ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆಸುವ ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಮೀಸಲಾತಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಮೀಸಲಾತಿ ಕಲ್ಲಿಸುವಾಗಲೂ ಶೇ 33ರಷ್ಟು ಮಹಿಳೆಯರಿಗೆ ಮೀಸಲಿಡುವಂತೆಯೂ ಸೂಚಿಸಿದೆ.
ಸರ್ಕಾರಿ ಇಲಾಖೆಗಳಲ್ಲಿ ವಿವಿಧ ಹಂತದ ಸಿಬ್ಬಂದಿ ನೇಮಕಾತಿಯನ್ನು ಹೊರಗುತ್ತಿಗೆ ಆಧಾರದಲ್ಲಿ ವಿವಿಧ ಏಜೆನ್ಸಿಗಳ ಮೂಲಕ ನೇಮಕ ಮಾಡಿಕೊಳ್ಳುತ್ತಿರುವುದರಿಂದ ಮೀಸಲಾತಿ ಸಿಗುತ್ತಿಲ್ಲ. ಏಜೆನ್ಸಿಗಳು ತಮಗೆ ಬೇಕಾದವರಿಗೆ ಉದ್ಯೋಗ ನೀಡುತ್ತಿರುವುದರಿಂದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಸಮುದಾಯದವರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಇಲ್ಲಿಯೂ ಕಡ್ಡಾಯ ಮೀಸಲಾತಿ ಜಾರಿ ಮಾಡಬೇಕು ಎಂಬ ಹಕ್ಕೊತ್ತಾಯ ಬಹಳ ಕಾಲದಿಂದ ಇತ್ತು.
2023ರ ಡಿಸೆಂಬರ್ 21ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊರಗುತ್ತಿಗೆಯಲ್ಲೂ ಮೀಸಲಾತಿ ನೀತಿಯನ್ನು ಜಾರಿಗೊಳಿಸುವ ಪ್ರಸ್ತಾವನೆಗೆ ಅಂಗೀಕಾರ ನೀಡಲಾಗಿತ್ತು. ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮವನ್ನು ಹೊರಗುತ್ತಿಗೆ ನೌಕರ ನೇಮಕಾತಿಗೂ ಕಡ್ಡಾಯವಾಗಿ ಅನ್ವಯಿಸಬೇಕು. ಅದಕ್ಕೆ ಕೆಲವು ಸೂಚನೆಗಳನ್ನು ಪಾಲನೆ ಮಾಡಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸೋಮವಾರ ಹೊರಡಿಸಿದೆ ಸುತ್ತೋಲೆಯಲ್ಲಿ ನಿರ್ದೇಶನ ನೀಡಿದೆ.
45 ದಿನಗಳಿಗಿಂತ ಕಡಿಮೆ ಅವಧಿಯ ನೇಮಕಾತಿಗೆ ಹೊರಗುತ್ತಿಗೆ ಮೀಸಲಾತಿ ನೀತಿ ಅನ್ವಯಿಸುವುದಿಲ್ಲ. ಪ್ರತಿವರ್ಷ ಹೊರ ಸಂಪನ್ಮೂಲ ಏಜೆನ್ಸಿಗಳಿಂದ ಟೆಂಡರ್ ಕರೆಯುವಾಗ ಕಡ್ಡಾಯವಾಗಿ ಮೀಸಲಾತಿಗೆ ಅನುಗುಣವಾಗಿ ಹುದ್ದೆ ಹಂಚಿಕೆ ಮಾಡಿ, ಸಿಬ್ಬಂದಿಯನ್ನು ಪೂರೈಸಲು ಷರತ್ತುಗಳನ್ನು ನಮೂದಿಸಬೇಕು. ಹೊರ ಸಂಪನ್ಮೂಲ ಏಜೆನ್ಸಿ ಅಂತಿಮಗೊಳಿಸಿದ ಸಿಬ್ಬಂದಿಯ ಪಟ್ಟಿಯು ಮೀಸಲಾತಿ ನಿಯಮದಂತೆ ಇರುವುದನ್ನು ಟೆಂಡರ್ ಅಂಗೀಕರಿಸುವ ಪ್ರಾಧಿಕಾರವು ಕಡ್ಡಾಯವಾಗಿ ಖಚಿತಪಡಿಸಿಕೊಳ್ಳಬೇಕು ಎಂದೂ ಸುತ್ತೋಲೆ ಹೇಳಿದೆ.
ಒಂದು ವೇಳೆ ನೇಮಕಾತಿಯಾದ ಅಭ್ಯರ್ಥಿ ಕರ್ತವ್ಯಕ್ಕೆ ಹಾಜರಾಗದಿದ್ದಾಗ ಅಥವಾ ಅರ್ಧದಲ್ಲಿ ಉದ್ಯೋಗ ತೊರೆದಾಗ ಆ ಸ್ಥಾನ ಭರ್ತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಅದೇ ಪ್ರವರ್ಗದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು.
ಈ ಸೂಚನೆಗಳು ಸರ್ಕಾರದ ಎಲ್ಲ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು, ನಿಗಮ, ಮಂಡಳಿಗಳು, ವಿಶ್ವವಿದ್ಯಾಲಯಗಳಿಗೆ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.
ಆದೇಶದಲ್ಲಿ ಏನಿದೆ?
* ಹೊರಗುತ್ತಿಗೆ ಸಿಬ್ಬಂದಿ ಒದಗಿಸುವ ಏಜೆನ್ಸಿ ನೀಡುವ ಸಿಬ್ಬಂದಿಯ ಜಾತಿ ಪ್ರಮಾಣಪತ್ರ ಮತ್ತು ಇತರೆ ದಾಖಲೆಗಳನ್ನು ಟೆಂಡರ್ ಅಂಗೀಕರಿಸುವ ಪ್ರಾಧಿಕಾರವು ಪರಿಶೀಲಿಸಿಯೇ ಕಾರ್ಯಾದೇಶ ನೀಡಲು ಕ್ರಮ ವಹಿಸಬೇಕು * ಯಾವುದೇ ಇಲಾಖೆಯಲ್ಲಿ 20 ಅಥವಾ ಅದಕ್ಕಿಂತ ಅಧಿಕ ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಮಾತ್ರ ಮೀಸಲಾತಿ ನೀತಿ ಜಾರಿ * ಅಭ್ಯರ್ಥಿಯ ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ ವಯೋಮಿತಿ 60 ವರ್ಷ ಆಗಿರುತ್ತದೆ *ಸಾಮಾಜಿಕ ನ್ಯಾಯ ಮತ್ತು ಸಮಾನ ಉದ್ಯೋಗಾವಕಾಶಗಳನ್ನು ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾಗುವ ಈ ನಿಯಮಗಳಡಿ ನೇಮಕಾತಿ ಆದವರನ್ನು ಕಾಯಂಗೆ ಪರಿಗಣಿಸುವಂತಿಲ್ಲ
ಈ ಸೂಚನೆಗಳು ಸರ್ಕಾರದ ಎಲ್ಲ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು, ನಿಗಮ, ಮಂಡಳಿಗಳು, ವಿಶ್ವವಿದ್ಯಾಲಯಗಳಿಗೆ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.