ಬೆಂಗಳೂರು: ‘ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್; ಮನೆಯಿಂದ ಊಟ ಪಡೆಯಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ’ ಎಂದು ರಾಜ್ಯ ಸರ್ಕಾರ, ಹೈಕೋರ್ಟ್‌ಗೆ ತಿಳಿಸಿದೆ.
ಈ ಸಂಬಂಧ ನಟ ದರ್ಶನ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ರಾಜ್ಯ ಪ್ರಾಸಿಕ್ಯೂಟರ್–1 ಬಿ.ಎ.ಬೆಳ್ಳಿಯಪ್ಪ, ‘ಮನೆಯಿಂದ ಊಟ, ಹಾಸಿಗೆ ಹಾಗೂ ಪುಸ್ತಕಗಳನ್ನು ತರಿಸಿಕೊಳ್ಳಲು ಅನುಮತಿ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಸರ್ಕಾರ ಇದೇ 14ರಂದು ತಿರಸ್ಕರಿಸಿದೆ. ಈ ವಿಷಯವನ್ನು ಅಂದೇ ದರ್ಶನ್ ಗಮನಕ್ಕೆ ತರಲಾಗಿದೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದಕ್ಕೆ ಪ್ರತಿಯಾಗಿ ದರ್ಶನ್ ಪರ ಹಾಜರಿದ್ದ ಹೈಕೋರ್ಟ್ ವಕೀಲೆ ಸಂಜೀವಿನಿ ಪಿ.ನಾವದಗಿ, ‘ಸರ್ಕಾರದ ಆದೇಶದ ಪ್ರತಿ ನಮಗೆ ಈವರೆಗೂ ತಲುಪಿಲ್ಲ. ಆದೇಶವನ್ನು ಪರಿಶೀಲಿಸಿ ವಾದ ಮಂಡಿಸಲಾಗುವುದು. ಅದಕ್ಕಾಗಿ ಕಾಲಾವಕಾಶ ನೀಡಬೇಕು’ ಎಂದು ಕೋರಿದರು. ಇದಕ್ಕೆ ಸಮ್ಮತಿಸಿದ ನ್ಯಾಯಪೀಠ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿತು. ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್ ಹಾಜರಿದ್ದರು.
ಸರ್ಕಾರದ ಆದೇಶದಲ್ಲೇನಿದೆ?: ‘ದರ್ಶನ್‌ಗೆ ಫುಡ್ ಪಾಯಿಸನ್ ಆಗಿಲ್ಲ. ಅವರು ಮೂಳೆ ಮತ್ತು ವೈರಲ್ ಜ್ವರದಿಂದ ಬಳಲುತ್ತಿದ್ದರು. ಆ ಸಮಸ್ಯೆಗೆ ಈಗಾಗಲೇ ಚಿಕಿತ್ಸೆ ನೀಡಲಾಗಿದೆ. ಇದನ್ನು ಬಿಟ್ಟು ದೊಡ್ಡ ಆರೋಗ್ಯ ಸಮಸ್ಯೆಗಳಿಲ್ಲ. ಔಷಧಿ ಮತ್ತು ಪೌಷ್ಟಿಕ ಆಹಾರ ಸೇವಿಸಲು ದರ್ಶನ್‌ಗೆ ವೈದ್ಯರು ಸಲಹೆ ನೀಡಿದ್ದಾರೆ. ಜತೆಗೆ, ಬೆನ್ನು ನೋವು ಮತ್ತು ಮುಂಗೈಗಳ ಚಿಕಿತ್ಸೆಗಾಗಿ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಲಾಗಿದೆ. ಸದ್ಯ ಯಾವುದೇ ಪೌಷ್ಟಿಕಾಂಶದ ಕೊರತೆಯೂ ಇಲ್ಲ. ದರ್ಶನ್ ಉಳಿವಿಗೆ ಮನೆ ಊಟ ಅಗತ್ಯ ಎಂದು ವೈದ್ಯರು ಹೇಳಿಲ್ಲ. ಆದ್ದರಿಂದ, ಅವರ ಅರ್ಜಿ ತಿರಸ್ಕರಿಸಲಾಗಿದೆ’ ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.
‘ಮನೆಯಿಂದ ಊಟ, ಹಾಸಿಗೆ ಮತ್ತು ಪುಸ್ತಕ ಪಡೆಯಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರ ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ನಿರ್ದೇಶಿಸಬೇಕು’ ಎಂದು ಕೋರಿ ದರ್ಶನ್ ಈ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.