ಬೆಂಗಳೂರು: ‘ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್‌ಗೆ, ವೈದ್ಯಕೀಯ ಚಿಕಿತ್ಸೆ ಪಡೆಯಲು ಹೈಕೋರ್ಟ್ ಇಂದು ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಸದ್ಯ ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯ ಮೇಲಿನ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಆದೇಶವನ್ನು ಮಂಗಳವಾರಕ್ಕೆ ಕಾಯ್ದಿರಿಸಿತ್ತು.
ಬೆಳಗ್ಗೆ ಕಲಾಪ ಆರಂಭವಾದ ಕೂಡಲೇ ನ್ಯಾಯಪೀಠ ಆದೇಶವನ್ನು ಪ್ರಕಟಿಸಿತು. ವಿಸ್ತೃತ ಆದೇಶ ಇನ್ನಷ್ಟೇ ಲಭ್ಯವಾಗಬೇಕಿದೆ.
ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಹಾಗೂ ಪ್ರಕರಣದಲ್ಲಿ ವಿಶೇಷ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡಿದ್ದ ಪಿ.ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿದ್ದರು.
ಷರತ್ತುಗಳೇನು?
* ಶಸ್ತ್ರಚಿಕಿತ್ಸೆ ಪಡೆಯುವ ಅಗತ್ಯದ ಹಿನ್ನೆಲೆಯಲ್ಲಿ ವೈದ್ಯಕೀಯ ನೆರವಿನ ಆಧಾರದ ಈ ಮಧ್ಯಂತರ ಜಾಮೀನು ಆರು ವಾರ ಚಾಲ್ತಿಯಲ್ಲಿರಲಿದೆ.
* ದರ್ಶನ್ ಅವರು ತಮ್ಮ ಬೆನ್ನುಹುರಿ ಸಮಸ್ಯೆಗೆ ತಾವು ಇಚ್ಛಿಸಿದ ಆಸ್ಪತ್ರೆಯಲ್ಲಿ ತಕ್ಷಣವೇ ಚಿಕಿತ್ಸೆ ಪಡೆಯಬಹುದು.
* ದರ್ಶನ್ ತಮ್ಮ ಪಾಸ್‌ಪೋರ್ಟ್ ಅನ್ನು ವಿಚಾರಣಾ ನ್ಯಾಯಾಲಯದ ವಶಕ್ಕೆ ನೀಡಬೇಕು.
* ಆರೋಗ್ಯ ಪರಿಸ್ಥಿತಿ, ಪ್ರಸ್ತಾವಿತ ಚಿಕಿತ್ಸೆ ಮತ್ತು ಎಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಮತ್ತು ತದನಂತರದ ಚಿಕಿತ್ಸೆಗೆ ಸಂಬಂಧಿಸಿದಂತೆ ಒಂದು ವಾರದಲ್ಲಿ ಕೋರ್ಟ್‌ಗೆ ವರದಿ ಸಲ್ಲಿಸಬೇಕು.
ಆರೋಪ ಏನು?
ರೇಣುಕಸ್ವಾಮಿಯನ್ನು ದರ್ಶನ್ ಕುಮ್ಮಕ್ಕಿನಿಂದ ಅಪಹರಿಸಿ ಬೆಂಗಳೂರಿನ ಪಟ್ಟಣಗೆರೆ ಶಡ್‌ಲ್ಲಿ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿತ್ತು. ಈ ಕೃತ್ಯದಲ್ಲಿ ನಟ ದರ್ಶನ್, ಅವರ ಗೆಳತಿ ಪವಿತ್ರಾಗೌಡ ಸೇರಿ 17 ಜನ ಭಾಗಿಯಾಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು.
ಹಲ್ಲೆಯಿಂದ ರೇಣುಕಾಸ್ವಾಮಿ ಮೃತಪಟ್ಟಿದ್ದ ಎಂದು ಆರೋಪಿಸಲಾಗಿತ್ತು. ಜೂನ್ 8ರಂದು ರೇಣುಕಾಸ್ವಾಮಿ ಶವ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಮೋರಿಯಲ್ಲಿ ಸಿಕ್ಕ ಮಾರನೇ ದಿನ ಜೂನ್ 10 ರಂದು ದರ್ಶನ್ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಮೈಸೂರಿನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು.
ಬೆಂಗಳೂರು ಕೇಂದ್ರ ಕಾರಾಗೃಹ, ಬಳ್ಳಾರಿ ಜೈಲು ಸೇರಿ ಒಟ್ಟು 140 ದಿನ ದರ್ಶನ್ ಜೈಲಿನಲ್ಲಿದ್ದರು. ಇಂದು ಅಥವಾ ನಾಳೆ ಅವರು ಬಳ್ಳಾರಿ ಜೈಲಿನಿಂದ ಹೊರ ಬಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ಸಂಭವ ಇದೆ ಎಂದು ತಿಳಿದು ಬಂದಿದೆ.
ಎ1 ಪವಿತ್ರಾಗೌಡ ಅವರಿಗೆ ರೇಣುಕಸ್ವಾಮಿ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಎಂಬ ಆರೋಪ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.