ಬಳ್ಳಾರಿ: ‘ಮೀಸಲಾತಿ ನೀತಿ ಪುನರ್ ರೂಪಿಸಿ, ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಈಗ ಕಾಲ ಬದಲಾ
ಗಿದ್ದು, ಸರ್ಕಾರ ಈ ವಿಚಾರದಲ್ಲಿ ಕಾರ್ಯೋನ್ಮುಖವಾಗಬೇಕು’ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಸಲಹೆ ನೀಡಿದರು.
‘ಜಗತ್ತಿನಲ್ಲಿ ವರ್ಣ, ಲಿಂಗ, ಜಾತಿ, ಸಂಸ್ಕೃತಿ, ಆಚಾರ, ವಿಚಾರದಲ್ಲಿ ಇವತ್ತಿಗೂ ಭೇದ ಭಾವವಿದೆ. ದೇಶದಲ್ಲಿ ಬಡತನ, ಅಸಮಾನತೆ, ಕೀಳರಿಮೆ ಎಲ್ಲಿಯವರೆಗೆ ಇರುವುದೋ ಅಲ್ಲಿವರೆಗೂ ಮೀಸಲಾತಿ ಇರಬೇಕು’ ಎಂದು ಅವರು ಅಭಿಪ್ರಾಯಪಟ್ಟರು.
ನಗರದ ಬಿಡಿಎಎ ಫುಟ್‌ಬಾಲ್ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಭಾರತ ಸಂವಿಧಾನ ಮತ್ತು ಸಾಮಾಜಿಕ ನ್ಯಾಯ’ ವಿಚಾರ ಸಂಕಿರಣ ಉದ್ದೇಶಿಸಿ ಅವರು ಮಾತನಾಡಿದರು.
‘ಮೀಸಲಾತಿ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಜನರಿಗೆ ಸಂವಿಧಾನ ಬಗ್ಗೆತಿಳಿವಳಿಕೆಯಿಲ್ಲ. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು ಛಲ ಬಿಡದೆ ಜೀವನದಲ್ಲಿ ಮುಂದೆ ಬರಬೇಕು’ ಎಂದರು.
‘ರಾಜ್ಯದ 6 ಆಯೋಗಗಳ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಆದರೆ, ಎಸ್ಸಿ, ಎಸ್ಟಿ ಆಯೋಗದ ಅಧ್ಯಕ್ಷನಾಗಿ ಕೆಲಸದ ಮಾಡಿದ್ದು ತೃಪ್ತಿ ಇದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆ ತಂದವರು ಡಾ.ಬಿ.ಆರ್ ಅಂಬೇಡ್ಕರ್. ಬುದ್ಧ, ಬಸವ ಅವರೂ ಆಯಾ ಕಾಲಘಟ್ಟದಲ್ಲಿ ಅಸಮಾನತೆ ಹೋಗಲಾಡಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು’ ಎಂದರು.
‘ಶೇ 17ರಷ್ಟು ಎಸ್ಸಿ ಮೀಸಲಾತಿಯಲ್ಲಿ ಮಹಿಳೆಯರು, ಮಕ್ಕಳು, ಕಾರ್ಮಿಕರು, ರಾಜಕಾರಣಿಗಳಿಗೂ ಮೀಸಲಾತಿ ನೀಡ
ಲಾಗಿದೆ. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದಲ್ಲಿ ನಮ್ಮ ಜನರಿಗೆ ಮೀಸಲಾತಿ ಸಿಕ್ಕಿದೆ. ಮೀಸಲಾತಿ ಕೆಲವೊಂದಿಷ್ಟು ಬದಲಾವಣೆ ತಂದಿದೆ’ ಎಂದರು.
‘ಮತಾಂತರಗೊಂಡ ದಂಪತಿಗಳಿಗೆ ಜನಿಸುವ ಮಕ್ಕಳು ಯಾವ ಜಾತಿಗೆ ಸೇರಬೇಕು? ಮೀಸಲಾತಿಯಲ್ಲಿ ಸಮಸ್ಯೆಗಳಿರುವುದು ನಿಜ. ಇವುಗಳಿಗೆ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲು ಸರ್ಕಾರ ಪ್ರಯತ್ನ ಮಾಡಬೇಕು’ ಎಂದು ಕಿವಿಮಾತು ಹೇಳಿದರು.
‘ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲವಾದ್ದರಿಂದ ರೈತರು ಅರ್ಥಿಕವಾಗಿ ದಿವಾಳಿಯಾಗಿ ಕಳ್ಳರು, ದರೋಡೆಕೋರರು ಆಗುತ್ತಿದ್ದಾರೆ. ಮುಗ್ಧ ರೈತರನ್ನು ಮೀಸಲಾತಿ ಹೆಸರಲ್ಲಿ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಕೃಷಿ ಬಿಕ್ಕಟ್ಟು ಪರಿಹಾರಕ್ಕಾಗಿ ಚಿಂತನೆ ಮಾಡಬೇಕಾಗಿದೆ. ಸಮಾಜದ ಪ್ರತಿಯೊಂದು ವರ್ಗದಲ್ಲಿ ರೈತರಿದ್ದಾರೆ. ಜನಹಿತಕ್ಕಾಗಿ ಕೆಲಸ ಮಾಡಬೇಕಾಗಿದ್ದ ಸ್ವಾಮೀಜಿಗಳು ಜಾತಿ, ಸ್ವಾರ್ಥಕ್ಕೆ ಶರಣಾಗಿದ್ದಾರೆ’ ಎಂದು ವಿಷಾದಿಸಿದರು.
ಮೀಸಲಾತಿ ಕೂಗು: ‘ರಾಜ್ಯದಲ್ಲಿ 44 ಜಾತಿಗಳು ಮೀಸಲಾತಿಗೆ ಹೋರಾಡುತ್ತಿವೆ. ಸಂವಿಧಾನ ಬಂದಾಗ 1947ರಲ್ಲಿ ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ಕೊಟ್ಟಿದೆ. 75 ವರ್ಷಗಳ ನಂತರ ರೈತರು ಮೀಸಲಾತಿ ಕೇಳುತ್ತಿದ್ದಾರೆ. ಗುಜರಾತಿನಲ್ಲಿ ಪಟೇಲರು, ಮಹಾರಾಷ್ಟ್ರದಲ್ಲಿ ಮರಾಠರು ಮೀಸಲಾತಿ ಕೇಳುತ್ತಿದ್ದಾರೆ. ಸದ್ಯ ದೇಶದ ಪ್ರತಿಯೊಂದು ರಾಜ್ಯದಲ್ಲಿ ಮೀಸಲಾತಿ ಕೂಗು ಎದ್ದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.