿಗದಿಪಡಿಸಬೇಕು’ ಎಂದು ಮನವಿ ಮಾಡಿದರು. ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದ ನ್ಯಾಯಪೀಠ ಎಲ್ಲ ಅರ್ಜಿಗಳ ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಿತು. ಪವಿತ್ರಾ ಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್‌ ಮತ್ತು ಅನುಕುಮಾರ್ ಪರವಾಗಿ ಹೈಕೋರ್ಟ್‌ ವಕೀಲ ರಂಗನಾಥ ರೆಡ್ಡಿ ಹಾಜರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.