ADVERTISEMENT

ಹಿಂದುಳಿದ ವರ್ಗಗಳ ಆಯೋಗದ ವರದಿ ಜಾರಿಗೊಳಿಸಿ: ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 13:08 IST
Last Updated 20 ಆಗಸ್ಟ್ 2021, 13:08 IST
ಎಂ.ವೆಂಕಟಸ್ವಾಮಿ
ಎಂ.ವೆಂಕಟಸ್ವಾಮಿ   

ಬೆಂಗಳೂರು: ‘ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಗಣತಿ ವರದಿಯನ್ನು ರಾಜ್ಯ ಸರ್ಕಾರ ಕೂಡಲೇ ಬಹಿರಂಗಪಡಿಸಬೇಕು. ಇದನ್ನು ಜಾರಿಗೊಳಿಸುವ ಮೂಲಕ ಹಿಂದುಳಿದ ವರ್ಗಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ಮುಂದಾಗಬೇಕು’ ಎಂದು ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಅಠವಳೆ) ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಆಗ್ರಹಿಸಿದ್ದಾರೆ.

ಪಕ್ಷದ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಡಿ.ದೇವರಾಜ ಅರಸು ಅವರ 106ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡದವರ ಭೂಮಿ ಪರಭಾರೆ ತಡೆಯಲು ಎಸ್‌ಸಿ/ಎಸ್‌ಟಿ ಭೂ ಪರಭಾರೆ ನಿಷೇಧ ಕಾಯ್ದೆ (ಪಿಟಿಸಿಎಲ್‌) ಜಾರಿಗೆ ತರಲಾಗಿದೆ. ಇದಕ್ಕೆ ಸಮಗ್ರ ತಿದ್ದುಪಡಿ ತರುವ ಮಸೂದೆ ಅಂಗೀಕರಿಸಿ ಅರಸು ಮತ್ತು ಬಿ.ಬಸವಲಿಂಗಪ್ಪ ಅವರ ಕಾರ್ಯವನ್ನು ಗೌರವಿಸಬೇಕು. ಪ್ರಬಲ ಜಾತಿಗಳ ಒತ್ತಡಕ್ಕೆ ಮಣಿದು ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿರುವ ರಾಜ್ಯ ಸರ್ಕಾರ, ಅಲೆಮಾರಿ ಜನಾಂಗಗಳ ಅಭಿವೃದ್ಧಿ ನಿಗಮ ಸ್ಥಾಪನೆಗೂ ಮುಂದಾಗಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ದೇವರಾಜ ಅರಸು ಅವರು ವಾಸವಿದ್ದ ಸದಾಶಿವನಗರದ ಮನೆಯನ್ನು ಸ್ಮಾರಕವಾಗಿ ರೂಪಿಸಬೇಕು. ಅಲ್ಲಿ ವಿದ್ಯಾರ್ಥಿನಿ ನಿಲಯವನ್ನೂ ಸ್ಥಾಪಿಸಬೇಕು. ಅರಸು ಅವರ ಹುಟ್ಟೂರಾದ ಕಲ್ಲಹಳ್ಳಿಯ ಸರ್ವಾಂಗೀಣ ಅಭಿವೃದ್ಧಿ ಮರೀಚಿಕೆಯಾಗಿದೆ. ಅರಸು ಅವರ ಮನೆ ಹಾಗೂ ಆವರಣವನ್ನು ಪಾರಂಪರಿಕ ಮತ್ತು ಸಾಂಸ್ಕೃತಿಕ ಉದ್ಯಾನ ಹಾಗೂ ವಸ್ತು ಸಂಗ್ರಹಾಲಯವನ್ನಾಗಿಸುವ ಕಾರ್ಯವೂ ಕುಂಠಿತವಾಗಿದೆ. ಈ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು’ ಎಂದು ತಿಳಿಸಿದ್ದಾರೆ.

ಪ್ರಾಧ್ಯಾಪಕ ಪ್ರೊ.ಬಿ.ಕೆ.ರವಿ, ಆರ್‌.ಪಿ.ಐ. ರಾಜ್ಯ ಉಪಾಧ್ಯಕ್ಷ ಪಿ.ಪಿಳ್ಳರಾಜು ಬೋಸಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.