ADVERTISEMENT

‘ಭೂ ಪರಿವರ್ತನೆ’ ವ್ಯವಸ್ಥೆ ರದ್ದು: ಆರ್. ಅಶೋಕ

ಪರ್ಯಾಯ–ಪಾರದರ್ಶಕ ವ್ಯವಸ್ಥೆ ರೂಪಿಸಲು ರಾಜ್ಯಸರ್ಕಾರದ ಚಿಂತನೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 20:00 IST
Last Updated 20 ಆಗಸ್ಟ್ 2021, 20:00 IST
ಆರ್. ಅಶೋಕ
ಆರ್. ಅಶೋಕ   

ಬೆಂಗಳೂರು: ಭೂ ಪರಿವರ್ತನೆ ವ್ಯವಸ್ಥೆ ವ್ಯಾಪಕ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆ ಎಂಬ ದೂರುಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಈ ವ್ಯವಸ್ಥೆಯನ್ನೇ ರದ್ದುಗೊಳಿಸಲು ರಾಜ್ಯಸರ್ಕಾರ ಚಿಂತನೆ ನಡೆಸಿದೆ.

‘ಪ್ರಜಾವಾಣಿ’ಯ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಶುಕ್ರವಾರ ಪಾಲ್ಗೊಂಡಿದ್ದ ಕಂದಾಯ ಸಚಿವ ಆರ್. ಅಶೋಕ, ಈ ಕುರಿತು ಕೈಗೊಳ್ಳುವ ಉಪಕ್ರಮಗಳ ಕುರಿತು ಮಾತನಾಡಿದರು.

ಕೃಷಿಯಲ್ಲಿ ಆಸಕ್ತಿ ಹೊಂದಿರುವವರು ಭೂಮಿ ಖರೀದಿಸಬೇಕೆಂದರೆ ಸಾಕಷ್ಟು ಅಡೆ–ತಡೆಗಳಿದ್ದವು. ಕಾನೂನುಬದ್ಧವಾಗಿ ಕೃಷಿ ಜಮೀನು ಖರೀದಿಸಲೂ ಲಂಚ ಕೊಡಬೇಕಾಗಿತ್ತು. ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 79ಎ, 79ಬಿ ರದ್ದುಪಡಿಸಿ, ಎಲ್ಲರೂ ಭೂಮಿ ಖರೀದಿಸಲು ಅವಕಾಶ ಮಾಡಿಕೊಡಲಾಯಿತು. ಜಮೀನು ಖರೀದಿ ವೇಳೆ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೂ ಕಡಿವಾಣ ಹಾಕಲಾಯಿತು. ಭೂ ಪರಿವರ್ತನೆಗೆ ಸಂಬಂಧಿಸಿದಂತೆಯೂ ಇಂಥದ್ದೇ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ADVERTISEMENT

‘79ಎ, 79ಬಿ ಕಲಂ ರದ್ದು ಪಡಿಸಲು ಮುಂದಾದಾಗ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಈ ಕ್ರಮದಿಂದ ಸರ್ಕಾರಕ್ಕೆ ₹400 ಕೋಟಿಗೂ ಹೆಚ್ಚು ಮುದ್ರಾಂಕ ಶುಲ್ಕ ಹರಿದು ಬಂದಿದೆ’ ಎಂದು ಅವರು ಮಾಹಿತಿ ನೀಡಿದರು.

ಹೇಗೆ ನಡೆಯುತ್ತದೆ ಭ್ರಷ್ಟಾಚಾರ ?

ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಅಂದರೆ, ವಸತಿ, ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗೆ ಬಳಸಿಕೊಳ್ಳಲು ಭೂಪರಿವರ್ತನೆ ಕೋರಿ ನಾಗರಿಕರು ಅರ್ಜಿ ಸಲ್ಲಿಸಬೇಕು. ಜತೆಗೆ, 30ಕ್ಕೂ ಹೆಚ್ಚು ದಾಖಲೆಗಳನ್ನು ಸಲ್ಲಿಸಬೇಕು. ಈಗ ಇದಕ್ಕೆ ಆನ್‌ಲೈನ್‌ ವ್ಯವಸ್ಥೆ ಇದ್ದರೂ, ಹಲವು ‘ಕೊರತೆ’ಗಳ ನೆಪ ಒಡ್ಡಿ ಅರ್ಜಿ ವಿಲೇವಾರಿ ವಿಳಂಬ ಮಾಡಲಾಗುತ್ತದೆ.

ಭೂಪರಿವರ್ತನೆಯಾದರೆ ಅರ್ಜಿದಾರರಿಗೆ ಹೆಚ್ಚು ‘ಲಾಭ’ ಆಗುತ್ತದೆ ಎಂದು ಅರಿತಿರುವ ಅಧಿಕಾರಿಗಳು ಇಂತಹ ಅರ್ಜಿಗಳನ್ನು ತ್ವರಿತವಾಗಿ ಮಂಜೂರು ಮಾಡಲು ‘ಕಮಿಷನ್‌‘ಗೆ ಬೇಡಿಕೆ ಇಡುವುದು ಸಾಮಾನ್ಯ. ಗ್ರಾಮ ಲೆಕ್ಕಾಧಿಕಾರಿಯಿಂದ ಜಿಲ್ಲಾಧಿಕಾರಿಯವರೆಗೆ ಹಬ್ಬಿರುವ ಜಾಲವಿದು. ‘ಭೂಪರಿವರ್ತನೆ’ ಎನ್ನುವುದು ಈ ಎಲ್ಲ ಅಧಿಕಾರಿಗಳಿಗೆ ಭಾರಿ ‘ಆದಾಯ’ ತಂದುಕೊಡುವ ಕಾರ್ಯವೂ ಹೌದು.

ಕಾನೂನುಬದ್ಧ ದಾಖಲೆಗಳಿದ್ದರೂ, ಕಾರಣಗಳು ನೈಜವಾಗಿದ್ದರೂ ಲಂಚ ನೀಡದೆ ಇಂತಹ ಕಡತಗಳು ವಿಲೇವಾರಿ ಆಗುವುದೇ ಇಲ್ಲ. ಬ್ರಿಟಿಷರ ಕಾಲದ ಇಂತಹ ವ್ಯವಸ್ಥೆಯನ್ನು ರದ್ದುಗೊಳಿಸಿ, ಇದಕ್ಕೆ ಪರ್ಯಾಯ ಮತ್ತು ಪಾರದರ್ಶಕ ವ್ಯವಸ್ಥೆ ರೂಪಿಸುವ ಚಿಂತನೆಯನ್ನು ರಾಜ್ಯಸರ್ಕಾರ ಹೊಂದಿದೆ.

ನೋಂದಣಿ ಸಮಸ್ಯೆ ನೀಗಿಸಲು ‘ಬ್ಯಾಟರಿ’

‘ಸರ್ವರ್‌ ಡೌನ್‌ ಸಮಸ್ಯೆಯಿಂದ ಆಸ್ತಿ ನೋಂದಣಿ ಪ್ರಕ್ರಿಯೆ ಸರಾಗವಾಗಿ ನಡೆಯುತ್ತಿಲ್ಲ. ಅಲ್ಲದೆ, ವಿದ್ಯುತ್‌ ವ್ಯತ್ಯಯವೂ ಸಾಕಷ್ಟು ಸಮಸ್ಯೆ ತಂದೊಡ್ಡುತ್ತಿದೆ. ಇದನ್ನು ಸರಿಪಡಿಸಲು ಉಪನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಬ್ಯಾಟರಿ ವ್ಯವಸ್ಥೆ ಮಾಡಲಾಗುವುದು’ ಎಂದು ಅಶೋಕ ಹೇಳಿದರು.

‘₹12 ಕೋಟಿ ವೆಚ್ಚದಲ್ಲಿ ಬ್ಯಾಟರಿಗಳನ್ನು ಅಳವಡಿಸಲಾಗುವುದು. ಇನ್ನು, ಆಸ್ತಿ ನೋಂದಣಿಗೆ ಸಂಬಂಧಿಸಿದ ತಂತ್ರಾಂಶಗಳನ್ನು ನಾಲ್ಕೈದು ಇಲಾಖೆಗಳಿಗೂ ಜೋಡಿಸಿರುವುದರಿಂದ ತೊಂದರೆಯಾಗುತ್ತಿದೆ. ಹೊಸದಾಗಿ ಕಾವೇರಿ–2 ತಂತ್ರಾಂಶವನ್ನು ಅಭಿವೃದ್ಧಿ ಪಡಿಸುವ ಜವಾಬ್ದಾರಿಯನ್ನು ಸೆಂಟರ್‌ ಫಾರ್‌ ಸ್ಮಾರ್ಟ್‌ ಗವರ್ನೆನ್ಸ್‌ ಸಂಸ್ಥೆಗೆ ವಹಿಸಲಾಗಿದೆ. ಆರು ತಿಂಗಳಲ್ಲಿ ಹೊಸ ತಂತ್ರಾಂಶ ಅಳವಡಿಸಲಾಗುವುದು’ ಎಂದರು.

‘ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಅಗತ್ಯವಿರುವ ಹಾರ್ಡ್‌ವೇರ್, ತಾಂತ್ರಿಕ ಸಿಬ್ಬಂದಿ ಹಾಗೂ ಕಂಪ್ಯೂಟರ್ ಆಪರೇಟರ್‌ ಮತ್ತು ಸ್ಟೇಷನರಿ ಸಾಮಗ್ರಿಗಳನ್ನು ಐದು ವರ್ಷಗಳ ಅವಧಿಗೆ ಸರಬರಾಜು ಮಾಡುವ ಸಂಸ್ಥೆಗಳಿಂದ ಟೆಂಡರ್ ಆಹ್ವಾನಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದೂ ತಿಳಿಸಿದರು.

ಫ್ಲ್ಯಾಟ್: ಮುದ್ರಾಂಕ ಶುಲ್ಕ ಶೇ 2ರಷ್ಟು ಇಳಿಕೆ

‘ಕೈಗೆಟಕುವ ದರದಲ್ಲಿನ ಮನೆಗಳ ಖರೀದಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ₹35 ಲಕ್ಷದಿಂದ ₹45 ಲಕ್ಷದವರೆಗಿನ ಫ್ಲ್ಯಾಟ್ ನೋಂದಣಿಗೆ ಮುದ್ರಾಂಕ ಶುಲ್ಕವನ್ನು ಶೇ 2ರಷ್ಟು ಕಡಿಮೆಗೊಳಿಸಲಾಗುವುದು’ ಎಂದು ಅಶೋಕ ಹೇಳಿದರು.

‘ಈ ಮೊತ್ತದ ಫ್ಲ್ಯಾಟ್‌ನ ಮೊದಲನೇ ನೋಂದಣಿಗೆ ಶೇ 5ರಷ್ಟು ಮುದ್ರಾಂಕ ಶುಲ್ಕ ಕಟ್ಟಬೇಕಾಗಿದೆ. ಇದನ್ನು ಶೇ 3ಕ್ಕೆ ಇಳಿಸಲಾಗುವುದು. ಒಂದು ವಾರದಲ್ಲಿ ಈ ಬಗ್ಗೆ ಆದೇಶ ಹೊರಡಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.