ADVERTISEMENT

ದರ್ಶನ್ ಪ್ರಕರಣ: ಭಯಗೊಂಡು ಊರೂರು ಸುತ್ತಿದ್ದ ಪ್ರಮುಖ ಸಾಕ್ಷಿ

ಕೆ.ಎಸ್.ಸುನಿಲ್
Published 26 ನವೆಂಬರ್ 2024, 0:16 IST
Last Updated 26 ನವೆಂಬರ್ 2024, 0:16 IST
ದರ್ಶನ್‌
ದರ್ಶನ್‌   

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದ ಪ್ರತ್ಯಕ್ಷ್ಯ ಸಾಕ್ಷಿಯೊಬ್ಬರು ಭೀತಿಗೊಳಗಾಗಿ ಹತ್ತು ದಿನ ಊರೂರು ಸುತ್ತಾಡಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ. ನಂತರ ಪೊಲೀಸರು ಅವರನ್ನು ಸಂಪರ್ಕಿಸಿ, ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೇಳಿಕೆ ದಾಖಲಿಸಿದ್ದಾರೆ.

ನಟ ದರ್ಶನ್ ಮತ್ತು ಇತರೆ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಸಲ್ಲಿಸಿರುವ ಹೆಚ್ಚುವರಿ ದೋಷಾರೋಪ ಪಟ್ಟಿಯಲ್ಲಿ ಡಿಜಿಟಿಲ್ ಸಾ‌ಕ್ಷ್ಯಾಧಾರಗಳು, ಎಫ್‌ಎಸ್‌ಎಲ್ ಹಾಗೂ ಸಿಎಫ್‌ಎಸ್‌ಎಲ್‌ ಪರೀಕ್ಷಾ ವರದಿಗಳು, ಮೊಬೈಲ್ ಕರೆಗಳ ವಿವರ ಹಾಗೂ ಸಾಕ್ಷಿಗಳ ಹೇಳಿಕೆಯನ್ನು ಒಳಗೊಂಡ ಮಾಹಿತಿಯನ್ನು ಲಗತ್ತಿಸಲಾಗಿದೆ.

ದರ್ಶನ್ ಮತ್ತು ಇತರೆ ಆರೋಪಿಗಳು ರೇಣುಕಸ್ವಾಮಿ ಕೊಲೆ ಮಾಡುವುದನ್ನು ದೂರದಲ್ಲಿ ನಿಂತು ನೋಡಿದ್ದ ಸಾಕ್ಷಿ, ಘಟನೆ ಬಳಿಕ ಭಯಗೊಂಡು ಜೂನ್ 11 ರಂದು ಹುಟ್ಟೂರು ಹಾಸನಕ್ಕೆ ತೆರಳಿದ್ದರು. ಸ್ನೇಹಿತನಿಗೆ ಕೊಲೆ ಕುರಿತು ಮಾಹಿತಿ ನೀಡಿ, ತನ್ನ ಪಾತ್ರವೇನೂ ಇಲ್ಲವೆಂದು ತಿಳಿಸಿದ್ದರು. ಪೊಲೀಸರು ತನ್ನ ವಿರುದ್ಧ ಪ್ರಕರಣ ದಾಖಲಿಸಬಹುದೆಂಬ ಭಯದಿಂದ ಎರಡು ದಿನ ಮನೆಯಲ್ಲಿದ್ದು, ನಂತರ ಸ್ನೇಹಿತರ ಜೊತೆ ಗೋವಾ ಪ್ರವಾಸಕ್ಕೆ ತೆರಳಿದ್ದರು ಎಂಬ ಅಂಶವನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. 

‘ಹತ್ಯೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರೆ ಆರೋಪಿಗಳು ಬಂಧನವಾದ ವಿಷಯ ಗೋವಾ ಪ್ರವಾಸದಲ್ಲಿದ್ದಾಗಲೇ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಅಲ್ಲಿಂದ ಬೆಂಗಳೂರಿಗೆ ಬಂದಿದ್ದ ಸಾಕ್ಷಿ, ಈ ವಿಚಾರವನ್ನು ಯಾರಿಗೆ ತಿಳಿಸಬೇಕು ಎಂಬುದು ತಿಳಿಯದೇ ಭಯದಲ್ಲಿದ್ದರು. ಪುನಃ ಗೋವಾ, ತಿರುಪತಿ ಮತ್ತು ಬೇರೆ ಪ್ರದೇಶಗಳಿಗೆ ತೆರಳಿ ವಾಸ್ತವ್ಯ ಹೂಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

‘ಪಟ್ಟಣಗೆರೆ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದವರ ಮೂಲಕ ಮಾಹಿತಿ ಪಡೆದ ಪೊಲೀಸರು ಸಾಕ್ಷಿಯನ್ನು ಸಂಪರ್ಕಿಸಿದರು. ಜೂನ್ 20ರಂದು ತನಿಖಾಧಿಕಾರಿ ಮುಂದೆ ಹಾಜರಾಗಿ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದರು. ಹಾಗಾಗಿ ಈತನನ್ನು ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಿ, ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.  

ಕೃತ್ಯ ನಡೆದ ಸ್ಥಳದಲ್ಲಿ ದರ್ಶನ್ ಇದ್ದರು ಎಂಬುದಕ್ಕೆ ಪುರಾವೆಯಾಗಿ ಆರೋಪಿಗಳ ಮೊಬೈಲ್‌ನಲ್ಲಿ ಎಂಟು ಫೋಟೊಗಳನ್ನು ಮರು ಸಂಗ್ರಹಿಸಲಾಗಿದೆ. ರೇಣುಕಸ್ವಾಮಿ ಅವರನ್ನು ಅಪಹರಿಸಿದ್ದ ಜಗದೀಶ್ ಮೊಬೈಲ್‌ನಲ್ಲಿ 4, ಅನುಕುಮಾರ್ ಮೊಬೈಲ್‌ನಲ್ಲಿ 2 ಹಾಗೂ ಚಾಲಕ ರವಿ ಮೊಬೈಲ್‌ನಲ್ಲಿ ಎರಡು ಫೋಟೊಗಳನ್ನು ಎಫ್‌ಎಸ್‌ಎಲ್ ತಜ್ಞರು ಮರು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯದ ಬಳಿಕ ದರ್ಶನ್ ಹೊರಡುವ ಸಂದರ್ಭದಲ್ಲಿ ಆರೋಪಿಗಳು ಫೋಟೊ ತೆಗೆಸಿಕೊಂಡಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.

ಪಟ್ಟಣಗೆರೆಯ ಶೆಡ್‌ನಲ್ಲಿ ಜೂನ್‌ 9ರಂದು ರೇಣುಕಸ್ವಾಮಿ ಕೊಲೆ ನಡೆದಿತ್ತು. ಕೊಲೆ ಆರೋಪದಡಿ ನಟ ದರ್ಶನ್, ಅವರ ಆಪ್ತೆ ಪವಿತ್ರಾಗೌಡ ಸೇರಿ 17 ಮಂದಿಯನ್ನು ಪೊಲೀಸರು ಬಂಧಿಸಿದ್ದರು.

ಹಣದ ಮೂಲ ಹುಡುಕಾಟ

ಆರೋಪಿಗಳ ಹಣಕಾಸು ವಹಿವಾಟಿನ ಬಗ್ಗೆಯೂ ಮಾಹಿತಿ ಸಂಗ್ರಹಕ್ಕೆ ತನಿಖಾಧಿಕಾರಿಗಳು ಮುಂದಾಗಿದ್ದಾರೆ. ಹದಿನಾಲ್ಕು ಆರೋಪಿಗಳ ಬ್ಯಾಂಕ್ ಖಾತೆ ವಿವರ ನೀಡುವಂತೆ ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಐಸಿಐಸಿಐ ಕೋಟಕ್ ಮಹಿಂದ್ರಾ ಎಚ್‌ಡಿಎಫ್‌ಸಿ ಕೆನರಾ ಬ್ಯಾಂಕ್ ವ್ಯವಸ್ಥಾಪಕರನ್ನು ತನಿಖಾ ತಂಡ ಕೋರಿದೆ.

ಕೊಲೆ ಪ್ರಕರಣ ಮುಚ್ಚಿ ಹಾಕಲು ₹ 70 ಲಕ್ಷ ಹಣ ಬಳಕೆ ಮಾಡಿರುವುದನ್ನು ತನಿಖೆ ವೇಳೆ ಪೊಲೀಸರು ಪತ್ತೆ ಮಾಡಿದ್ದರು. ಆರೋಪಿಗಳ ಬ್ಯಾಂಕ್ ಖಾತೆಗಳಿಗೆ ಲಕ್ಷಾಂತರ ರೂಪಾಯಿ ಹಣ ವರ್ಗಾವಣೆ ಆಗಿತ್ತು. ‌‌ಮತ್ತಷ್ಟು ವಹಿವಾಟು ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಹಾಗಾಗಿ ದಾಖಲೆ ಸಂಗ್ರಹಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.