ADVERTISEMENT

ದರ್ಶನ್ ಜಾಮೀನು ಅರ್ಜಿ ವಿಚಾರಣೆ: ದೋಷಾರೋಪಪಟ್ಟಿಯ ನ್ಯೂನತೆ ಉಲ್ಲೇಖಿಸಿ ವಕೀಲರ ವಾದ

ಅ.8ಕ್ಕೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 1:30 IST
Last Updated 6 ಅಕ್ಟೋಬರ್ 2024, 1:30 IST
ದರ್ಶನ್‌ 
ದರ್ಶನ್‌    

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು 57ನೇ ಸಿಸಿಎಚ್ ನ್ಯಾಯಾಲಯವು ಅಕ್ಟೋಬರ್‌ 8ಕ್ಕೆ ಮುಂದೂಡಿತು.

ದರ್ಶನ್‌ ಪರ ವಕೀಲ ಸಿ.ವಿ.ನಾಗೇಶ್ ಅವರು ಶನಿವಾರ ವಾದ ಮಂಡಿಸಿದರು. ವಾದ ಆಲಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ಮುಂದೂಡಿದರು. 

‘ಜೂನ್‌ 8ರಂದು ರೇಣುಕಸ್ವಾಮಿ ಸಾವು ಸಂಭವಿಸಿದೆ. ಜೂನ್‌ 11ರಂದು ಮರಣೋತ್ತರ ಪರೀಕ್ಷೆ ನಡೆದಿದೆ. ಈ ವಿಳಂಬಕ್ಕೆ ಕಾರಣವನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿಲ್ಲ. ದೋಷಾರೋಪ ಪಟ್ಟಿಯಲ್ಲಿ ಹಲವು ಲೋಪದೋಷಗಳಿವೆ. ಇದೊಂದು ಕಳಪೆ ತನಿಖೆಯಾಗಿದ್ದು, ಪೊಲೀಸರು ನಾಟಕ ಮಾಡಿದ್ದಾರೆ’ ಎಂದು ಸಿ.ವಿ.ನಾಗೇಶ್ ವಾದಿಸಿದರು.

ADVERTISEMENT

‘ಪಟ್ಟಣಗೆರೆಯ ಶೆಡ್‌ನ ಕಾವಲುಗಾರರೊಬ್ಬರ ಹೇಳಿಕೆಯನ್ನು ಕೃತ್ಯ ನಡೆದ ಐದು ದಿನದ ಬಳಿಕ (ಜೂನ್‌ 13ರಂದು) ದಾಖಲಿಸಿದೆ. ಜೂನ್‌ 15ರಂದು ಇತರರ ಹೇಳಿಕೆ ದಾಖಲಿಸಿದೆ. ಈ ವಿಳಂಬಕ್ಕೆ ಕಾರಣವನ್ನೂ ತಿಳಿಸಿಲ್ಲ’ ಎಂದು ವಾದಿಸಿದರು.

‘ರೇಣುಕಸ್ವಾಮಿ ಅವರ ಮೃತದೇಹವನ್ನು ಕೋಲ್ಡ್‌ ಸ್ಟೋರೇಜ್‌ನಲ್ಲಿ ಇಟ್ಟಿದ್ದರಿಂದ ಸಾವಿನ ಸಮಯವನ್ನು ಅಂದಾಜಿಸಲು ಸಾಧ್ಯವಾಗಿಲ್ಲ ಎಂಬುದಾಗಿ ವೈದ್ಯರು ನೀಡಿದ್ದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. ಆದರೆ, ತನಿಖಾಧಿಕಾರಿಗಳು ಪೋಟೊ ನೋಡಿ ಸಾವಿನ ಸಮಯವನ್ನು ಉಲ್ಲೇಖಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ’ ಎಂದರು.‌

‘ದರ್ಶನ್ ಅವರ ಮನೆಯಲ್ಲಿ ₹37.5 ಲಕ್ಷ ಜಪ್ತಿ ಮಾಡಿಕೊಳ್ಳಲಾಗಿತ್ತು ಎಂದು ವಿವರಿಸಲಾಗಿದೆ. ಆ ಹಣವನ್ನು ಕೊಲೆ ಪ್ರಕರಣ ಮುಚ್ಚಿ ಹಾಕಲು ಬಳಸಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಆದರೆ, ಆ ಹಣ ದರ್ಶನ್​ ಅವರಿಗೆ ಮೇ 2ರಂದೇ ಬಂದಿತ್ತು. ಮೋಹನ್ ರಾಜ್ ಎಂಬುವವರು ತಮ್ಮ ಪುತ್ರಿಯ ಆಲ್ಬಂ ಸಾಂಗ್‌ಗೆಂದು ದರ್ಶನ್ ಅವರಿಂದ ಫೆಬ್ರುವರಿಯಲ್ಲಿ ಸಾಲ ಪಡೆದಿದ್ದರು. ಅದನ್ನು ವಾಪಸು ನೀಡಿದ್ದರು. ಸಾಕ್ಷಿಗಳಿಗೆ ಕೊಡಲೆಂದೇ ಹಣ ಸಂಗ್ರಹಿಸಿಟ್ಟಿದ್ದರು ಎನ್ನಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ಸಿಆರ್‌ಪಿಸಿ ಕಲಂ 161 ಮತ್ತು 164ರ ಅಡಿಯಲ್ಲಿ ದಾಖಲಿಸಿರುವ ಸಾಕ್ಷಿದಾರರ ಹೇಳಿಕೆಯಲ್ಲಿ ವ್ಯತ್ಯಾಸವಿದೆ. ನಟ ಚಿಕ್ಕಣ್ಣ ಅವರ ಹೇಳಿಕೆ ಸೇರಿದಂತೆ ಇನ್ನೂ ಕೆಲವರ ಹೇಳಿಕೆಯಲ್ಲಿ ಸಾಮ್ಯತೆಯಿಲ್ಲ’ ಎಂದರು.

‘ರಾತ್ರಿ ವೇಳೆ ಹೇಳಿಕೆ ದಾಖಲಿಸುವ ಅಭ್ಯಾಸ’
‘ಜೂನ್ 18 19ರಂದು ಸ್ವ–ಇಚ್ಛಾ ಹೇಳಿಕೆ ಪಡೆದಿದ್ದು ಎರಡು ಹೇಳಿಕೆಗಳ ಅಂಶಗಳು ವ್ಯತಿರಿಕ್ತವಾಗಿವೆ. ಪೊಲೀಸರಿಗೆ ರಾತ್ರಿ ವೇಳೆ ಹೇಳಿಕೆ ದಾಖಲಿಸುವ ಅಭ್ಯಾಸವಿದೆ’ ಎಂದು ನಾಗೇಶ್‌ ಹೇಳಿದರು. ‘ರಿಮ್ಯಾಂಡ್ ಅರ್ಜಿಯಲ್ಲಿ ಕೆಲವು ಸಾಕ್ಷಿಗಳ ಹೆಸರಿಲ್ಲ. ಕರೆ ವಿವರ ಆಧಾರದ ಮೇರೆಗೆ ಒಳಸಂಚು ಎಂದು ಬಿಂಬಿಸಲಾಗಿದೆ. ಆದರೆ ಪವಿತ್ರಾ ಹಾಗೂ ದರ್ಶನ್ ಇಬ್ಬರೂ ಸ್ನೇಹಿತರು. ಜ.1ರಿಂದ ಜೂನ್ 9ವರೆಗೆ 342 ಬಾರಿ ಕರೆ ಮಾಡಿದ್ದಾರೆ. ಕರೆ ಆಧಾರದಲ್ಲಿ ಕೊಲೆ ಸಂಚು ರೂಪಿಸಲಾಗಿದೆ ಎಂದು ತನಿಖಾಧಿಕಾರಿಗಳು ನಿರ್ಧರಿಸಿದಂತಿದೆ. ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ನಲ್ಲಿ ಕುಳಿತು ಊಟ ಮಾಡಿದರೂ ಸಂಚು ಎಂದು ಭಾವಿಸಬಹುದಾ’ ಎಂದು ವಕೀಲರು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.