ಕಾರವಾರ: ‘ರೆಸಾರ್ಟ್ ರಾಜಕಾರಣ ಈಗ ಬಿಜೆಪಿ ಸಂಸ್ಕೃತಿ, ಕಾಂಗ್ರೆಸ್ ಸಂಸ್ಕೃತಿ ಅಂತಲ್ಲ. ಒಂದರ್ಥದಲ್ಲಿ ನಾಡಿನ ಸಂಸ್ಕೃತಿಯೇ ಆಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅಭಿಪ್ರಾಯಪಟ್ಟರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿ, ಕಾರವಾರ ನಗರಸಭೆಯ ಬಿಜೆಪಿ ಮತ್ತು ಪಕ್ಷಕ್ಕೆ ಬೆಂಬಲ ನೀಡಿರುವ ಜೆಡಿಎಸ್, ಪಕ್ಷೇತರ ಸದಸ್ಯರು ಗೋವಾದ ರೆಸಾರ್ಟ್‌ನಲ್ಲಿ ಶನಿವಾರ ವಾಸ್ತವ್ಯ ಹೂಡಿದ ಬಗ್ಗೆ ಪ್ರಶ್ನೆಯೊಂದಕ್ಕೆ ಈ ರೀತಿ ಪ್ರತಿಕ್ರಿಯಿಸಿದರು.
‘ಕಾಂಗ್ರೆಸ್‌ನವರ ಹತಾಶೆಯ ಸ್ಥಿತಿಗೆ ಅನುಗುಣವಾಗಿ ಬಿಜೆಪಿ ತನ್ನ ಸದಸ್ಯರನ್ನು ಅನಿವಾರ್ಯವಾಗಿ ರೆಸಾರ್ಟ್‌ಗೆ ಕಳುಹಿಸಿದೆ. ಯಾವ ಕಾಲದಲ್ಲಿ ಯಾವ ಪಕ್ಷದಲ್ಲಿ ರೆಸಾರ್ಟ್ ರಾಜಕೀಯ ಆಗಿಲ್ಲ ಹೇಳಿ? ನಾನೇ ಹಿಂದೆ ಕಾಂಗ್ರೆಸ್‌ನಲ್ಲಿದ್ದೆ. ಆ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಸರ್ಕಾರ ಬಹುಮತ ಸಾಬೀತು ಪಡಿಸುವ ವೇಳೆ ನಮ್ಮನ್ನೂ ಗೋವಾ, ಹೈದರಾಬಾದ್‌ನ ರೆಸಾರ್ಟ್‌ಗಳಲ್ಲಿ ಕಾಂಗ್ರೆಸ್‌ನವರು ಇಟ್ಟುಕೊಂಡಿರಲಿಲ್ವಾ? ರೆಸಾರ್ಟ್ ರಾಜಕಾರಣ ಮುಂದೆಯೂ ಇರುತ್ತದೆ. ಈ ಸಂಸ್ಕೃತಿ ಗ್ರಾಮ ಪಂಚಾಯಿತಿ ಮಟ್ಟಕ್ಕೂ ಬಾರದಿರಲಿ ಎಂಬುದು ನನ್ನ ಅಪೇಕ್ಷೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.