ADVERTISEMENT

ಕಾಳಿಯಲ್ಲಿ ರೆಸಾರ್ಟ್: ವರದಿ ಸಲ್ಲಿಕೆಗೆ ಕೇಂದ್ರ ಸೂಚನೆ

ಪಿಟಿಐ
Published 13 ಜೂನ್ 2024, 14:31 IST
Last Updated 13 ಜೂನ್ 2024, 14:31 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ನವದೆಹಲಿ: ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಹೃದಯ ಭಾಗದಲ್ಲಿ ರೆಸಾರ್ಟ್, ಹೋಮ್‌ ಸ್ಟೇಗಳು ಹಾಗೂ ಹೋಟೆಲ್‌ಗಳಿರುವ ಬಗ್ಗೆ ತನಿಖೆ ನಡೆಸಿ ವಿವರವಾದ ವರದಿ ನೀಡುವಂತೆ ಕೇಂದ್ರ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯವು ಕರ್ನಾಟಕ ಅರಣ್ಯ ಇಲಾಖೆಗೆ ಸೂಚಿಸಿದೆ. 

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅವರಿಗೆ ಪತ್ರ ಬರೆದಿರುವ ಸಚಿವಾಲಯದ ಸಹಾಯಕ ಮಹಾನಿರ್ದೇಶಕಿ ಹರಿಣಿ ವೇಣುಗೋಪಾಲ್‌, ಸ್ಥಳೀಯರು ನೀಡಿದ ದೂರಿಗೆ ಸಂಬಂಧಿಸಿ ‘ಕ್ರಮ ಕೈಗೊಂಡ ವರದಿಯನ್ನು ಶೀಘ್ರ ಸಲ್ಲಿಸಬೇಕು’ ಎಂದು ನಿರ್ದೇಶನ ನೀಡಿದ್ದಾರೆ. 

ADVERTISEMENT

‘ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಹೃದಯ ಭಾಗದ ಒಂದು ಕಿ.ಮೀ. ವ್ಯಾಪ್ತಿಯಲ್ಲಿರುವ ಚಾವರ್ಲಿ, ಫನ್ಸೋಲಿ ಹಾಗೂ ವಿರ್ನೋಲಿ ಮತ್ತಿತರ ಪ್ರದೇಶಗಳಲ್ಲಿ ರೆಸಾರ್ಟ್, ಹೋಮ್‌ ಸ್ಟೇ ಹಾಗೂ ಹೋಟೆಲ್‌ಗಳು ತಲೆ ಎತ್ತಿವೆ. ಕ್ಯಾಸಲ್‌ರಾಕ್ ವನ್ಯಜೀವಿ ಧಾಮದಲ್ಲೂ ಹಲವು ಹೋಮ್‌ಸ್ಟೇಗಳು ಆರಂಭವಾಗಿವೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅನುವು ಮಾಡಿಕೊಡಬಾರದು ಎಂದು ಸುಪ್ರೀಂ ಕೋರ್ಟ್‌ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ ಇಲ್ಲದೆ ವಾಣಿಜ್ಯ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಇಂತಹ ಚಟುವಟಿಕೆಗಳನ್ನು ನಡೆಸಿದರೆ ನ್ಯಾಯಾಂಗ ನಿಂದನೆಯಾಗುತ್ತದೆ. ಇದಲ್ಲದೆ, ಆನೆಗಳ ಕಾರಿಡಾರ್ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್‌ ಹಲವು ಆದೇಶಗಳನ್ನು ಹೊರಡಿಸಿದೆ’ ಎಂದು ದೂರಿನಲ್ಲಿ ಹೇಳಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.