ADVERTISEMENT

ರೇಣುಕಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್‌ ಸೇರಿ ನಾಲ್ವರು ಪುನಃ ಕಸ್ಟಡಿಗೆ

ಬಿ.ಎಸ್.ಷಣ್ಮುಖಪ್ಪ
Published 20 ಜೂನ್ 2024, 23:30 IST
Last Updated 20 ಜೂನ್ 2024, 23:30 IST
<div class="paragraphs"><p>ದರ್ಶನ್‌ ಅಲಿಯಾಸ್‌ ಡಿ ಬಾಸ್‌</p></div>

ದರ್ಶನ್‌ ಅಲಿಯಾಸ್‌ ಡಿ ಬಾಸ್‌

   

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್‌ ಸೇರಿದಂತೆ ನಾಲ್ವರು ಆರೋಪಿಗಳ ಪೊಲೀಸ್‌ ಕಸ್ಟಡಿಯನ್ನು ಇದೇ 22ರವರೆಗೆ ಮುಂದುವರಿಸಿದ ವಿಶೇಷ ನ್ಯಾಯಾಲಯ ಪ್ರಕರಣದ ಉಳಿದ ಎಲ್ಲ ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಆಪ್ತೆ ಪವಿತ್ರಾ ಗೌಡ ಮತ್ತು ದರ್ಶನ್‌ ಸೇರಿದಂತೆ ಎಲ್ಲ 17 ಆರೋಪಿಗಳನ್ನು ನಗರದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ನ್ಯಾಯಾಲಯದ 24ನೇ ಆರ್ಥಿಕ ಅಪರಾಧಗಳ ಕೋರ್ಟ್‌ ನ್ಯಾಯಾಧೀಶ ವಿಶ್ವನಾಥ ಚನ್ನಬಸಪ್ಪ ಗೌಡರ್ ಅವರ ಮುಂದೆ ಬಿಗಿ ಪೊಲೀಸ್‌ ಬಂದೋಬಸ್ತ್ ನಡುವೆ ಗುರುವಾರ ಮಧ್ಯಾಹ್ನ ಹಾಜರುಪಡಿಸಲಾಯಿತು.

ADVERTISEMENT

ದರ್ಶನ್‌ ಪರ ಹಾಜರಿದ್ದ ಹೈಕೋರ್ಟ್‌ ವಕೀಲ ಮೊನೇಶ್ ಕುಮಾರ್‌ ಹಾಗೂ ರಂಗನಾಥ ರೆಡ್ಡಿ, ಪವಿತ್ರಾ ಗೌಡ ಪರ ನಾರಾಯಣ ಸ್ವಾಮಿ, ಪ್ರದೋಷ್‌ ಪರ ಹೈಕೋರ್ಟ್‌ನ ಹಿರಿಯ ವಕೀಲ ಸಿ.ದಿವಾಕರ್, ‘ಪೊಲೀಸರು ಆರೋಪಿಗಳನ್ನು ಯಾಕೆ ಬಂಧಿಸಲಾಗುತ್ತಿದೆ ಎಂಬುದನ್ನು ಬಂಧಿಸುವ ಮುನ್ನ ತಿಳಿಸಿಲ್ಲ. ರಿಮಾಂಡ್‌ ಅರ್ಜಿ ನೀಡಿಲ್ಲ. ಖಾಲಿ ಹಾಳೆಯ ಮೇಲೆ ಸಹಿ ಮಾಡಿಸಿಕೊಂಡು ಬಂಧಿಸಿದ್ದಾರೆ. ಇದು ಸಂವಿಧಾನ ಕೊಡಮಾಡಿರುವ ವ್ಯಕ್ತಿಯೊಬ್ಬನ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆ. ಆರೋಪಿಗಳನ್ನು ವಶದಲ್ಲಿ ಇರಿಸಿಕೊಂಡಿರುವ ಪೊಲೀಸರು ಸಾಕ್ಷ್ಯಗಳನ್ನು ಸೃಷ್ಟಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಪೊಲೀಸರು ಇಡೀ ತನಿಖೆಯ ಇಂಚಿಂಚೂ ವಿವರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿದ್ದಾರೆ. ಇದರಿಂದಾಗಿ ಮಾಧ್ಯಮಗಳು ಪರ್ಯಾಯ ವಿಚಾರಣೆ ನಡೆಸುತ್ತಿವೆ. ಸಾಕ್ಷಿಗಳು ಬಾಯಿ ಬಿಡುತ್ತಿಲ್ಲ ಎಂದು ಆರೋಪಿಸುವುದು ಸಲ್ಲದು. ಯಾಕೆಂದರೆ ಮೌನವಾಗಿರಲೂ ಅವರಿಗೆ ಹಕ್ಕಿದೆ. ಕೊಲೆಗಾರ ಯಾರು ಎಂಬುದನ್ನು ಕೋರ್ಟ್‌ ತೀರ್ಮಾನಿಸಬೇಕೇ ಹೊರತು ಮಾಧ್ಯಮಗಳ ವಿಚಾರಣೆಯಿಂದ ಅಲ್ಲ. ಕೂಡಲೇ, ಈ ಪ್ರಕರಣದಲ್ಲಿ ಮಾಧ್ಯಮಗಳನ್ನು ನಿಯಂತ್ರಿಸಲು ನಿರ್ದೇಶಿಸಬೇಕು’ ಎಂದು ಕೋರಿದರು. 

ಈ ಮಾತುಗಳನ್ನು ಬಲವಾಗಿ ಅಲ್ಲಗಳೆದ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್, ‘ಇದು ಕೋರ್ಟ್‌. ಇಲ್ಲಿ ಆರೋಪಿಗಳ ಪರ ವಕೀಲರು ರಾಜಕೀಯ ಭಾಷಣ ಮಾಡಬಾರದು. ಕಾನೂನಿನ ಪ್ರಕಾರ ಏನಿದೆಯೋ ಅದನ್ನು ಹೇಳಬೇಕು. ಆರೋಪಿಗಳು ಬಾಯಿ ಬಿಡುತ್ತಿಲ್ಲ ಎಂಬ ಕಾರಣಕ್ಕಾಗಿಯೇ ನಾಲ್ವರು ಆರೋಪಿಗಳನ್ನು ಪುನಃ ನಾಲ್ಕು ದಿನಗಳ ಪೊಲಿಸ್ ಕಸ್ಟಡಿಗೆ ಮನವಿ ಮಾಡಲಾಗುತ್ತಿದೆ’ ಎಂದು ಪ್ರತಿಪಾದಿಸಿದರು.

ಸುದೀರ್ಘ ವಾದ–ಪ್ರತಿವಾದದ ನಂತರ ನ್ಯಾಯಾಧೀಶ ವಿಶ್ವನಾಥ್‌ ಅವರು ಒಂದು ಹಂತದಲ್ಲಿ ಎಲ್ಲ ಆರೋಪಿಗಳನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಮುಂದಾಗುತ್ತಿದ್ದಂತೆಯೇ ಪ್ರಸನ್ನ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಇನ್ನೂ ಐದು ಗಂಟೆ ಆಗಿಲ್ಲ. ಬೇಕಿದ್ದರೆ ಮೊದಲಿನ ಮತ್ತು ಎರಡನೆಯ ರಿಮಾಂಡ್‌ ಅರ್ಜಿಯನ್ನು 5 ಗಂಟೆಯ ಒಳಗೆ ಎಲ್ಲ ಆರೋಪಿಗಳಿಗೂ ಸರ್ವ್‌ ಮಾಡಲಾಗುವುದು’ ಎಂದರು.

ಈ ಮಾತಿಗೆ ದಿವಾಕರ್ ಸೇರಿದಂತೆ ಇತರೆ ಆರೋಪಿಗಳ ವಕೀಲರು ಪ್ರಸನ್ನ ಕುಮಾರ್ ಮೇಲೆ ಮುಗಿಬಿದ್ದು ವಾಗ್ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಪ್ರಸನ್ನ ಕುಮಾರ್ ಕೂಡಾ ಏರಿದ ಧ್ವನಿಯಲ್ಲಿ ಸುಪ್ರೀಂ ಕೋರ್ಟ್‌ನ ಪೂರ್ವನಿದರ್ಶನಗಳನ್ನು ಪ್ರಸ್ತುತಪಡಿಸುವ ಮೂಲಕ ನಾಲ್ವರು ಆರೋಪಿಗಳನ್ನು ಪುನಃ ಪೊಲೀಸ್‌ ಕಸ್ಟಡಿಗೆ ಪಡೆಯುವಲ್ಲಿ ಯಶಸ್ವಿಯಾದರು.

‘ಇದೇ 22ರ ಸಂಜೆ ಐದು ಗಂಟೆಯ ಒಳಗೆ ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಠಾಣಾಧಿಕಾರಿಯು ಆರೋಪಿಗಳನ್ನು ಸಿಸಿಟಿವಿ ಕ್ಯಾಮೆರಾಗಳ ನಿಗಾದಲ್ಲೇ ವಿಚಾರಣೆ ನಡೆಸಬೇಕು. ಆರೋಪಿಗಳ ಪರ ಯಾವ ವಕೀಲರು ವಕಾಲತ್ತಿಗೆ ಸಹಿ ಹಾಕಿದ್ದಾರೆಯೋ ಅವರನ್ನು ಭೇಟಿ ಮಾಡಲು ಪೊಲೀಸರು ಮುಕ್ತ ಅವಕಾಶ ಕಲ್ಪಿಸಬೇಕು. ಜೈಲು ಅಧಿಕಾರಿಗಳು ಅಗತ್ಯವಿದ್ದರೆ ಆರೋಪಿಗಳಿಗೆ ಅಗತ್ಯ ವೈದ್ಯಕೀಯ ನೆರವು ಕಲ್ಪಿಸಬೇಕು’ ಎಂದು ಆದೇಶಿಸಿದ ನ್ಯಾಯಾಧೀಶರು ವಿಚಾರಣೆ ಮುಂದೂಡಿದರು. 

ಪೊಲೀಸ್ ಕಸ್ಟಡಿಗೆ ಒಳಗಾದ ಆರೋಪಿಗಳು 

* ಎ–2 ದರ್ಶನ್‌ ಅಲಿಯಾಸ್‌ ಡಿ ಬಾಸ್‌ ಬಿನ್‌ ಲೇಟ್‌ ತೂಗದೀಪ ಶ್ರೀನಿವಾಸ್‌ (47)

* ಎ–9 ಡಿ.ಧನರಾಜ್‌ ಅಲಿಯಾಸ್ ರಾಜು ಬಿನ್‌ ದಿನೇಶ್ (27)

* ಎ–10 ವಿ.ವಿನಯ್‌ ಬಿನ್‌ ಲೇಟ್‌ ವೆಂಕಟರೆಡ್ಡಿ (38)

* ಎ–14 ಪ್ರದೋಷ್‌ ಬಿನ್‌ ಸುಬ್ಬಾರಾವ್‌ (40) 

ಆರೋಪಿಗಳಿಗೆ ಅಗತ್ಯ ಟ್ರೀಟ್‌ಮೆಂಟ್ ಕೊಡಿ..

‘ಜೈಲಿನ ಅಧಿಕಾರಿಗಳು ಆರೋಪಿಗಳಿಗೆ ಅಗತ್ಯ ಟ್ರೀಟ್‌ಮೆಂಟ್‌ ಕೊಡಬೇಕು’ ಎಂದು ನ್ಯಾಯಾಧೀಶರು ಆದೇಶಿಸುತ್ತಿದ್ದಂತೆಯೇ ಆರೋಪಿ ಪರ ವಕೀಲರು ಸ್ವಾಮಿ ‘ತಾವು ಈ ರೀತಿ ಆದೇಶಿಸಿದರೆ ಅಲ್ಲಿ ಅವರಿಗೆ ಬೇರೆಯದೇ ಆದ ಟ್ರೀಟ್‌ಮೆಂಟ್‌ ಕೊಡುತ್ತಾರೆ...’ ಎಂದು ಆಕ್ಷೇಪಿಸಿದರು. ಇದಕ್ಕೆ ನ್ಯಾಯಾಧೀಶರು ‘ಹಾಗಾದರೆ ಪೊಲೀಸರು ಯಾವ ರೀತಿಯ  ಟ್ರೀಟ್‌ಮೆಂಟ್‌ ಕೊಡುತ್ತಾರೆ ಎಂಬುದನ್ನು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಲಿ ಬಿಡಿ’ ಎಂದರು. ‘ಸ್ವಾಮಿ ಆ ರೀತಿ ಅಲ್ಲ. ಪೊಲೀಸರು ಅವರಿಗೆ ಮೂರನೇ ದರ್ಜೆಯ ಟ್ರೀಟ್‌ಮೆಂಟ್‌ ಕೊಡುತ್ತಾರೆ’ ಎಂದು ವಕೀಲರು ಆರೋಪಿಸಿದರು.

ಎಸ್‌ಪಿಪಿಗೆ ದಾರಿ ಬಿಡಿ...!

ಎಸಿಎಂಎಂ ಕೋರ್ಟ್‌ ಕಟ್ಟಡದ ಎರಡನೇ ಮಹಡಿಯಲ್ಲಿರುವ 24ನೇ ಕೋರ್ಟ್‌ ಹಾಲ್‌ ಮತ್ತು ಕೆಳ ಆವರಣದ ಎಲ್ಲ ಪ್ರವೇಶ ದ್ವಾರಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದಲೇ ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.  ಮಧ್ಯಾಹ್ನ 3.30ಕ್ಕೆ ‘ಕಾಮಾಕ್ಷಿ ಪಾಳ್ಯ ಪೊಲೀಸ್‌ ಠಾಣೆಯ ಗುನ್ನೆ’ ಎಂದು ಪ್ರಕರಣವನ್ನು ಕೂಗಿದ 20 ನಿಮಿಷಗಳ ನಂತರ ವಿಶೇಷ ಪ್ರಾಸಿಕ್ಯೂಟರ್‌ ಹಾಗೂ ಪೊಲೀಸರು ಕೋರ್ಟ್‌ ಪ್ರವೇಶಿಸಲು ಸಾಧ್ಯವಾಯಿತು. ಕಿಕ್ಕಿರಿದು ತುಂಬಿದ್ದ ಕಾರಿಡಾರ್ ಹಾಗೂ ಕೋರ್ಟ್‌ ಹಾಲ್‌ ಒಳಗೆ ಕಾಲಿಡಲೂ ಸಾಧ್ಯವಿಲ್ಲದಷ್ಟು ವಕೀಲರು ದರ್ಶನ್‌ ಮತ್ತು ಪ್ರಕರಣದ ಕಲಾಪ ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದರು. ಒಂದು ಹಂತದಲ್ಲಿ ನ್ಯಾಯಾಧೀಶ ವಿಶ್ವನಾಥ್ ಸಿ.ಗೌಡರ್‌ ಅವರು ‘ಎಸ್‌ಪಿಪಿ ಬರಲು ದಾರಿ ಬಿಡಿ ನೀವು ಹೀಗೆಯೇ ಮಾಡಿದರೆ ಪ್ರಕರಣವನ್ನು ಹೊರತುಪಡಿಸಿದ ಇತರ ಎಲ್ಲರನ್ನೂ ಇಲ್ಲಿಂದ ಹೊರಗೆ ಹೋಗಲು ಆದೇಶಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು. ಕಡೆಗೆ 20 ನಿಮಿಷಗಳ ನಂತರ ಪಿ.ಪ್ರಸನ್ನ ಕುಮಾರ್ ಮತ್ತು ಅವರ ಸಹಾಯಕ ವಕೀಲ ಸಿ.ಸಚಿನ್‌ ಕೋರ್ಟ್‌ ಒಳಗೆ ಪ್ರವೇಶಿಸಲು ಸಾಧ್ಯವಾಯಿತು.

ಜೋಲು ಮೋರೆ ಹಾಕಿದ ಪವಿತ್ರಾಗೌಡ

ಸರಿಸುಮಾರು ಮೂರು ಗಂಟೆ ನಡೆದ ವಿಚಾರಣೆಯಲ್ಲಿ ವೇಳೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಜೋಲು ಮೋರೆ ಹಾಕಿಕೊಂಡು ನಿಂತಿದ್ದರು. ಕಂದು ಬಣ್ಣದ ಹೂವುಗಳಿಂದ ಆವೃತವಾದ ಬಿಸ್ಕತ್ ಬಣ್ಣದ ಸೆಲ್ವಾರ್ ಕಮೀಝ್‌ ಧರಿಸಿದ್ದ ಪವಿತ್ರಾ ಮುಖಗವಸು ಧರಿಸಿಯೇ ಒಳಬಂದರು. ಆರೋಪಿಯ ಹೆಸರು ಕೂಗಿದ ಬಳಿಕ, ಮುಖಗವಸು ತೆಗೆಯಲು ಸೂಚಿಸಿದ ಮೇಲೆಯೇ ತೆಗೆದರು. 

ಕೋರ್ಟ್ ಡಾಕ್‌ನ ಮಧ್ಯದಲ್ಲಿ ತೀವ್ರ ಅಸಹಾಯಕರಾಗಿ ಆಗಾಗ್ಗೆ ತಮ್ಮ ವಕೀಲರ ಜೊತೆ ಬಸವಳಿದ ದನಿಯಲ್ಲಿ ಪಿಸು ಮಾತುಗಳನ್ನಾಡಿದರೆ ತೀರಾ ಹಿಂದೆ ಇತರೆ ಆರೋಪಿಗಳು ಮತ್ತು ವಕೀಲರ ನಡುವೆ ತೆಳು ನೀಲಿ ಬಣ್ಣದ ಟಿ ಶರ್ಟ್‌ ಧರಿಸಿದ ನಿಂತಿದ್ದ ದರ್ಶನ್‌ ಕಲಾಪದ ಎಲ್ಲ ಮಗ್ಗಲುಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಆದರೆ, ನಗುಮೊಗದಲ್ಲೇ ತಮ್ಮೊಟ್ಟಿಗೆ ಇದ್ದವರನ್ನು ಮಾತನಾಡಿಸುತ್ತಿದ್ದರು. ನ್ಯಾಯಾಧೀಶರು ಆದೇಶ ಪೂರ್ಣಗೊಳಿಸುತ್ತಿದ್ದಂತೆಯೇ ತನಿಖಾಧಿಕಾರಿ ಎಸಿಪಿ ಚಂದನ್‌ ಕುಮಾರ್ ತುಂಬ ಸಂತೋಷದಿಂದ ಹೊರನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.