ADVERTISEMENT

ರೇಣುಕಸ್ವಾಮಿ ಕೊಲೆ: ಸಾಕ್ಷ್ಯ ಸಂಗ್ರಹ ಚುರುಕು, ಮರ್ಮಾಂಗಕ್ಕೆ ಎಲೆಕ್ಟ್ರಿಕ್ ಶಾಕ್

ದೃಶ್ಯಾವಳಿ ತೋರಿಸಿ ಆರೋಪಿಗಳ ವಿಚಾರಣೆ: ಕೃತ್ಯದ ಬಾಯ್ಬಿಡುತ್ತಿರುವ ಆರೋಪಿಗಳು

ಅದಿತ್ಯ ಕೆ.ಎ.
Published 16 ಜೂನ್ 2024, 23:30 IST
Last Updated 16 ಜೂನ್ 2024, 23:30 IST
<div class="paragraphs"><p>ದರ್ಶನ್‌, ಪವಿತ್ರಾಗೌಡ</p></div>

ದರ್ಶನ್‌, ಪವಿತ್ರಾಗೌಡ

   

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ನಗರದ ಹಲವು ಕಡೆ ಸಾಕ್ಷ್ಯಾಧಾರಗಳಿಗಾಗಿ ಶೋಧ ನಡೆಸಿ, ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೃತ್ಯ ಎಸಗಿದ್ದ ಬಳಿಕ ಆರೋಪಿಗಳು ಭೇಟಿ ನೀಡಿದ್ದ ಪ್ರತಿ ಸ್ಥಳಕ್ಕೂ ತನಿಖಾಧಿಕಾರಿಗಳ ತಂಡ ಭೇಟಿ ನೀಡಿ ಶೋಧಿಸುತ್ತಿದೆ.

ಇನ್ನೊಂದೆಡೆ ಪೊಲೀಸ್‌ ಕಸ್ಟಡಿಯಲ್ಲಿರುವ ನಟ ದರ್ಶನ್‌, ಅವರ ಆಪ್ತೆ ಪವಿತ್ರಾಗೌಡ ಸೇರಿ 16 ಆರೋಪಿಗಳ ವಿಚಾರಣೆ ತೀವ್ರಗೊಂಡಿದೆ.

ADVERTISEMENT

‘ಅನ್ನಪೂರ್ಣೇಶ್ವರಿ ನಗರ ಠಾಣೆಯ ಸೆಲ್‌ನಲ್ಲಿರುವ ಆರೋಪಿಗಳನ್ನು ಭಾನುವಾರ ಸಹ ಪ್ರತ್ಯೇಕ ಕಡೆ ಇರಿಸಿ ಪ್ರಶ್ನೆಗಳನ್ನು ಕೇಳಲಾಯಿತು. ಸಮರ್ಪಕ ಉತ್ತರ ನೀಡದಿದ್ದಾಗ ಡಿಜಿಟಲ್‌ ಸಾಕ್ಷ್ಯಾಧಾರ ಮುಂದಿಟ್ಟುಕೊಂಡು ತನಿಖಾಧಿಕಾರಿಗಳು, ಆರೋಪಿಗಳ ಬಾಯ್ಬಿಡಿಸುವ ಕೆಲಸ ಮಾಡಿದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತಮ್ಮದೇ ಶೈಲಿಯಲ್ಲಿ ತನಿಖೆ ನಡೆಸುತ್ತಿದ್ದಾರೆ’ ಎಂಬುದು ಗೊತ್ತಾಗಿದೆ.

‘ಕೊಲೆಗೆ ಷಡ್ಯಂತ್ರ ರೂಪಿಸಿದವರು ಯಾರು? ರೇಣುಕಸ್ವಾಮಿಯನ್ನು ಅಪಹರಿಸಲು ಹೇಳಿದ್ದು ಯಾರು? ಎಷ್ಟು ಹೊತ್ತಿಗೆ ರೇಣುಕಸ್ವಾಮಿಯನ್ನು ಶೆಡ್‌ ಒಳಕ್ಕೆ ಕರೆದೊಯ್ಯಲಾಯಿತು. ಹಲ್ಲೆ ನಡೆಸಿದವರು ಯಾರು? ದರ್ಶನ್‌, ಪವಿತ್ರಾಗೌಡ ಸ್ಥಳದಲ್ಲಿ ಇದ್ದರೆ? ನಿಮಗೆ ಶೆಡ್‌ ಬಳಿಗೆ ಬರಲು ಹೇಳಿದವರ್‍ಯಾರು... ಎಂಬೆಲ್ಲಾ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಮಾಹಿತಿ ದಾಖಲು ಮಾಡಿಕೊಳ್ಳಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

‘ಪ್ರಕರಣದಲ್ಲಿ ಡಿಜಿಟಲ್‌ ಸಾಕ್ಷ್ಯವೇ ಪ್ರಮುಖ ಪಾತ್ರ ವಹಿಸಲಿದ್ದು ಆರೋಪಿಗಳು ಕೃತ್ಯ ಎಸಗಿ ಓಡಾಟ ನಡೆಸಿರುವ ಎಲ್ಲ ಸ್ಥಳಗಳಲ್ಲಿ ದೊರೆತ ಸಿಸಿ ಟಿ.ವಿ ಕ್ಯಾಮೆರಾಗಳ ದೃಶ್ಯಾವಳಿ, ಸಾಂದರ್ಭಿಕ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಜಪ್ತಿ ಮಾಡಿಕೊಂಡಿರುವ 16 ಮೊಬೈಲ್‌ಗಳ ದತ್ತಾಂಶ ಹಾಗೂ ಕರೆಗಳ ವಿವರ ಪಡೆದುಕೊಳ್ಳಲಾಗುತ್ತಿದೆ. ಇನ್ನೂ ಕೆಲವು ಸ್ಥಳಗಳಲ್ಲಿ ಮಹಜರು ನಡೆಸಬೇಕಿದ್ದು ಎಫ್‌ಎಸ್‌ಎಲ್‌ ತಂಡವು ತನ್ನದೇ ಮಾದರಿಯಲ್ಲಿ ಮಾಹಿತಿ ಸಂಗ್ರಹಿಸುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿ ಮಾಹಿತಿ ಸಂಗ್ರಹಿಸಲಾಗುವುದು. ಕೃತ್ಯ ಎಸಗಿದವರ ಮೇಲಿನ ಆರೋಪವನ್ನು ಸಾಬೀತು ಪಡಿಸಲು ಬೇಕಾದ ಎಲ್ಲ ಸಾಕ್ಷ್ಯವನ್ನು ಕಲೆ ಹಾಕಲಾಗುತ್ತಿದೆ. ಒಂದು ಸಣ್ಣ ಅಂಶವನ್ನೂ ಬಿಡುತ್ತಿಲ್ಲ. ಕೃತ್ಯ ನಡೆದ ಸ್ಥಳದಲ್ಲಿದ್ದ ಎಲ್ಲ ವಸ್ತುಗಳನ್ನೂ ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ಪ್ರಕರಣದ ಎ–1 ಆರೋಪಿ ಪವಿತ್ರಾಗೌಡ ಅವರ ರಾಜರಾಜೇಶ್ವರಿ ನಗರದ ಮನೆಯಲ್ಲಿ ಪೊಲೀಸರು ಭಾನುವಾರ ಮಹಜರು ನಡೆಸಿದರು. ಆರೋಪಿ ಮನೆಯಲ್ಲಿ ಕೆಲವು ವಸ್ತುಗಳು ಪತ್ತೆಯಾಗಿದ್ದು ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಪವಿತ್ರಾಗೌಡ ಅವರ ಮ್ಯಾನೇಜರ್ ಪವನ್‌ ಮನೆಯಲ್ಲೂ ಶೋಧ ನಡೆಸಲಾಗಿದೆ.

‘ರಾಮನಗರ ಜಿಲ್ಲೆಯ ಅಕ್ಕೂರು ಗ್ರಾಮದ ಪವನ್, ಆರ್‌ಆರ್ ನಗರದಲ್ಲಿ ಕೊಠಡಿ ಬಾಡಿಗೆಗೆ ಪಡೆದು ನೆಲೆಸಿದ್ದರು. ಅವರ ಕೊಠಡಿ ಪರಿಶೀಲಿಸಲಾಗಿದೆ. ಕೃತ್ಯ ನಡೆದ ದಿನ ಪವನ್‌ ಧರಿಸಿದ್ದ ಶೂ, ಬಟ್ಟೆ ಜಪ್ತಿ ಮಾಡಲಾಗಿದೆ. ಶರ್ಟ್‌, ಪ್ಯಾಂಟ್‌ನಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ರೇಣುಕಸ್ವಾಮಿ ಕಳುಹಿಸಿದ್ದರು ಎನ್ನಲಾದ ಅಶ್ಲೀಲ ಸಂದೇಶಗಳನ್ನು ಆರೋಪಿ ಪವನ್, ದರ್ಶನ್‌ಗೆ ಕಳುಹಿಸಿದ್ದರು. ಇದರಿಂದ ದರ್ಶನ್ ಕೆರಳಿದ್ದರು. ಪವನ್‌ ಸಹ ಯುವತಿ ಹೆಸರಿನಲ್ಲಿ ರೇಣುಕಸ್ವಾಮಿಗೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ್ದರು’ ಎಂದು ಮೂಲಗಳು ಹೇಳಿವೆ.

‘ರೇಣುಕಸ್ವಾಮಿ ಮೇಲೆ ಹಲ್ಲೆ ನಡೆಸಲು ಆರೋಪಿಗಳು ಕೆಲವು ವಿದ್ಯುತ್‌ ಉಪಕರಣಗಳನ್ನು ಬಳಸಿದ್ದರು. ಅವುಗಳ ಜಪ್ತಿಗೆ ಶೋಧ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಠಾಣೆಯತ್ತ ಬರುವವರ ಸಂಖ್ಯೆ ವಿರಳ: ಆರಂಭದಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯತ್ತ ದೊಡ್ಡ ಸಂಖ್ಯೆಯಲ್ಲಿ ದರ್ಶನ್‌ ಅಭಿಮಾನಿಗಳು ಬರುತ್ತಿದ್ದರು. ದಿನ ಕಳೆದಂತೆ ಠಾಣೆಯತ್ತ ಬರುವವರ ಸಂಖ್ಯೆ ಇಳಿಮುಖವಾಗಿದೆ. ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು ಬಂದ ಕೆಲವರನ್ನೂ ಪೊಲೀಸರು ಸ್ಥಳದಲ್ಲಿ ನಿಲ್ಲುವುದಕ್ಕೆ ಬಿಡದೇ ಚದುರಿಸುತ್ತಿದ್ದಾರೆ. ಭಾನುವಾರ ಠಾಣೆ ಸುತ್ತಮುತ್ತ ಅಷ್ಟಾಗಿ ಜನರು ಕಾಣಿಸಿಕೊಳ್ಳಲಿಲ್ಲ.

ಕಸ್ಟಡಿ ಅಂತ್ಯವಾದ ಮೇಲೆ ಜಾಮೀನಿಗೆ ಅರ್ಜಿ

‘ಪೊಲೀಸ್‌ ಕಸ್ಟಡಿ ಅಂತ್ಯವಾದ ಮೇಲೆ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗುವುದು’ ಎಂದು ದರ್ಶನ್‌ ಪರ ವಕೀಲ ಅನಿಲ್‌ ಬಾಬು ಹೇಳಿದರು. ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಭಾನುವಾರ ಬೆಳಿಗ್ಗೆ ಬಂದಿದ್ದ ಅವರು ದರ್ಶನ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ‘ಆರೋಪಿಗಳನ್ನು ಶನಿವಾರವೇ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರಿಂದ ತನಿಖೆ ಪೂರ್ಣಗೊಂಡಿದೆ ಎಂದು ಭಾವಿಸಿದ್ದೆವು. ಮತ್ತೆ ಪೊಲೀಸ್‌ ಕಸ್ಟಡಿಗೆ ಕೇಳುತ್ತಾರೆಂಬ ಅಂದಾಜು ಇರಲಿಲ್ಲ. ಇನ್ನೂ ಹೆಚ್ಚಿನ ವಿಚಾರಣೆಗಾಗಿ 10 ದಿನ ಪೊಲೀಸ್‌ ಕಸ್ಟಡಿಗೆ ನೀಡುವಂತೆ ವಿಶೇಷ ಪ್ರಾಸಿಕ್ಯೂಟರ್‌ ಪಿ.ಪ್ರಸನ್ನಕುಮಾರ್ ಅವರು ಮನವಿ ಮಾಡಿದ್ದರು. ಕೋರ್ಟ್‌ ಮತ್ತೆ ಪೊಲೀಸ್‌ ಕಸ್ಟಡಿಗೆ ನೀಡಿದೆ. ದರ್ಶನ್ ಅವರ ಜೊತೆಗೆ ಚರ್ಚಿಸಲಾಗಿದೆ. ಕಾನೂನು ಹೋರಾಟ ಮುಂದುವರಿಸುತ್ತೇವೆ’ ಎಂದು ಹೇಳಿದರು.

ಮರ್ಮಾಂಗಕ್ಕೆ ಎಲೆಕ್ಟ್ರಿಕ್‌ ಶಾಕ್‌

ರೇಣುಕಸ್ವಾಮಿ ಕೊಲೆ ಪ್ರಕರಣ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬಂದಿದ್ದು ದೇಹದ 39 ಕಡೆ ಗಾಯ ಆಗಿರುವುದು ಪತ್ತೆಯಾಗಿದೆ. ಪ್ರಾಥಮಿಕ ವರದಿಯಲ್ಲಿ 15 ಕಡೆ ಗಾಯವಾಗಿದೆ ಎಂದು ವೈದ್ಯರು ಉಲ್ಲೇಖಿಸಿದ್ದರು.

‘ರೇಣುಕಸ್ವಾಮಿಗೆ ಎಲೆಕ್ಟ್ರಿಕ್‌ ಶಾಕ್‌ ನೀಡಲಾಗಿದ್ದು ಹಲವು ಕಡೆ ಗಾಯವಾಗಿದೆ’ ಎಂಬುದನ್ನು ವಿಶೇಷ ಪ್ರಾಸಿಕ್ಯೂಟರ್‌ ಪ್ರಸನ್ನಕುಮಾರ್‌ ಅವರು ಕೋರ್ಟ್‌ನಲ್ಲಿ ಉಲ್ಲೇಖಿಸಿದ್ದರು.

‘ಮರ್ಮಾಂಗಕ್ಕೆ ಕಾಲಿನಿಂದ ಒದೆಯಲಾಗಿದೆ. ಮರ್ಮಾಂಗಕ್ಕೆ ಎಲೆಕ್ಟ್ರಿಕ್‌ ಶಾಕ್‌ ನೀಡಲಾಗಿದೆ. ತಲೆ ಹಾಗೂ ಶ್ವಾಸಕೋಶಕ್ಕೆ ಬಲವಾದ ಪೆಟ್ಟು ಬಿದ್ದಿದೆ. ಮಿದುಳಿನಲ್ಲಿ ತೀವ್ರ ರಕ್ತಸ್ರಾವವಾಗಿದೆ. ಮೈಮೇಲಿನ ಹಲವು ಭಾಗಗಳಲ್ಲಿ ಸುಟ್ಟ ಗಾಯಗಳಾಗಿವೆ. ಮೂಳೆಗಳು ಮುರಿದು ಶ್ವಾಸಕೋಶಕ್ಕೆ ಚುಚ್ಚಿಕೊಂಡಿವೆ. ಇದರಿಂದ ಸಾವು ಸಂಭವಿಸಿದೆ’ ಎಂದು ವರದಿಯಲ್ಲಿ ವೈದ್ಯರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.