ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೆಸಾರ್ಟ್, ಹೋಂ ಸ್ಟೇ ಹಾಗೂ ಲಾಡ್ಜ್‌ಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ.
ಈ ಕುರಿತು ರಾಜ್ಯ ಗುಪ್ತಚರ ಇಲಾಖೆಯು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಅ. 16ರಂದು ಸಲ್ಲಿಸಿದ ವರದಿ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ಅಕ್ರಮ ನಿರ್ಮಾಣಗಳ ಪೈಕಿ ಪ್ರಮುಖವಾದ ಏಳನ್ನು ಪಟ್ಟಿ ಮಾಡಿರುವ ಇಲಾಖೆ, ಇವು ಯಾವುವೂ ಪ್ರವಾಸೋದ್ಯಮ ಚಟುವಟಿಕೆ ನಡೆಸಲು ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪರಿಸರ ಸೂಕ್ಷ್ಮ ವಲಯ ಆಗಿರುವುದರಿಂದ ಅರಣ್ಯ ಇಲಾಖೆಯಿಂದಲೂ ನಿರಾಕ್ಷೇಪಣಾ ಪತ್ರ ಪಡೆದಿಲ್ಲ. ಇವುಗಳ ಮಾಲೀಕರು ನಿಯಮ ಮೀರಿ ಕಟ್ಟಡ ನಿರ್ಮಿಸಿದ್ದಲ್ಲದೆ, ಗಿರಿಜನ ಅಭಿವೃದ್ಧಿ ಹೆಸರಿನಲ್ಲಿ ಭೂ ಪರಿವರ್ತನೆ ಆದೇಶವನ್ನು ಪಡೆದು, ಲಾಭಕ್ಕಾಗಿ ಅನ್ಯ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ.
ಪರಿಸರ ಸೂಕ್ಷ್ಮ ವಲಯದಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಬೆಳಗಾವಿಯ ಗಿರಿಧರ್ ಕುಲಕರ್ಣಿ, ದೆಹಲಿಯಲ್ಲಿರುವ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ (ಎನ್‌ಟಿಸಿಎ) ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದ ಎನ್‌ಟಿಸಿಎ ಸಹಾಯಕ ಐಜಿಎಫ್ ಹರಿಣಿ ವೇಣುಗೋಪಾಲ್ ಅವರು ಎಲ್ಲ ರೆಸಾರ್ಟ್, ಲಾಡ್ಜ್‌ಗಳು ನಿಯಮ ಮೀರಿ ಕಾರ್ಯನಿರ್ವಹಿಸುತ್ತಿವೆ ಎಂದು ವಿವರವಾದ ವರದಿಯನ್ನೂ 2022ರ ನ. 28ರಂದೇ ನೀಡಿದ್ದಾರೆ. ವರ್ಷ ಕಳೆದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ವನ್ಯಜೀವಿ ಸಂರಕ್ಷಣಾ ಕಾಯ್ದೆ ಕಲಂ 33ಎ ಪ್ರಕಾರ, ರಾಷ್ಟ್ರೀಯ ಮಂಡಳಿಯ ಪೂರ್ವಾನುಮತಿ ಪಡೆಯದ ಹೊರತು ವನ್ಯಜೀವಿ ಧಾಮದ ಒಳಗೆ ವಾಣಿಜ್ಯ ಉದ್ದೇಶಕ್ಕೆ ಲಾಡ್ಜ್, ಹೋಟೆಲ್, ಸಫಾರಿ ಪಾರ್ಕ್ ನಿರ್ಮಿಸುವಂತಿಲ್ಲ. ಅಲ್ಲದೆ, ಹುಲಿ ಸಂರಕ್ಷಿತ ಸೂಕ್ಷ್ಮ ಪ್ರದೇಶಗಳಲ್ಲಿ ಪ್ರವಾಸೋದ್ಯಮ ನಡೆಸುವುದನ್ನು ನಿಲ್ಲಿಸಬೇಕೆಂದು ಎನ್‌ಟಿಸಿಎ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರದ ಲಾಡ್ಜ್, ರೆಸಾರ್ಟ್, ಹೋಟೆಲ್ ಮತ್ತು ಹೋಂ ಸ್ಟೇ (ಬಿಳಿಗಿರಿ ಭವನ ಅತಿಥಿಗೃಹ, ಬಿ.ಆರ್. ಹಿಲ್ಸ್ ಪ್ರವಾಸಿ ಮಂದಿರ, ಹೋಟೆಲ್ ಮಯೂರ ಮತ್ತು ಅತಿಗಣ್ಯ ವ್ಯಕ್ತಿಗಳ ವಸತಿಗೃಹ) ನಡೆಸುವುದು ಕೂಡಾ ಎನ್‌ಟಿಸಿಎ ಮಾರ್ಗಸೂಚಿ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದೂ ವರದಿಯಲ್ಲಿದೆ.
ಗೊರುಕನ ಆಯುರ್ವೇದಿಕ್ ಎಕೋ ವೆಲ್‌ನೆಸ್ ರೆಸಾರ್ಟ್‌ನವರು ಪರಿಸರ ಶಿಕ್ಷಣ ಮತ್ತು ಆಯುರ್ವೇದಿಕ್ ಚಿಕಿತ್ಸೆ ನೀಡುವ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿಸಿದ್ದರು. ಈ ಜಾಗವನ್ನು ರೆಸಾರ್ಟ್‌ಗೆ ಬಳಕೆ ಮಾಡುತ್ತಿದ್ದುದರಿಂದ ಭೂ ಪರಿವರ್ತನೆ ಆದೇಶವನ್ನು ಜಿಲ್ಲಾಧಿಕಾರಿ ರದ್ದುಪಡಿಸಿದ್ದಾರೆ. ಇದರ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಯಳಂದೂರು ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ರಜತಾದ್ರಿ ಹಿಲ್ ವಿಲ್ಲಾ ಮಾಲೀಕರು ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿಸಿಕೊಂಡಿದ್ದಾರೆ. ಅರಣ್ಯ ಕಾಯ್ದೆ ಉಲ್ಲಂಘಿಸಿದ ಕಾರಣಕ್ಕೆ ಈ ರೆಸಾರ್ಟ್‌ನ ಮಾಲೀಕರ ವಿರುದ್ಧ ಅರಣ್ಯ ಇಲಾಖೆ 2019 ನ. 19ರಂದು ಪ್ರಕರಣ ದಾಖಲಿಸಿದೆ. ಅದರ ವಿರುದ್ಧ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದು, 2023ರ ಜ. 12ರಂದು ಪ್ರಕರಣ ವಜಾಗೊಂಡಿದೆ. ಉಳಿದವರು ವಾಣಿಜ್ಯ ಚಟಿವಟಿಕೆಗಾಗಿ ಭೂ ಪರಿವರ್ತನೆ ಮಾಡಿಸಿಕೊಂಡಿಲ್ಲ ಎಂದೂ ವರದಿ ವಿವರಿಸಿದೆ.
ಬಿಆರ್‌ಟಿ ವನ್ಯಜೀವಿ ಧಾಮವನ್ನು ರಾಜ್ಯ ಸರ್ಕಾರ 2011ರಲ್ಲಿ ಬಿಳಿಗಿರಿ ರಂಗನಾಥ ದೇವಸ್ಥಾನ ಹುಲಿ ಸಂರಕ್ಷಿತಾ ಪ್ರದೇಶವೆಂದು ಘೋಷಣೆ ಮಾಡಿತ್ತು. ಬಿಆರ್‌ಟಿ ವ್ಯಾಪ್ತಿಯ ಕಂದಾಯ ಗ್ರಾಮ ಮತ್ತು ಹುಲಿ ಸಂರಕ್ಷಿತಾ ಪ್ರದೇಶವನ್ನು ಬಿಆರ್‌ಟಿ ಸೂಕ್ಷ್ಮವಲಯ ಎಂದು ಘೋಷಿಸಿ 2019 ನ. 19ರಂದು ಅಧಿಸೂಚನೆ ಹೊರಡಿಸಲಾಗಿದೆ. ಹುಲಿ ಸಂರಕ್ಷಿತ ಪ್ರದೇಶದ 6 ಕಿ.ಮೀ ಹೊರಗಿನ ಪ್ರದೇಶವೂ ಸೇರಿ ಒಟ್ಟು 262.43 ಚದರ ಕಿಲೋ ಮೀಟರ್ ವಿಸ್ತೀರ್ಣವಿದೆ. ಬಿಆರ್‌ಟಿ ಗ್ರಾಮ ವ್ಯಾಪ್ತಿಯು 22,640.12 ಎಕರೆ ಇದ್ದು, ಅದರಲ್ಲಿ 22,215.12 ಎಕರೆ ಮೀಸಲು ಅರಣ್ಯ. 560.20 ಎಕರೆ ಕಂದಾಯ ಮತ್ತು ಖಾಸಗಿ ಭೂಮಿ. ಕಂದಾಯ ಮತ್ತು ಖಾಸಗಿ ಜಮೀನಿನಲ್ಲಿ ಲಾಡ್ಜ್‌ಗಳು, ಹೋಂ ಸ್ಟೇ, ರೆಸಾರ್ಟ್ ಕಾರ್ಯನಿರ್ವಹಿಸುತ್ತಿವೆ.
1. ಗಿರಿದರ್ಶಿನಿ ರೆಸಿಡೆನ್ಸಿ, ಚಂಪಕಾರಣ್ಯ ಹೋಂ ಸ್ಟೇ; ಎರಡು ಕಟ್ಟಡಗಳಲ್ಲಿ 8 ರೂಂಗಳಿವೆ, ಪ್ರವಾಸೋದ್ಯಮ ಇಲಾಖೆಯ ಅನುಮತಿ ಇಲ್ಲ.
2. ಆಕಾಶ್ ಲಾಡ್ಜ್ (ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ (ವಿಜಿಕೆಕೆ) ಜಮೀನಿನಲ್ಲಿ ಕಾರ್ಯನಿರ್ವಹಣೆ– ಇದು ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಸೆಂಟರ್ ಆಗಿ ಬದಲಾಗಿದೆ); ವ್ಯವಸಾಯಕ್ಕೆ ಸೂಕ್ತವಲ್ಲವೆಂದು 1995ರಲ್ಲಿ ಸರ್ಕಾರೇತರ ಸಂಸ್ಥೆ ವಿಜಿಕೆಕೆಗೆ ಆಶ್ರಯ ಯೋಜನೆಯಲ್ಲಿ ಈ ಜಾಗ ಮಂಜೂರಾಗಿದ್ದು, ಸೋಲಿಗ ಜನಾಂಗದ ಕಲ್ಯಾಣಕ್ಕೆ ಬಳಸಬೇಕೆಂದು ನಿರ್ದೇಶನವಿದೆ. ಈಗ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (ಎನ್‌ಜಿಒ) ಬಾಡಿಗೆಗೆ ಪಡೆದು ಗಿರಿಜನರ ಆರೋಗ್ಯಕ್ಕೆ ಸಂಬಂಧಿಸಿದ ಸಂಶೋಧನೆ ಕೈಗೊಂಡಿದ್ದಾರೆ.
3. ಗೊರುಕನ ಆಯುರ್ವೇದಿಕ್ ಎಕೋ ವೆಲ್‌ನೆಸ್ ರೆಸಾರ್ಟ್; 10 ಕಾಟೇಜ್‌ನ ಟ್ರೀ ಹಟ್ ಕ್ಯಾಬಿನ್ ಕಾಟೇಜ್ ಮತ್ತು ಸ್ಪಾ ಒಳಗೊಂಡ ಈ ಪ್ರದೇಶ, ಪರಿಸರ ಶಿಕ್ಷಣ ಮತ್ತು ಆಯುರ್ವೇದಿಕ್ ಚಿಕಿತ್ಸೆ ಹೆಸರಿನಲ್ಲಿ ಅನುಮತಿ ಪಡೆದು ರೆಸಾರ್ಟ್ ರೀತಿ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಗೆ ಸುಮಾರು ₹ 3.5 ಕೋಟಿ ವೆಚ್ಚವಾಗಿದೆ
4. ರಜತಾದ್ರಿ ಹಿಲ್ ವಿಲ್ಲಾ (ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ); ಕಂದಾಯ ಇಲಾಖೆಯಿಂದ 2004ರಲ್ಲಿ ಭೂ ಪರಿವರ್ತನೆ ಆದೇಶ ಆಗಿದೆ. 6,500 ಚ. ಮೀ ಪ್ರದೇಶದಲ್ಲಿ 8 ರೂಂಗಳನ್ನು ಹೊಂದಿದ್ದು, ಪ್ರವಾಸೋದ್ಯಮ ಉದ್ದೇಶಕ್ಕೆ ಬಳಸಲಾಗುತ್ತಿದೆ. ಅಕ್ರಮ ಕಟ್ಟಡ ನಿರ್ಮಾಣ ಸಂಬಂಧ ಮಾಲೀಕರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ.
5. ಶ್ವೇತಗಿರಿ ಹೋಂ ಸ್ಟೇ; ಕಾರ್ಯನಿರ್ವಹಿಸುತ್ತಿದೆ
6. ರಾಜ್‌ಕುಮಾರ್ ಲಾಡ್ಜ್ (ನಡೆಯುತ್ತಿಲ್ಲ); ಎರಡು ರೂಂಗಳಿದ್ದು, ಈ ಕಟ್ಟಡ ಹೊರತುಪಡಿಸಿ ಉಳಿದ ಪ್ರದೇಶದಲ್ಲಿ ಕಾಫಿ ಮತ್ತು ಕಾಳುಮೆಣಸು ಬೆಳೆಯಲಾಗುತ್ತಿದೆ
7. ಸೋಮಣ್ಣ ರೂಮ್ಸ್; ಸದ್ಯ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.