ಬೆಂಗಳೂರು: ಕನ್ನಡ ಸಾಹಿತ್ಯದ ಪ್ರಬಂಧ ಪ್ರಕಾರಕ್ಕೆ ಪ್ರತಿ ವರ್ಷವೂ ಹೊಸ ಭಾವ–ಬಣ್ಣಗಳನ್ನು ಪರಿಚಯಿಸುವ ‘ಸುಧಾ ಯುಗಾದಿ ಪ್ರಬಂಧ ಸ್ಪರ್ಧೆ’ಯ 2024ರ ಸಾಲಿನ ಫಲಿತಾಂಶ ಪ್ರಕಟಗೊಂಡಿದ್ದು, ಹಾಸನದ ಪ್ರಭಾಮಣಿ ನಾಗರಾಜ ಅವರ ‘ಎಲ್ಲದಕೂ ಕಾರಣ ನೀನೇ ಪ್ರಿಯ ದರ್ಪಣ’ ಪ್ರಬಂಧ ಮೊದಲ ಬಹುಮಾನ ಪಡೆದಿದೆ.
ತೀರ್ಥಹಳ್ಳಿಯ ಸತೀಶ್ ಜಿ.ಕೆ. (‘ಬದುಕಿನ ಕತ್ತಲಾಚೆಗೆ ಬೆಳಕಿನ ಬಯಲು’) ಹಾಗೂ ಶಿವಮೊಗ್ಗ ಜಿಲ್ಲೆ ಮೂಡುಗಡ್ಡೆಯ ವಿನಾಯಕ ಅರಳಸುರಳಿ (‘ದವಾಖಾನೆಯ ದಾಖಲೆಗಳು’) ಅವರ ಪ್ರಬಂಧಗಳು ಎರಡನೇ ಮತ್ತು ಮೂರನೇ ಬಹುಮಾನ ಪಡೆದಿವೆ. ಬಹುಮಾನಿತ ಪ್ರಬಂಧಗಳಿಗೆ ಕ್ರಮವಾಗಿ ₹15,000, ₹ 12,000 ಹಾಗೂ ₹ 10,000 ದೊರೆಯಲಿದೆ.
‘ಹಿರಿಯತನದಲಿ ನೋಡೆ ಊರುಗೋಲ ಹಿಡಿದವರು’ (ಜಿ.ವಿ. ಅರುಣ), ‘ಇಲಿಯ ಬೇಟೆ’ (ಶಿವರಾಜ್ ಬ್ಯಾಡರಹಳ್ಳಿ), ‘ರೌಡಿ ಮಿಂಟುವಿನ ಜೀವನ ವೃತ್ತಾಂತ’ (ಇಸ್ಮತ್ ಪಜೀರ್), ‘ಏಳು ಚುಕ್ಕಿ ರಂಗೋಲಿ’ (ಪ್ರವೀಣ್ ಕುಮಾರ್ ಜಿ.), ‘ನಿಲ್‌ದಾಣಗಳ ನಾದಲೀಲೆ’ (ಸುಧಾಕರ ದೇವಾಡಿಗ ಬಿ.), ‘ಪರಿವರ್ತನೆ’ (ಡಾ. ಪ್ರೇಮಲತ ಬಿ.) ಪ್ರಬಂಧಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಐದು ನೂರಕ್ಕೂ ಹೆಚ್ಚಿನ ಪ್ರಬಂಧಗಳು ಸ್ಪರ್ಧೆಗೆ ಬಂದಿದ್ದವು. ಭಾರತಿ ದೇವಿ ಪಿ. ಹಾಗೂ ಚಿದಾನಂದ ಸಾಲಿ ಈ ವರ್ಷದ ಪ್ರಬಂಧ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.