ADVERTISEMENT

ರಾಜ್ಯದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ?

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2018, 19:30 IST
Last Updated 22 ಸೆಪ್ಟೆಂಬರ್ 2018, 19:30 IST
ರೆಸಾರ್ಟ್‌ ರಾಜಕಾರಣ– ಸಾಂದರ್ಭಿಕ ಚಿತ್ರ
ರೆಸಾರ್ಟ್‌ ರಾಜಕಾರಣ– ಸಾಂದರ್ಭಿಕ ಚಿತ್ರ   

ಬೆಂಗಳೂರು: ಮೈತ್ರಿ ಸರ್ಕಾರದ ಹಲವು ಶಾಸಕರು ರೆಸಾರ್ಟ್‌ ರಾಜಕಾರಣ ಶುರು ಮಾಡಿದ್ದಾರೆ ಎಂಬ ಸುದ್ದಿ ಶನಿವಾರ ದಟ್ಟವಾಗಿ ಹರಡಿತು. ಇದರಿಂದಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಾಳಯದಲ್ಲಿ ಗೊಂದಲ ಸೃಷ್ಟಿಯಾಯಿತು.

‘ಕಾಂಗ್ರೆಸ್‌ನ ಎಂ.ಟಿ.ಬಿ. ನಾಗರಾಜ್‌ (ಹೊಸಕೋಟೆ), ಡಾ.ಕೆ.ಸುಧಾಕರ್‌ (ಚಿಕ್ಕಬಳ್ಳಾ‍‍‍ಪುರ) ಹಾಗೂ ಪಕ್ಷೇತರ ಶಾಸಕ ಎಚ್‌.ನಾಗೇಶ್‌ (ಮುಳಬಾಗಿಲು) ಅವರು ನಗರದಲ್ಲಿ ಗುಪ್ತ ಸಭೆ ನಡೆಸಿ ಚೆನ್ನೈಗೆ
ರಸ್ತೆ ಮಾರ್ಗದಲ್ಲಿ ತೆರಳಿದ್ದಾರೆ. ಭಾನುವಾರ ಬೆಳಿಗ್ಗೆ ಅಲ್ಲಿಂದ ವಿಮಾನದ ಮೂಲಕ ಮುಂಬೈಗೆ ತೆರಳಲಿದ್ದಾರೆ. ‘ಕೈ’ ಪಾಳಯದ 10ಕ್ಕೂ ಅಧಿಕ ಶಾಸಕರು ಅವರನ್ನು ಕೂಡಿಕೊಂಡು ರೆಸಾರ್ಟ್ ರಾಜಕಾರಣ ಮಾಡಲಿದ್ದಾರೆ. ಮೈತ್ರಿ ಸರ್ಕಾರಕ್ಕೆ ಕಂಟಕ
ಎದುರಾಗಿದೆ’ ಎಂಬ ಸುದ್ದಿ ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಯಿತು.

‘ನಾವು ಕ್ಷೇತ್ರದಲ್ಲಿಯೇ ಇದ್ದೇವೆ. ಎಲ್ಲಿಗೂ ತೆರಳಿಲ್ಲ. ತೆರಳುವುದೂ ಇಲ್ಲ’ ಎಂದು ರೆಸಾರ್ಟ್‌ಗೆ ತೆರಳಲಿದ್ದಾರೆ ಎಂಬ ಪಟ್ಟಿಯಲ್ಲಿದ್ದ ಶಾಸಕರು ಸ್ಪಷ್ಟಪಡಿಸಿದರು. ಆದರೆ, ನಾಗರಾಜ್ ಅವರ ಮೊಬೈಲ್‌ಗೆ ಕರೆ ಮಾಡಿದರೆ, ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ
ಸಂದೇಶ ತಮಿಳು ಭಾಷೆಯಲ್ಲಿ ಬರುತ್ತಿತ್ತು.

ADVERTISEMENT

ಈ ಬೆಳವಣಿಗೆಯ ಬೆನ್ನಲ್ಲೇ, ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರ ‘ಕಾವೇರಿ’ ನಿವಾಸ ರಾಜಕೀಯ ಚಟುವಟಿಕೆಗಳ ಕೇಂದ್ರವಾಯಿತು. ಹೊಸಪೇಟೆಯ ಶಾಸಕ ಆನಂದ ಸಿಂಗ್‌ ಅವರನ್ನು ಆಹಾರ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಕರೆದುಕೊಂಡು ಬಂದರು. ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌, ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರೂ ಧಾವಿಸಿದರು.

ಸಂಜೆ ವೇಳೆಗೆ ಹಲವು ಶಾಸಕರು ಸಿದ್ದರಾಮಯ್ಯ ಅವರ ಜತೆಗೆಸಮಾಲೋಚನೆ ನಡೆಸಿದರು. ಹಲವು ಶಾಸಕರಿಗೆ ದೂರವಾಣಿ ಕರೆಮಾಡಿ ಬುದ್ಧಿಮಾತು ಹೇಳಿದರು. ‘ಯಾವುದೇ ಕಾರಣಕ್ಕೂ ಗಡಿಬಿಡಿ ಮಾಡಬೇಡಿ. ನಿಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇವೆ. ತಾಳ್ಮೆಯಿಂದ ಕಾಯಿರಿ’ ಎಂದು ಕಿವಿಮಾತು ಹೇಳಿದರು ಎಂದು ಗೊತ್ತಾಗಿದೆ.

ಒತ್ತಡ ತಂತ್ರ?: ವಿಧಾನ ಪರಿಷತ್‌ ಚುನಾವಣೆಗೆ ಮುನ್ನವೇ ತಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂಬುದು ಕೈ ಪಾಳಯದ ಅತೃಪ್ತ ಶಾಸಕರ ಹಂಬಲ. ಕಾಂಗ್ರೆಸ್‌ನ ಪಾಲಿನ ಆರು ಸಚಿವ ಸ್ಥಾನಗಳು ಖಾಲಿ ಇವೆ. ಈ ಅವಕಾಶವನ್ನು ಬಳಸಿಕೊಂಡು ಸಂಪುಟ ಸೇರಲು ಸೂತ್ರ ಹೆಣೆಯುವುದು. ಮತ್ತೆ ಅದಕ್ಕೆ ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಶಾಸಕರು ಗುಂಪಾಗಿ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದ್ದಾರೆ ಎನ್ನಲಾಗಿದೆ.

‘ಮುಂಬೈನತ್ತ ತೆರಳುತ್ತಿದ್ದೇವೆ. ಬೆಳಗಾವಿ ಮತ್ತು ಬಳ್ಳಾರಿ ಜಿಲ್ಲೆಯ ಹಲವು ಶಾಸಕರು ಅಲ್ಲಿ ಸೇರಿಕೊಳ್ಳಲಿದ್ದಾರೆ. ನಮ್ಮ ಬಲ 12 ದಾಟಲಿದೆ ಎಂಬ ಸುದ್ದಿಯನ್ನು ಇದೇ ಕಾರಣಕ್ಕಾಗಿ ಕೆಲವು ಶಾಸಕರು ವಿದ್ಯುನ್ಮಾನ ಮಾಧ್ಯಮಗಳಿಗೆ ಹರಿಯಬಿಟ್ಟರು’ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದರು.

‘ಶಾಸಕಾಂಗ ಸಭೆಗೆ ಹಾಜರಾದರೆ ಪಕ್ಷ ಸೂಚಿಸುವ ನಿರ್ಣಯಕ್ಕೆ ಬದ್ಧರಾಗಬೇಕಾಗುತ್ತದೆ. ಅದಕ್ಕೆ ಮೊದಲೇ ಒತ್ತಡ ತಂತ್ರ ಹೆಣೆದರೆ, ಪಕ್ಷ ಇಕ್ಕಟ್ಟಿಗೆ ಸಿಲುಕಿ ತಮ್ಮ ಬೇಡಿಕೆ ಈಡೇರಿಸಲು ಮುಂದಾಗಬಹುದು ಎಂಬ ಲೆಕ್ಕಾಚಾರ ಇದರ ಹಿಂದಿದೆ’ ಎಂದು ಹೇಳಿದರು.

25ಕ್ಕೆ ಶಾಸಕಾಂಗ ಪಕ್ಷದ ಸಭೆ: ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಇದೇ 25ರಂದು ಶಾಸಕಾಂಗ ಪಕ್ಷದ ಸಭೆ ಕರೆಯಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.

ವಿಧಾನ ಮಂಡಲದ ಉಭಯ ಸದನ ಸದಸ್ಯರು, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕಾಂಗ್ರೆಸ್‌ನ ಆಂತರಿಕ ಗೊಂದಲ, ಆಪರೇಷನ್ ಕಮಲದ ಆತಂಕದ ಬೆಳವಣಿಗೆಗಳ ಮಧ್ಯೆ ನಡೆಯುತ್ತಿರುವ ಈ ಸಭೆ ವಿಶೇಷ ಮಹತ್ವ ಪಡೆದಿದೆ.

ಬಿಜೆಪಿ ನಾಯಕರ ಜತೆ ನಿಕಟ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿರುವ ಕಾಂಗ್ರೆಸ್ ಶಾಸಕರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬುದು ಕುತೂಹಲ ಕೆರಳಿಸಿದೆ. ಶಾಸಕಾಂಗ ಪಕ್ಷದ ಸಭೆ ಕರೆಯುವ ಮೂಲಕ ಪಕ್ಷ ಹಾಗೂ ತಮ್ಮ ಬಲಾಬಲ ಪ್ರದರ್ಶನ ಮಾಡುವ ಇರಾದೆಯೂ ಸಿದ್ದರಾಮಯ್ಯ ಅವರದ್ದಾಗಿದೆ ಎಂದು ಕಾಂಗ್ರೆಸ್‌ ವಲಯದಲ್ಲಿ ವ್ಯಾಖ್ಯಾನಿಸಲಾಗಿದೆ.

‘ಸರ್ಜಾಪುರ ರಸ್ತೆಯವರೆಗೆ ಹೋದೆವು’

‘ನಾವು ಎಲ್ಲಿಗೂ ಹೋಗಿಲ್ಲ. ಕೆಲಸದ ನಿಮಿತ್ತ ಸರ್ಜಾಪುರ ರಸ್ತೆಯವರೆಗೆ ತೆರಳಿದ್ದೆವು. ಕೆಲಸ ಮುಗಿಸಿ ನಾಗರಾಜ್‌(ಎಂಟಿಬಿ) ಅವರನ್ನು ಮನೆ ಹತ್ತಿರ ಇಳಿಸಿ ವಾಪಸ್‌ ಬಂದಿದ್ದೇನೆ. ಈಗ ಮನೆಯಲ್ಲೇ ಇದ್ದೇನೆ. ನಮಗೆ ಅಸಮಾಧಾನ ಇರುವುದು ನಿಜ. ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ಇದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸುತ್ತೇನೆ’ ಎಂದು ಡಾ.ಕೆ.ಸುಧಾಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕುಮಾರಸ್ವಾಮಿಯಿಂದಲೇ ಆಪರೇಷನ್–ಬಿಎಸ್‌ವೈ:‘ನಾವು ಆಪರೇಷನ್ ಕಮಲ ಮಾಡುತ್ತಿಲ್ಲ. ಯಾವ ಶಾಸಕರನ್ನೂ ಕರೆದಿಲ್ಲ. ಅದರ ಅಗತ್ಯವೂ ಇಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ನಮ್ಮ ಪಕ್ಷದ ಶಾಸಕರನ್ನು ಸಂಪರ್ಕಿಸುತ್ತಿದ್ದು, ಸಚಿವರನ್ನಾಗಿ ಮಾಡುತ್ತೇವೆ ಬನ್ನಿ ಎಂದು ಆಹ್ವಾನ ನೀಡುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದರು.

‘ಸಿಹಿ ಸುದ್ದಿಕೊಡುವೆ ಎಂದು ಹೇಳಿದ್ದನ್ನೇ ಅಪಾರ್ಥ ಮಾಡಿಕೊಂಡಿರುವ ಮುಖ್ಯಮಂತ್ರಿ, ಸುಖಾಸುಮ್ಮನೇ ಆರೋಪ ಮಾಡುತ್ತಿದ್ದಾರೆ. ನಮ್ಮ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಿ ಅಭಿವೃದ್ಧಿ ಕಡೆಗೆ ಗಮನಕೊಡುವ ಕೆಲಸವನ್ನು ಅವರು ಮಾಡಲಿ. ಶೃಂಗೇರಿ ಶಾರದಾಂಬೆ ಅವರಿಗೆ ಸದ್ಬುದ್ಧಿ ಕೊಡಲಿ’ ಎಂದರು.

ದೇವಸ್ಥಾನಕ್ಕೆ ಹೋಗುವುದು ತಪ್ಪಾ–ದಿನೇಶ್

‘ಸುಧಾಕರ್‌, ಬಿ.ಸಿ. ಪಾಟೀಲ ಸೇರಿ ಕೆಲವು ಶಾಸಕರು ದೇವಸ್ಥಾನಕ್ಕೆ ಹೋಗಿದ್ದಾರೆ. ಭಾನುವಾರ ಬೆಳಿಗ್ಗೆ ವಾಪಸ್ ಬರಲಿದ್ದಾರೆ. ಶಾಸಕರು ದೇವಸ್ಥಾನಕ್ಕೆ ಹೋಗುವುದು ತಪ್ಪಾ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಪ್ರಶ್ನಿಸಿದರು.

‘ನಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಬಿಜೆಪಿಯ ಯಡಿಯೂರಪ್ಪ ಅವರು ನಿರಂತರ ಯತ್ನ ಮಾಡುತ್ತಿದ್ದು, ಹಣ ಸಂಗ್ರಹಿಸುತ್ತಿದ್ದಾರೆ. ಮುಂಬೈಗೆ 18 ಅಲ್ಲ, ಯಾವ ಶಾಸಕರೂ ಹೋಗಿಲ್ಲ. ಮಾಧ್ಯಮಗಳು ಹೀಗೆ ಸುದ್ದಿ ಬಿತ್ತರಿಸುತ್ತಿರುವುದರಿಂದ ಅನಗತ್ಯವಾಗಿ ಗೊಂದಲ ಹಾಗೂ ನಾವೂ ಸಹ ಆತಂಕಕ್ಕೆ ಒಳಗಾಗಬೇಕಾಗಿದೆ. ಸರ್ಕಾರ ಸುಭದ್ರವಾಗಿದ್ದು, ಸಣ್ಣ ಪುಟ್ಟ ಅಸಮಾಧಾನಗಳು ಸಹಜ. ಅದನ್ನು ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳುತ್ತೇವೆ’ ಎಂದು ಅವರು ಹೇಳಿದರು.

* ಹಿರೇಕೆರೂರಿನಲ್ಲಿಯೇ ಇದ್ದೇನೆ. ಮುಂಬೈಗೆ ಹೋಗಿ ಎಂದು ನೀವು ಹೇಳಿದರೆ ಹೋಗುತ್ತೇನೆ. ನಾನು ಕಾಂಗ್ರೆಸ್‌ ಬಿಟ್ಟು ಹೋಗುವುದಿಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ

–ಬಿ.ಸಿ.ಪಾಟೀಲ, ಕಾಂಗ್ರೆಸ್‌ ಶಾಸಕ

* ನನ್ನ ಅನುಮತಿ ಪಡೆದು ನಾಗರಾಜ್‌ ಹಾಗೂ ಹಲವು ಶಾಸಕರು ಚೆನ್ನೈಗೆ ತೆರಳಿದ್ದಾರೆ. ಆಪರೇಷನ್‌ ಕಮಲಕ್ಕೆ ಯತ್ನಿಸುತ್ತಿರುವ ನಾಯಕರ ವರ್ತನೆ ಬಗ್ಗೆ ಪ್ರಧಾನಿಗೆ ಪತ್ರ ಬರೆಯುವೆ
– ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.