ಬಳ್ಳಾರಿ: ರೇಣುಕಸ್ವಾಮಿ ಎಂಬುವವರ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದ ನಟ ದರ್ಶನ್ ಬುಧವಾರ ಸಂಜೆ ಬಿಡುಗಡೆಯಾಗಿ, ಬೆಂಗಳೂರಿನ ಕಡೆಗೆ ಹೊರಟರು.
ದರ್ಶನ್ ಅವರ ಜಾಮೀನು ಪ್ರತಿ ಬಳ್ಳಾರಿ ಜೈಲಿಗೆ ಸಂಜೆ 5 ಗಂಟೆ ಹೊತ್ತಿಗೇ ತಲುಪಿತ್ತು. ಬಳಿಕ ಜೈಲಿನಿಂದ ಬಿಡುಗಡೆಗೊಳಿಸುವ ಪ್ರಕ್ರಿಯೆಗಳು ಆರಂಭವಾದವು.
ತಮ್ಮನ್ನು ಇರಿಸಿದ್ದ ಹೊರ ವಿಶೇಷ ಭದ್ರತಾ ಕೊಠಡಿಯಿಂದ ಹೊರ ಬಂದ ದರ್ಶನ್ ಜೈಲು ಕಚೇರಿಗೆ ತೆರಳಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು. ಸರಿಯಾಗಿ ಸಂಜೆ 6.05ಕ್ಕೆ ಅವರು ಜೈಲು ಕಚೇರಿಯಿಂದ ಹೊರಬಂದರು.
ಹೀಗೆ ಬರುವ ವೇಳೆ ಅವರು ಕುಂಟುತ್ತಿದ್ದದ್ದು, ತಮ್ಮ ಸಂಬಂಧಿಯ ಸಹಾಯ ಪಡೆಯುತ್ತಿದ್ದು ಕಂಡುಬಂತು. ಜೈಲಿನಿಂದ ಹೊರ ಬಂದ ಅವರನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಕಾರಿಗೆ ಹತ್ತಿಸಿದರು. ತಮ್ಮನ್ನು ಸುತ್ತುವರಿದ ಮಾಧ್ಯಮಗಳಿಗೂ ಅವರು ಒಂದೇ ಒಂದು ಪ್ರತಿಕ್ರಿಯೆಯನ್ನೂ ನೀಡಲ್ಲ.
ಈ ವೇಳೆ ಸ್ಥಳದಲ್ಲಿ ಸೇರಿದ್ದ ಅಭಿಮಾನಿಗಳು ‘ಬಾಸ್ ಬಾಸ್ ಡಿ ಬಾಸ್’ ಎಂದು ಕೂಗಿದರು.
ನಗರದ ಎಸ್‌ಪಿ ಸರ್ಕಲ್ ಮಾರ್ಗವಾಗಿ ಮತ್ತೆ ಅನಂತಪುರ ರಸ್ತೆಗೆ ಬಂದ ದರ್ಶನ್ ಅವರಿದ್ದ ಕಾರು, ರಾಜ್ಯದ ಗಡಿ ಗ್ರಾಮ ಚೇಳ್ಳಗುರ್ಕಿ ಮೂಲಕ ಅನಂತಪುರ ತಲುಪಿ ಅಲ್ಲಿಂದ ಬೆಂಗಳೂರಿಗೆ ತೆರಳಲಿದೆ. ರಾಜ್ಯದ ಗಡಿ ವರೆಗಿನ 25 ಕಿ.ಮೀ ಮಾರ್ಗದಲ್ಲಿ ದರ್ಶನ್‌ಗೆ ಬಳ್ಳಾರಿ ಪೊಲೀಸರ ಭದ್ರತೆ ಸಿಗಲಿದೆ.
ಆಗಸ್ಟ್ 29 ರಂದು ದರ್ಶನ್ ಬಳ್ಳಾರಿ ಜೈಲು ಸೇರಿದ್ದರು. ಸರಿಯಾಗಿ ಎರಡು ತಿಂಗಳಿಗೆ ಅವರ ಬಿಡುಗಡೆಯಾಗಿದೆ. ಬಿಡುಗಡೆಗೂ ಮುನ್ನ ಅವರು ತಮ್ಮ ಪಿಪಿಸಿ (ಪ್ರಿಸನರ್ಸ್ ಪ್ರೈವೇಟ್ ಕ್ಯಾಶ್) ₹35 ಸಾವಿರ ಬಿಡಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.