ಬೆಂಗಳೂರು: ರಾಜ್ಯದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಸ್ಥಳೀಯರಿಗೆ ಮೀಸಲಾತಿ ಕಲ್ಪಿಸುವ ಸರ್ಕಾರದ ಈ ನಡೆಗೆ ಉದ್ಯಮ ವಲಯದಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಮತ್ತೊಂದೆಡೆ ಕನ್ನಡ ಪರ ಸಂಘಟನೆಗಳು ಸರ್ಕಾರದ ನಡೆಯನ್ನು ಸ್ವಾಗತಿಸಿವೆ.
ಈ ಸಂಬಂಧ ರಚಿಸಲಾಗಿರುವ ಕರಡು ಮಸೂದೆಗೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿತ್ತು.
ಮಸೂದೆಗೆ ಸಚಿವ ಸಂಪುಟ ಸಭೆಯ ಒಪ್ಪಿಗೆ ದೊರೆತಿರುವ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಸಂಜೆ ಬಹಿರಂಗಪಡಿಸಿದ್ದರು. ಅದರ ಬೆನ್ನಲ್ಲೇ ಉದ್ಯಮಿಗಳು, ಮೀಸಲಾತಿ ಜಾರಿಗೆ ತಂದರೆ ಕೌಶಲಯುಕ್ತ ಮತ್ತು ಪ್ರತಿಭಾನ್ವಿತ ಅಭ್ಯರ್ಥಿಗಳ ನೇಮಕಾತಿಗೆ ತೊಡಕಾಗುತ್ತದೆ. ಉದ್ಯಮ ಮತ್ತು ಕೈಗಾರಿಕೆಗಳನ್ನು ನಡೆಸುವುದು ಕಷ್ಟವಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ದಾಖಲಿಸಿದರು.
‘ಮೀಸಲಾತಿ ಸಂಬಂಧ ಉದ್ಯಮಗಳು ಕಳವಳಪಡುವ ಅವಶ್ಯಕತೆ ಇಲ್ಲ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ. ‘ಕನ್ನಡಿಗರ ಹಿತಾಸಕ್ತಿ ಮತ್ತು ಉದ್ಯಮಗಳ ಹಿತಾಸಕ್ತಿ ಎರಡನ್ನೂ ಗಮನದಲ್ಲಿ ಇರಿಸಿಕೊಂಡು ಮಸೂದೆ ಸಿದ್ಧಪಡಿಸಲಾಗಿದೆ. ಆಡಳಿತಾತ್ಮಕ ಹುದ್ದೆಗಳಲ್ಲಿ ಮೀಸಲಾತಿ ನೀಡುವಲ್ಲಿ ತಾಂತ್ರಿಕ ತೊಡಕುಗಳು ಇದ್ದರೆ ಮುಖ್ಯಮಂತ್ರಿ, ಮಾಹಿತಿ ತಂತ್ರಜ್ಞಾನ ಸಚಿವ, ಕಾರ್ಮಿಕ ಸಚಿವ ಮತ್ತು ಕಾನೂನು ಸಚಿವರ ಜತೆಗೆ ಚರ್ಚೆ ನಡೆಸಿ ಬಗೆಹರಿಸುತ್ತೇವೆ’ ಎಂದಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಬಂದ ಸಲಹೆಗಳ ಅನ್ವಯ ಮಸೂದೆಯನ್ನು ಸಿದ್ಧಪಡಿಸಲಾಗಿದೆ. ‘ಈ ಅಧಿವೇಶನದಲ್ಲೇ ಮಸೂದೆಯನ್ನು ಮಂಡಿಸುತ್ತೇವೆ’ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಮಸೂದೆಗೆ ಸಚಿವ ಸಂಪುಟ ಸಭೆಯ ಒಪ್ಪಿಗೆ ದೊರೆತಿರುವ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಸಂಜೆ ಬಹಿರಂಗಪಡಿಸಿದ್ದರು. ಅದರ ಬೆನ್ನಲ್ಲೇ ಉದ್ಯಮಿಗಳು, ಮೀಸಲಾತಿ ಜಾರಿಗೆ ತಂದರೆ ಕೌಶಲಯುಕ್ತ ಮತ್ತು ಪ್ರತಿಭಾನ್ವಿತ ಅಭ್ಯರ್ಥಿಗಳ ನೇಮಕಾತಿಗೆ ತೊಡಕಾಗುತ್ತದೆ. ಉದ್ಯಮ ಮತ್ತು ಕೈಗಾರಿಕೆಗಳನ್ನು ನಡೆಸುವುದು ಕಷ್ಟವಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ದಾಖಲಿಸಿದರು.
‘ಮೀಸಲಾತಿ ಸಂಬಂಧ ಉದ್ಯಮಗಳು ಕಳವಳಪಡುವ ಅವಶ್ಯಕತೆ ಇಲ್ಲ. ಕನ್ನಡಿಗರ ಹಿತಾಸಕ್ತಿ ಮತ್ತು ಉದ್ಯಮಗಳ ಹಿತಾಸಕ್ತಿ ಎರಡನ್ನೂ ಗಮನದಲ್ಲಿ ಇರಿಸಿಕೊಂಡು ಮಸೂದೆ ಸಿದ್ಧಪಡಿಸಲಾಗಿತ್ತು. ವಿಸ್ತೃತ ಚರ್ಚೆಯ ಅವಶ್ಯಕತೆ ಇರುವ ಕಾರಣ ಮಸೂದೆಯನ್ನು ತಕ್ಷಣಕ್ಕೆ ತಡೆಹಿಡಿಯಲಾಗಿದೆ’ ಎಂದು ಸಚಿವ ಎಂ.ಬಿ.ಪಾಟೀಲ ‘ಎಕ್ಸ್’ ಮೂಲಕ ತಿಳಿಸಿದ್ದಾರೆ.
ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಕರ್ನಾಟಕದಿಂದ ಉದ್ಯಮಗಳನ್ನು ಸೆಳೆಯಲು ಪ್ರಯತ್ನಿಸುತ್ತಿರುವಾಗಲೇ ರಾಜ್ಯದಲ್ಲಿ ಇಂತಹದ್ದೊಂದು ಕಾಯ್ದೆ ಜಾರಿ ಮಾಡುವುದರಿಂದ ಕೈಗಾರಿಕಾ ಕ್ಷೇತ್ರದ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂದು ಸರ್ಕಾರದ ಕೆಲವು ಹಿರಿಯ ಸಚಿವರು ಮುಖ್ಯಮಂತ್ರಿಗೆ ಮನವರಿಕೆ ಮಾಡಿದರು ಎಂದು ಮೂಲಗಳು ಹೇಳಿವೆ.
ಪೋಸ್ಟ್ ಅಳಿಸಿ, ಹೊಸ ಪೋಸ್ಟ್ ಮಾಡಿದ ಮುಖ್ಯಮಂತ್ರಿ
‘ರಾಜ್ಯದ ಖಾಸಗಿ ಉದ್ದಿಮೆಗಳ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇಕಡ 100ರಷ್ಟು ಮೀಸಲಾತಿ ನೀಡುವ ಮಸೂದೆಗೆ ಸಂಪುಟ ಒಪ್ಪಿಗೆ ನೀಡಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಸಂಜೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಆ ಪೋಸ್ಟ್ ಅನ್ನು ಅಳಿಸಿ, ಮತ್ತೆ ಮತ್ತೆ ಹೊಸ ಪೋಸ್ಟ್ ಮಾಡಿದರು.
ಉದ್ಯಮಿಗಳಿಂದ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಬುಧವಾರ ಮಧ್ಯಾಹ್ನ ಆ ಪೋಸ್ಟ್ ಅನ್ನು ಸಿದ್ದರಾಮಯ್ಯ ಅಳಿಸಿದರು. ಸಂಜೆಯ ವೇಳೆಗೆ ಮತ್ತೊಂದು ಪೋಸ್ಟ್‌ನಲ್ಲಿ, ‘ಖಾಸಗಿ ಕೈಗಾರಿಕೆಗಳು, ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ 50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ 75 ಮೀಸಲಾತಿ ನಿಗದಿಪಡಿಸುವ ಮಸೂದೆಗೆ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ’ ಎಂದು ತಿಳಿಸಿದರು.
ಸಿದ್ದರಾಮಯ್ಯ ಪೋಸ್ಟ್ ಅಳಿಸಿ, ಮರುಪೋಸ್ಟ್ ಮಾಡಿದ್ದನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಟೀಕಿಸಿದ್ದಾರೆ. ‘ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಎಂಬ ಕನ್ನಡದ ಗಾದೆ ಮಾತು ಕೇಳಿರಬೇಕಲ್ಲವೇ ಸಿ.ಎಂ ಸಿದ್ದರಾಮಯ್ಯನವರೇ? ಇದು ನಿಮಗೆ ಬಹಳ ಸೂಕ್ತವಾಗಿ ಅನ್ವಯಿಸುತ್ತದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಜೆಡಿಎಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ‘ಸರ್ಕಾರದ ಈ ನಡೆಯನ್ನು ಸ್ವಾಗತಿಸುತ್ತೇವೆ. ಆದರೆ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳಲ್ಲಿ ಶೇ 100ರಷ್ಟು ಮೀಸಲಾತಿ ನೀಡುತ್ತೇವೆ ಎಂಬ ಪೋಸ್ಟ್ ಅನ್ನು ಮುಖ್ಯಮಂತ್ರಿ ಅಳಿಸಿದ್ದು ಯಾಕೆ? ಉದ್ಯಮಿಗಳ ಆಕ್ರೋಶಕ್ಕೆ ಮಣಿದು ಹೀಗೆ ಮಾಡಿದಿರಾ’ ಎಂದು ಪ್ರಶ್ನಿಸಿದೆ.
ಬುಧವಾರ ರಾತ್ರಿಯ ವೇಳೆಗೆ ಮತ್ತೆ ಪೋಸ್ಟ್ ಮಾಡಿದ ಮುಖ್ಯಮಂತ್ರಿ, ಮುಂದಿನ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂದರು.
ಮಸೂದೆಯಲ್ಲಿ ಇದ್ದದ್ದು...
ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಒದಗಿಸಲು ರಾಜ್ಯ ಸರ್ಕಾರವು ‘ಕರ್ನಾಟಕ ರಾಜ್ಯ ಕೈಗಾರಿಕೆ, ಕಾರ್ಖಾನೆ ಮತ್ತು ಇತರೆ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗವಕಾಶ ಮಸೂದೆ–2024’ ಅನ್ನು ಸಿದ್ಧಪಡಿಸಿದೆ. ಮಸೂದೆಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಮಸೂದೆಯಲ್ಲಿರುವ ವಿವರಗಳು ಈ ಮುಂದಿನಂತಿವೆ.
ಅನ್ವಯ: ಕೈಗಾರಿಕೆ, ಕಾರ್ಖಾನೆ, ಇತರ ಯಾವುದೇ ಖಾಸಗಿ ಸಂಸ್ಥೆ
ಸ್ಥಳೀಯ ಅಭ್ಯರ್ಥಿಗಳು: ಕರ್ನಾಟಕದಲ್ಲಿ ಹುಟ್ಟಿದವರು ಮತ್ತು 15 ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿರುವವರು. ಸ್ಪಷ್ಟವಾಗಿ ಕನ್ನಡ ಮಾತನಾಡಲು, ಓದಲು ಮತ್ತು ಬರೆಯಲು ಬರುವವರು
50% ಆಡಳಿತಾತ್ಮಕ ಹುದ್ದೆಗಳಲ್ಲಿ ಸ್ಥಳೀಯರಿಗೆ ನೀಡಬೇಕಾದ ಮೀಸಲಾತಿಯ ಪ್ರಮಾಣ
ಆಡಳಿತಾತ್ಮಕ ಹುದ್ದೆಗಳು: ಮೇಲ್ವಿಚಾರಕ, ವ್ಯವಸ್ಥಾಪಕ, ತಾಂತ್ರಿಕ, ಕಾರ್ಯನಿರ್ವಾಹಕ, ಆಡಳಿತ ಮತ್ತು ಅದಕ್ಕಿಂತಲೂ ಉನ್ನತ ಹುದ್ದೆಗಳು
70% ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಸ್ಥಳೀಯರಿಗೆ ನೀಡಬೇಕಾದ ಮೀಸಲಾತಿಯ ಪ್ರಮಾಣ
ಆಡಳಿತಾತ್ಮಕವಲ್ಲದ ಹುದ್ದೆಗಳು: ಗುಮಾಸ್ತ, ಕೌಶಲ ಬೇಡದ ಹುದ್ದೆಗಳು, ಅರೆಕೌಶಲ ಬೇಡುವ ಹುದ್ದೆಗಳು
ದಂಡ: ಉಲ್ಲಂಘನೆಗೆ ಕನಿಷ್ಠ ₹10,000 ದಿಂದ ಗರಿಷ್ಠ ₹25,000 ದವರೆಗೆ ದಂಡ. ದಂಡ ವಿಧಿಸಿದ ದಿನದಿಂದ ಮೀಸಲಾತಿಯ ಅನ್ವಯ ನೇಮಕ ಮಾಡಿಕೊಳ್ಳುವವರೆಗೆ ಪ್ರತಿದಿನ ₹100 ಹೆಚ್ಚುವರಿ ದಂಡ
ಷರತ್ತುಗಳು ಮತ್ತು ವಿನಾಯಿತಿಗಳು
* ಸ್ಥಳೀಯ ಅಭ್ಯರ್ಥಿಗಳು ಲಭ್ಯವಿಲ್ಲದೇ ಇದ್ದರೆ, ಸಂಬಂಧಿತ ಕಂಪನಿಯು ಸರ್ಕಾರದ ಸಹಯೋಗದಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಅಗತ್ಯ ತರಬೇತಿ ನೀಡಬೇಕು
* ಅಗತ್ಯವಿರುವಷ್ಟು ಸ್ಥಳೀಯ ಅಭ್ಯರ್ಥಿಗಳು ಲಭ್ಯವಿಲ್ಲದೇ ಇದ್ದರೆ ಸಂಬಂಧಿತ ಕಂಪನಿಗಳು ವಿನಾಯಿತಿ ಕೋರಿ ಸರ್ಕಾರಕ್ಕೆ ಪತ್ರ ಬರೆಯಬೇಕು
* ವಿನಾಯಿತಿ ಅನ್ವಯವಾದರೂ, ಆಡಳಿತಾತ್ಮಕ ಹುದ್ದೆಗಳಲ್ಲಿ ಕನಿಷ್ಠ ಶೇ 25ರಷ್ಟು ಮತ್ತು ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಕನಿಷ್ಠ ಶೇ 50ರಷ್ಟು ಮೀಸಲಾತಿ ಇರಲೇಬೇಕು
ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು, ಐಟಿ ಸೇವೆಯಲ್ಲಿ ನಮ್ಮ ಅಗ್ರಸ್ಥಾನಕ್ಕೆ ಧಕ್ಕೆ ಮಾಡಿಕೊಳ್ಳಲಾಗದು. ಪ್ರತಿಭಾನ್ವಿತರ ಆಯ್ಕೆಗೆ ಅವಕಾಶವಿರಬೇಕು– ಕಿರಣ್ ಮಜುಂದಾರ್ ಶಾಬಯೋಕಾನ್ ಮುಖ್ಯಸ್ಥೆ
ಸ್ಥಳೀಯರಿಗೆ ಮೀಸಲಾತಿಯ ಮೇಲ್ವಿಚಾರಣೆಗೆ ಕಂಪನಿಗಳಲ್ಲಿ ಸರ್ಕಾರಿ ಅಧಿಕಾರಿಗಳನ್ನು ನಿಯೋಜನೆ ಮಾಡಿಬಿಡಿ. ದೂರದೃಷ್ಟಿಯಿಲ್ಲದ ಈ ನಡೆ, ಉದ್ಯಮಗಳಿಗೆ ಮಾರಕ– ಆರ್.ಕೆ.ಮಿಶ್ರಾ ಅಸೋಚಾಮ್ ಸಹ–ಅಧ್ಯಕ್ಷ
ಇದು ತಾರತಮ್ಯದಿಂದ ಕೂಡಿದ ಮತ್ತು ಪ್ರತಿಗಾಮಿ ಸ್ವರೂಪದ ಮಸೂದೆ. ಇದರ ಬದಲಿಗೆ ಕನ್ನಡಿಗರ ಉದ್ಯೋಗಾರ್ಹತೆ ಹೆಚ್ಚಿಸಲು ಅವರಿಗೆ ಅಗತ್ಯ ವೃತ್ತಿಪರ ತರಬೇತಿ ನೀಡಿ–ಮೋಹನದಾಸ್ ಪೈ ಮಣಿಪಾಲ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ
ಈ ನಡೆಯನ್ನು ಸ್ವಾಗತಿಸುತ್ತೇವೆ. ಆದರೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಲು ಪ್ರತಿಭಾನ್ವಿತರ ಅಗತ್ಯವಿದೆ. ಹೀಗಾಗಿ ಮೀಸಲಾತಿ ಪ್ರಮಾಣವನ್ನು ಶೇ 25ಕ್ಕೆ ಇಳಿಸಬೇಕು.–ರಮೇಶ್ ಚಂದ್ರ ಲಹೋಟಿ ಅಧ್ಯಕ್ಷರು, ಎಫ್‌ಕೆಸಿಸಿಐ
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರೆಯಬೇಕು ಎಂಬುದಕ್ಕೆ ನಮ್ಮ ಆದ್ಯತೆ. ಆದರೆ ಉದ್ಯಮಗಳಿಗೆ ಹಾನಿಯಾಗದೇ ಇರುವ ಹಾಗೆ ಜಾರಿಗೆ ತರುತ್ತೇವೆ–ಎಂ.ಬಿ.ಪಾಟೀಲ, ಬೃಹತ್ ಕೈಗಾರಿಕೆ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.