ADVERTISEMENT

ಬಿಬಿಎಂಪಿ ಬೆಡ್ ಹಂಚಿಕೆಗೆ ಸಾಫ್ಟ್‌ವೇರ್ ಮರುವಿನ್ಯಾಸ: ತೇಜಸ್ವಿ ಸೂರ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಮೇ 2021, 9:45 IST
Last Updated 5 ಮೇ 2021, 9:45 IST
   

ಬೆಂಗಳೂರು: ಬಿಬಿಎಂಪಿ ಬೆಡ್ ಹಂಚಿಕೆಗೆ ಸಂಬಂಧಿಸಿದಂತೆ ಸಾಫ್ಟ್ ವೇರ್ ಮರುವಿನ್ಯಾಸಗೊಳಿಸಲು ಇನ್ಫೊಸಿಸ್‌ನ ಸಹ ಸ್ಥಾಪಕ ನಂದನ್‌ ನಿಲೇಕಣಿ ಅವರನ್ನು ಮನವಿ ಮಾಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಬುಧವಾರ ತಿಳಿಸಿದ್ದಾರೆ.

ಇದಕ್ಕೆ ನಂದನ್ ನಿಲೇಕಣಿ ಸೂಕ್ತ ರೀತಿಯಲ್ಲೇ ಸ್ಪಂದಿಸಿದ್ದು, ಪರಿಣಿತರ ತಂಡವನ್ನು ಸಾಫ್ಟ್ ವೇರ್ ಮರುವಿನ್ಯಾಸಗೊಳಿಸಲು ಸಜ್ಜುಗೊಳಿಸಿರುವುದು ಶ್ಲಾಘನೀಯ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ, ಇಂದು ಬೆಳಿಗ್ಗೆ ಶ್ರೀ ನಂದನ್ ನಿಲೇಕಣಿ ಅವರೊಂದಿಗೆ ಮಾತನಾಡಿ ಬಿಬಿಎಂಪಿ ಬೆಡ್ ಹಂಚಿಕೆಗೆ ಸಂಬಂಧಿಸಿದಂತೆ ಸಾಫ್ಟ್ ವೇರ್ ಅನ್ನು ಮರುವಿನ್ಯಾಸಗೊಳಿಸಲು ತಾಂತ್ರಿಕ ಸಹಕಾರ ಒದಗಿಸುವಂತೆ ಮನವಿ ಮಾಡಿದ್ದು, ಪರಿಣಿತರ ತಂಡವನ್ನು ಇದಕ್ಕೊಸ್ಕರವೇ ಸಜ್ಜುಗೊಳಿಸಿರುವುದು ಶ್ಲಾಘನೀಯ. ಶ್ರೀ ನಂದನ್ ನಿಲೇಕಣಿ ರವರ ಜನಪರ ಕಾಳಜಿ,ಬದ್ಧತೆ ಅಭಿನಂದನಾರ್ಹ ಎಂದು ಶ್ಲಾಘಿಸಿದ್ದಾರೆ.

ನುರಿತ ತಂತ್ರಜ್ಞರನ್ನು ಒಳಗೊಂಡಿರುವ ಈ ತಾಂತ್ರಿಕ ತಂಡವು, ಐಸ್ಪಿರಿಟ್ ಹಾಗೂ ಪ್ರಾಡಾಕ್ಟ್ ನೇಷನ್ ಸಂಸ್ಥೆಗಳ ಸಹಯೋಗದೊಂದಿಗೆ ಬೆಡ್ ಹಂಚಿಕೆಗೆ ಹಸ್ತಕ್ಷೇಪ ರಹಿತ, ಪಾರದರ್ಶಕ ವ್ಯವಸ್ಥೆ ಒಳಗೊಂಡ ಸಾಫ್ಟ್ ವೇರ್ ಅನ್ನು ಅಭಿವೃದ್ಧಿಗೊಳಿಸಲು ಸಹಕಾರ ನೀಡುತ್ತಿದ್ದು, ಇಡೀ ತಂಡಕ್ಕೆ ಬೆಂಗಳೂರು ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.

ಮಂಗಳವಾರದಂದು ಕೊರೊನಾ ಸೋಂಕಿತರ ಹೆಸರಿನಲ್ಲಿ ಹಾಸಿಗೆ ಬ್ಲಾಕ್ ಮಾಡಿಸಿ ದುಬಾರಿ ಬೆಲೆಗೆ ಬೇರೊಬ್ಬರಿಗೆ ಮಾರಾಟ ಮಾಡುತ್ತಿದ್ದ ದಂಧೆಯನ್ನು ಸಂಸದ ತೇಜಸ್ವಿ ಸೂರ್ಯ ಹಾಗೂ ಸರ್ಕಾರದ ಶಾಸಕರು ಬಯಲು ಮಾಡಿದ್ದು, ತಪ್ಪಿತ್ತಸ್ಥರ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು.

ಈ ಅವ್ಯವಹಾರವನ್ನು ತೇಜಸ್ವಿ ಸೂರ್ಯ ಅವರಲ್ಲದೆ ಶಾಸಕರಾದ ಸತೀಶ ರೆಡ್ಡಿ, ರವಿ ಸುಬ್ರಹ್ಮಣ್ಯ ಹಾಗೂ ಉದಯ್ ಗರುಡಾಚಾರ್ ಅವರು ಬಯಲಿಗೆಳೆದಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನವನ್ನೇ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.