ಬೆಂಗಳೂರು: ‘ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ 17ನೇ ಆರೋಪಿ ನಿಖಿಲ್ ನಾಯಕ್, ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳಿದ್ದು, ಜಾಮೀನು ನೀಡಬಾರದು’ ಎಂದು ಪ್ರಾಸಿಕ್ಯೂಷನ್ ವಿಚಾರಣಾ ನ್ಯಾಯಾಲಯಕ್ಕೆ ಬಲವಾಗಿ ಪ್ರತಿಪಾದಿಸಿದೆ.
ಈ ಕುರಿತಂತೆ ನಿಖಿಲ್ ನಾಯಕ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸಿಟಿ ಸಿವಿಲ್ ಮತ್ತು ಸೆಷನ್ಸ್‌ನ 57ನೇ ಕೋರ್ಟ್ ನ್ಯಾಯಾಧೀಶ ಜಯಶಂಕರ್ ಸೋಮವಾರ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್, ‘ಆರೋಪಿ ನಿತಿನ್ ನಾಯಕ್ ಮೃತ ಶರೀರವನ್ನು ಸಾಗಿಸಿದ್ದಾರೆ. ಸಾಕ್ಷ್ಯ ನಾಶ ಮಾಡಿದ್ದಾರೆ. ಘಟನೆಗೂ ಮುನ್ನ ಮತ್ತು ನಂತರ ಪ್ರಕರಣದ 15ನೇ ಆರೋಪಿ ಕಾರ್ತೀಕ ಅಲಿಯಾಸ್ ಕಪ್ಪೆ ಜೊತೆ ಫೋನ್‌ನಲ್ಲಿ ಮಾತನಾಡಿರುವುದು ಪತ್ತೆಯಾಗಿದ್ದು ಪಿತೂರಿಯ ಪ್ರಮುಖ ಆರೋಪಿ ಎನಿಸಿದ್ದಾರೆ. ಅಂತೆಯೇ, ತನಿಖೆ ಇನ್ನೂ ಬಾಕಿ ಇದೆ. ಪ್ರಕರಣದ ಪ್ರಮುಖ ಆರೋಪಿಯಾದ ಎ–2 ಪ್ರಭಾವಿ ವ್ಯಕ್ತಿಯಾಗಿದ್ದು ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಘಟನೆ ನಡೆದ ನಂತರ ನಿಖಿಲ್ ನಾಯಕ್ ಸ್ವತಃ ಪೊಲಿಸರಿಗೆ ಶರಣಾಗಿರುವುದಲ್ಲದೆ, ಅವರಿಂದ ನಾಲ್ಕೂವರೆ ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ನಿಖಿಲ್ ಆಕ್ಷೇಪಿಸಿರುವಂತೆ ಪೊಲೀಸ್ ಕಸ್ಟಡಿಗೆ ಪಡೆಯುವ ಮುನ್ನ ರಿಮ್ಯಾಂಡ್ ಅರ್ಜಿ ಸಲ್ಲಿಸಿಲ್ಲ ಎಂಬುದು ಸಮರ್ಥನೀಯವಲ್ಲ. ಆವತ್ತೇ ಆರೋಪಿ ಪರ ವಕೀಲರಿಗೆ ನೀಡಲಾಗಿದೆ. ಅಪರಾಧ ಪ್ರಕ್ರಿಯಾ ಸಂಹಿತೆಯ ಕಲಂ 167 ಮತ್ತು 172ರ ಪ್ರಕಾರ ಈ ಆರೋಪಿಗೆ ರಿಮ್ಯಾಂಡ್ ಅರ್ಜಿ ಕೊಡುವ ಪ್ರಶ್ನೆಯೇ ಇಲ್ಲ’ ಎಂದರು. ಆರೋಪಿ ಪರ ವಕೀಲ ರಂಗನಾಥ ರೆಡ್ಡಿ ವಾದ ಮಂಡಿಸಲು ಇನ್ನಷ್ಟು ಕಾಲಾವಕಾಶ ಕೋರಿದ ಕಾರಣ ವಿಚಾರಣೆಯನ್ನು ಇದೇ 6ಕ್ಕೆ ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.