ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳು, ನಿಗಮ, ಮಂಡಳಿಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಅಧಿಕಾರಿಗಳು, ನೌಕರರನ್ನು ಕೆಲಸದಿಂದ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿ ನಾಲ್ಕು ತಿಂಗಳಾದರೂ ಬಹುಪಾಲು ಮಂದಿಯ ‘ಗುತ್ತಿಗೆ ಕೆಲಸ’ ಅಬಾಧಿತವಾಗಿ ಮುಂದುವರಿದಿದೆ.
ಸರ್ಕಾರಿ ಸೇವೆಯಲ್ಲಿ ಇದ್ದಾಗ ಆಯಕಟ್ಟಿನ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿದ ಐಎಎಸ್, ಕೆಎಎಸ್ ಅಧಿಕಾರಿಗಳೂ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ನೌಕರರು ಸಚಿವರು, ಶಾಸಕರ ಪ್ರಭಾವ ಬಳಸಿಕೊಂಡು ನಿವೃತ್ತಿಯ ನಂತರವೂ ಗುತ್ತಿಗೆ ಆಧಾರದಲ್ಲೇ ಪ್ರಮುಖ ಹುದ್ದೆಗಳ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅವರಿಗೆ ಪಿಂಚಣಿಯ ಜತೆಗೆ, ದೊಡ್ಡಮೊತ್ತದ ಸಂಭಾವನೆಯನ್ನೂ ನೀಡಲಾಗುತ್ತಿದೆ.
‘ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಸಚಿವಾಲಯ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅನಗತ್ಯವಾದ ಹುದ್ದೆಗಳನ್ನು ಸೃಷ್ಟಿಸಿ, ಅಂತಹ ಹುದ್ದೆಗಳಿಗೆ ನಿವೃತ್ತ ಅಧಿಕಾರಿಗಳು, ನೌಕರರನ್ನು ಬಳಕೆ ಮಾಡಿಕೊಳ್ಳಲಾಗಿದೆ. ಸಮಾಲೋಚಕರು, ಸಂಪನ್ಮೂಲ ವ್ಯಕ್ತಿಗಳ ಹೆಸರಿನಲ್ಲಿ ಅಧಿಕ ಸಂಖ್ಯೆಯಲ್ಲಿ ನಿವೃತ್ತರನ್ನು ಬಳಕೆ ಮಾಡಿಕೊಂಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಗ್ರೂಪ್ ಎ ವೃಂದದ ಹುದ್ದೆಗಳಿಗೂ ನಿವೃತ್ತ ಐಎಎಸ್, ಕೆಎಎಸ್ ಅಧಿಕಾರಿಗಳನ್ನು ನೇಮಕ ಮಾಡಿಕೊಂಡು ವೇತನ, ವಾಹನ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅಂತಹ ಎಲ್ಲ ನಿವೃತ್ತ ಅಧಿಕಾರಿ, ನೌಕರರನ್ನು ತಕ್ಷಣ ಕೆಲಸದಿಂದ ಬಿಡುಗಡೆ ಮಾಡಬೇಕು. ಆ ಜಾಗಕ್ಕೆ ಹಾಲಿ ಕರ್ತವ್ಯದಲ್ಲಿರುವ ಅಧಿಕಾರಿಗಳು, ನೌಕರರನ್ನೇ ನೇಮಕ ಮಾಡಿಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಪ್ರಸಕ್ತ ವರ್ಷದ ಜನವರಿಯಲ್ಲೇ ಸುತ್ತೋಲೆ ಹೊರಡಿಸಿದ್ದರು.
ಸುತ್ತೋಲೆ ನಂತರ ಕೆಲ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ನಿವೃತ್ತರ ಪಟ್ಟಿ ಕಳುಹಿಸಿದ್ದರೂ, ಸೇವೆಯಿಂದ ಬಿಡುಗಡೆಯಾದವರು ಬೆರಳೆಣಿಕೆಯಷ್ಟು ಮಾತ್ರ. ಕೆಲ ಇಲಾಖೆಗಳು ಇದುವರೆಗೂ ಪಟ್ಟಿಯನ್ನೇ ಕಳುಹಿಸಿಲ್ಲ. ಸರ್ಕಾರದ ಅಂದಾಜಿನ ಪ್ರಕಾರ ನಿಗಮ–ಮಂಡಳಿಗಳೂ ಸೇರಿದಂತೆ ವಿವಿಧೆಡೆ 1,400ಕ್ಕೂ ಹೆಚ್ಚು ನಿವೃತ್ತರು ಕೆಲಸ ಮಾಡುತ್ತಿದ್ದಾರೆ. ನಿವೃತ್ತರ ಕೆಲಸದಿಂದ ಬೊಕ್ಕಸಕ್ಕೆ ಆಗುತ್ತಿರುವ ಹೊರೆ ₹100 ಕೋಟಿಗೂ ಅಧಿಕ ಎನ್ನುತ್ತವೆ ಸರ್ಕಾರದ ಮೂಲಗಳು.
‘ಕೆಲಸದಲ್ಲಿ ಇದ್ದಾಗ ಜನಪರ ಯೋಜನೆಗಳನ್ನು ವಿರೋಧಿಸಿದ್ದ ಉನ್ನತಾಧಿಕಾರಿಗಳು ನಿವೃತ್ತಿಯ ನಂತರ ಆಯಕಟ್ಟಿನ ಜಾಗದಲ್ಲಿ ಕುಳಿತು ಅದೇ ಜನಪರ ಯೋಜನೆಗಳ ಮೂಲಕ ಲಾಭ ಮಾಡಿಕೊಳ್ಳುತ್ತಿದ್ದಾರೆ. ಬಹುತೇಕ ಸಚಿವರ ಬಳಿ ವಿಶೇಷ ಕರ್ತವ್ಯಾಧಿಕಾರಿಗಳಾಗಿ (ಒಎಸ್‌ಡಿ) ಸೇರಿಕೊಂಡು ಅವರಿಗೂ ಲಾಭದ ಮಾರ್ಗಗಳನ್ನು ತೋರಿಸಿಕೊಡುತ್ತಿದ್ದಾರೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರ ಕಚೇರಿಗಳೂ ನಿವೃತ್ತರನ್ನು ನೇಮಿಸಿಕೊಂಡಿವೆ. ಅಂಥವರು ಇಲಾಖೆಯ ಅಧಿಕಾರಿ, ಸಿಬ್ಬಂದಿಯನ್ನೂ ನಿಯಂತ್ರಿಸುತ್ತಿದ್ದಾರೆ’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಕೆ.ಆರ್. ಮಧುಸೂದನ್.
ನಿವೃತ್ತರದೇ ಕಾರುಬಾರು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲೇ ಅಧಿಕ ಸಂಖ್ಯೆಯ ನಿವೃತ್ತರು ಕೆಲಸ ಮಾಡುತ್ತಿದ್ದಾರೆ. ಉದ್ಯೋಗ ಖಾತ್ರಿ, ಕೂಸಿನ ಮನೆ ಸೇರಿದಂತೆ ಬಹುತೇಕ ಯೋಜನೆಗಳ ಅನುಷ್ಠಾನ ನಿವೃತ್ತ ಅಧಿಕಾರಿಗಳ ನಿರ್ದೇಶನದಂತೆ ನಡೆಯುತ್ತಿದೆ ಎನ್ನುವ ದೂರುಗಳಿವೆ.
ಉದ್ಯೋಗ ಖಾತರಿ ಯೋಜನೆ ಲೆಕ್ಕ ತಪಾಸಣೆಯನ್ನು ಸಾಮಾಜಿಕ ಸಂಶೋಧನಾ ನಿರ್ದೇಶನಾಲಯ ಮಾಡುತ್ತದೆ. ನಿರ್ದೇಶನಾಲಯದ ನಿರ್ದೇಶಕ ಹಾಗೂ ಜಂಟಿ ನಿರ್ದೇಶಕ ಇಬ್ಬರೂ ನಿವೃತ್ತ ಅಧಿಕಾರಿಗಳು. ಜಂಟಿ ನಿರ್ದೇಶಕ
ರಾಗಿದ್ದ ಎಂ.ಕೆ. ಕೆಂಪೇಗೌಡ ಅವರು 2019ರಲ್ಲಿ ನಿವೃತ್ತರಾದ ನಂತರ ಅವರನ್ನು ಎರಡು ವರ್ಷ ಅದೇ ಹುದ್ದೆಯಲ್ಲಿ ಗುತ್ತಿಗೆ ಆಧಾರದಲ್ಲಿ ಮುಂದುವರಿಸಲಾಗಿತ್ತು. ಮತ್ತೆ ಅವರ ಅವಧಿ ವಿಸ್ತರಿಸಲಾಗಿದ್ದು, ಇಂದಿಗೂ ಅದೇ ಹುದ್ದೆಯಲ್ಲೇ ಮುಂದುವರಿದಿದ್ದಾರೆ. ನಿವೃತ್ತರಾದ ಬಹುತೇಕ ಐಎಎಸ್ ಅಧಿಕಾರಿಗಳು ಸರ್ಕಾರೇತರ ಸಂಸ್ಥೆ ಗಳನ್ನು (ಎನ್‌ಜಿಒ) ಸ್ಥಾಪಿಸಿಕೊಂಡಿದ್ದು, ಅಂತಹ ಎನ್‌ಜಿಒಗಳ ಮೂಲಕ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಕುರಿತು ಕೆಲ ಸಂಘಟನೆಗಳು ಗ್ರಾಮೀಣಾಭಿವೃದ್ಧಿ ಇಲಾಖೆಗೆ ದೂರು ಸಲ್ಲಿಸಿವೆ.
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಿವೃತ್ತ ಅಧಿಕಾರಿಗಳ ಹಾವಳಿ ಮಿತಿಮೀರಿದೆ. ಸೇವೆಯ ಹೆಸರಲ್ಲಿ ಲಾಭ ಮಾಡಿಕೊಳ್ಳುವ ಅಂಥವರನ್ನು ದೂರ ಇಡಬೇಕು.ಕಾಡಶೆಟ್ಟಿಹಳ್ಳಿ ಸತೀಶ್, ಅಧ್ಯಕ್ಷರು, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ.
ಖಾಲಿ ಇರುವ 2.58 ಲಕ್ಷ ಹುದ್ದೆಗಳನ್ನು ಸರ್ಕಾರ ಹಂತ ಹಂತವಾಗಿ ಭರ್ತಿ ಮಾಡಿದರೆ, ನಿರುದ್ಯೋಗ ಸಮಸ್ಯೆಯೂ ನಿವಾರಣೆಯಾಗುತ್ತದೆ, ನಿವೃತ್ತರ ಸೇವೆಯ ಅಗತ್ಯವೂ ಇರದು.–ಸಿ.ಎಸ್. ಷಡಾಕ್ಷರಿ, ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ.
ಸಚಿವಾಲಯದಲ್ಲಿ ನಿವೃತ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಅವರನ್ನು ಸೇವೆಯಿಂದ ಬಿಡುಗಡೆ ಮಾಡಿ, ಸಚಿವಾಲಯದ ಅಧಿಕಾರಿಗಳು ಮತ್ತು ನೌಕರರಿಗೆ ಅವಕಾಶ ನೀಡಬೇಕು.– ರಮೇಶ್ ಸಂಗಾ, ಅಧ್ಯಕ್ಷ, ಕರ್ನಾಟಕ ಸಚಿವಾಲಯ ನೌಕರರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.