ADVERTISEMENT

ಚಿಕಿತ್ಸೆಗಾಗಿ ದರ್ಶನ್ ಆಸ್ಪತ್ರೆಗೆ ದಾಖಲು, ಫಿಸಿಯೋಥೆರಪಿ ಆರಂಭಿಸಿದ ವೈದ್ಯರು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 15:17 IST
Last Updated 1 ನವೆಂಬರ್ 2024, 15:17 IST
ದರ್ಶನ್
ದರ್ಶನ್   

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿಯಾಗಿರುವ ಚಿತ್ರನಟ ದರ್ಶನ್‌, ಬೆನ್ನು ನೋವಿಗೆ ಚಿಕಿತ್ಸೆ ಪಡೆಯುವುದಕ್ಕಾಗಿ ಕೆಂಗೇರಿಯ ಬಿಜಿಎಸ್‌ ಗ್ಲೋಬಲ್ ಆಸ್ಪತ್ರೆಗೆ ಶುಕ್ರವಾರ ದಾಖಲಾಗಿದ್ದಾರೆ.

ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ಧನ್ವೀರ್ ಜತೆ ಕಾರಿನಲ್ಲಿ ಬಂದ ದರ್ಶನ್, ಬೆನ್ನು ಹಿಡಿದುಕೊಂಡು, ಕುಂಟುತ್ತಲೇ ಆಸ್ಪತ್ರೆ ಒಳಗೆ ತೆರಳಿದರು. ನರರೋಗ ತಜ್ಞ ಡಾ.ನವೀನ್ ಅಪ್ಪಾಜಿಗೌಡ ನೇತೃತ್ವದ ತಂಡ ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಸಿತು. ಇಸಿಜಿ, ರಕ್ತದೊತ್ತಡ, ಮಧುಮೇಹ ತಪಾಸಣೆ ಮಾಡಲಾಯಿತು. 

ಬಳ್ಳಾರಿಯಲ್ಲಿ ಕಾರಾಗೃಹದಲ್ಲಿ ಬಂಧನದಲ್ಲಿದ್ದಾಗ ದರ್ಶನ್ ಪಡೆದುಕೊಂಡಿರುವ ಚಿಕಿತ್ಸೆ ಹಾಗೂ ಮೈಸೂರಿನಲ್ಲಿ ಚಿಕಿತ್ಸೆ ನೀಡಿದ ವೈದ್ಯರಿಂದಲೂ ತಂಡ ಮಾಹಿತಿ ಪಡೆದುಕೊಂಡಿತು. 

ADVERTISEMENT

‘ದರ್ಶನ್ ಅವರಿಗೆ ಬೆನ್ನು ನೋವು ಹಾಗೂ ಎಡಗಾಲಿನ ಸೆಳೆತವಿದೆ. ಎಂ.ಆರ್‌.ಐ, ಎಕ್ಸ್‌ ರೇ ಹಾಗೂ ರಕ್ತ ಪರೀಕ್ಷೆ ಮಾಡಬೇಕಿದೆ. ಎಲ್ಲಾ ಪರೀಕ್ಷೆಗಳ ವರದಿಗಳು ಬರಲು ಎರಡು ದಿನ ಬೇಕಾಗಿದೆ. ಅವರು ಬೇರೆ ಕಡೆ ಚಿಕಿತ್ಸೆ ಪಡೆದಿರುವ ವರದಿಗಳು ನಮಗೆ ಲಭ್ಯವಾಗಿಲ್ಲ. ಪರೀಕ್ಷಾ ವರದಿಗಳು ಬಂದ ಬಳಿಕ ಶಸ್ತ್ರಚಿಕಿತ್ಸೆ ಮಾಡಬೇಕೋ ಅಥವಾ ಫಿಸಿಯೋಥೆರಪಿ ಚಿಕಿತ್ಸೆಯಿಂದ ವಾಸಿ ಮಾಡಬಹುದೋ ಎಂಬುದನ್ನು ನಿರ್ಧರಿಸಲಾಗುವುದು. ಸದ್ಯ ಫಿಸಿಯೋಥೆರಪಿ ಚಿಕಿತ್ಸೆ ಆರಂಭಿಸಲಾಗಿದೆ. ನೋವು ನಿವಾರಕ ಔಷಧಗಳನ್ನು ನೀಡಲಾಗಿದೆ’ ಎಂದು ಬಿಜಿಎಸ್‌ ಆಸ್ಪತ್ರೆ ವೈದ್ಯ ನವೀನ್ ಅಪ್ಪಾಜಿಗೌಡ ತಿಳಿಸಿದರು.

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ದರ್ಶನ್ ಅವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ನ್ಯಾಯಾಲಯ ಆರು ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ವಿಶೇಷ ಅತಿಥ್ಯ ಪಡೆದ ಪ್ರಕರಣದಲ್ಲಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಬಳ್ಳಾರಿ ಕಾರಾಗೃಹದಿಂದ ಬುಧವಾರ ಬಿಡುಗಡೆಯಾಗಿದ್ದ ಅವರು, ಬೆಂಗಳೂರಿಗೆ ಬಂದಿದ್ದರು.

2013ರಲ್ಲಿ ‘ಬೃಂದಾವನ’ ಚಿತ್ರದ ಚಿತ್ರೀಕರಣ ವೇಳೆ ಕುದುರೆ ಮೇಲಿಂದ ಬಿದ್ದಿದ್ದರಿಂದ ದರ್ಶನ್‌ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಆಗಲೂ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿದ್ದರು.

ಬಿಗಿ ಬಂದೋಬಸ್ತ್‌: ದರ್ಶನ್ ಆಸ್ಪತ್ರೆಗೆ ದಾಖಲಾಗುವ ವಿಚಾರ ತಿಳಿದು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ನಟನನ್ನು ಕಂಡು ಘೋಷಣೆಗಳನ್ನು ಕೂಗಿದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಆಸ್ಪತ್ರೆ ಬಳಿ ಒಂದು ಕೆಎಸ್‌ಆರ್‌ಪಿ ತುಕಡಿ, 50ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.