ADVERTISEMENT

ಭೂಮಾಪಕರ ಹುದ್ದೆಗೆ ಮತ್ತೆ ಅರ್ಜಿ ಆಹ್ವಾನ: ಆರ್.ಅಶೋಕ

ಪ್ರಜಾವಾಣಿ ಫೋನ್‌–ಇನ್‌ * ಸಾರ್ವಜನಿಕರ ಅಹವಾಲು ಆಲಿಸಿದ ಕಂದಾಯ ಸಚಿವ ಆರ್. ಅಶೋಕ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 20:30 IST
Last Updated 20 ಆಗಸ್ಟ್ 2021, 20:30 IST
ಆರ್. ಅಶೋಕ
ಆರ್. ಅಶೋಕ   

ಬೆಂಗಳೂರು: ಪೋಡಿ ಮಾಡಿಕೊಡಲು ವರ್ಷದಿಂದ ಸತಾಯಿಸುತ್ತಿದ್ದಾರೆ, ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿ ವರ್ಷವಾದರೂ ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲ, ಸ್ಮಶಾನ–ಗೋಮಾಳದ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ, ಆಸ್ತಿ ನೋಂದಣಿ ಕಚೇರಿಗಳಲ್ಲಿ ಸರ್ವರ್‌ ಡೌನ್ ಸಮಸ್ಯೆ ತೀವ್ರವಾಗಿದೆ....

ರಾಜ್ಯದ ನಾನಾ ಭಾಗಗಳಲ್ಲಿನ ನಾಗರಿಕರು ಕಂದಾಯ ಸಚಿವ ಆರ್. ಅಶೋಕ ಅವರಿಗೆ ದೂರವಾಣಿ ಕರೆಗಳ ಮೂಲಕ ಸಲ್ಲಿಸಿದ ಅಹವಾಲುಗಳ ಕೆಲವು ಉದಾಹರಣೆಗಳಿವು. ‘ಪ್ರಜಾವಾಣಿ’ ಫೋನ್‌ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕುಂದು–ಕೊರತೆ ಆಲಿಸಿದ ಸಚಿವರು, ಸೂಕ್ರ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

* ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿ ಒಂದೂವರೆ ವರ್ಷವೇ ಆಯಿತು. ಈವರೆಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಕೆಲಸವಿಲ್ಲದೆ ತೊಂದರೆಯಾಗಿದೆ, ಬೇಗ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿ.

ADVERTISEMENT

- ಮಧು ಜಿ.ಎನ್. ದಾವಣಗೆರೆ

ಅಶೋಕ: ಮೊದಲು ಸರ್ಕಾರದಿಂದಲೇ ಅಂದರೆ, ಕಂದಾಯ ಇಲಾಖೆಯಿಂದಲೇ ಗ್ರಾಮ ಲೆಕ್ಕಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಈಗ ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಕೋವಿಡ್‌ ಕಾರಣದಿಂದ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಶೀಘ್ರದಲ್ಲಿಯೇ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು.

********

* ಭೂಮಾಪಕರ ಪರೀಕ್ಷೆ ಬರೆದಿದ್ದೆವು. ಹಲವು ತಿಂಗಳುಗಳಾದರೂ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ

- ಪ್ರದೀಪ್, ಗದಗ

ಅಶೋಕ: ಈಗಾಗಲೇ 2,500 ಭೂಮಾಪಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಸರ್ವೆಯರ್‌ಗಳ ಅಗತ್ಯ ಇನ್ನೂ ಇದೆ. ಬಾಕಿ ಇರುವ ಹುದ್ದೆಗಳ ವಿವರ ತರಿಸಿಕೊಂಡು ಮತ್ತೆ ಅರ್ಜಿ ಆಹ್ವಾನಿಸಲಾಗುವುದು. ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು.

********

* ನಮ್ಮ ತಾಲ್ಲೂಕಿನ ಮೂರು ಊರುಗಳ ದಾಖಲೆಯೇ ಗ್ರಾಮ ಪಂಚಾಯಿತಿಯಲ್ಲಿ ಇಲ್ಲ ಎನ್ನುತ್ತಿದ್ದಾರೆ. ಪಹಣಿಯೇ ಸಿಗುತ್ತಿಲ್ಲ. ಬ್ಯಾಂಕ್‌ಗಳಲ್ಲಿ ಸಾಲವೂ ದೊರೆಯುತ್ತಿಲ್ಲ.

ಹನುಮಂತ, ಯಾದಗಿರಿ

ಅಶೋಕ: ಇಡೀ ಊರಿನ ದಾಖಲೆಯೇ ಇಲ್ಲ ಎಂದರೆ ತಾಂತ್ರಿಕವಾಗಿ ಏನಾದರೂ ಸಮಸ್ಯೆ ಇರಬಹುದು. ನಿಮ್ಮ ಕ್ಷೇತ್ರದ ಶಾಸಕರು ಮತ್ತು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು

********

* ಇ–ಸ್ವತ್ತು ನೀಡಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ. ಆಸ್ತಿಯ ಮೇಲೆ ಸಾಲ ತೆಗೆದುಕೊಳ್ಳಲು ಸಮಸ್ಯೆಯಾಗುತ್ತಿದೆ.

- ಸಿದ್ದೇಶ, ಹರಿಹರ

ಅಶೋಕ: ಇ–ಸ್ವತ್ತು ವಿಚಾರ ಗ್ರಾಮೀಣಾಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಸಚಿವ ಕೆ.ಎಸ್. ಈಶ್ವರಪ್ಪ ಜತೆ ಮಾತನಾಡಿ, ಪಿಡಿಒಗಳಿಗೂ ಸೂಚನೆ ನೀಡಲಾಗುವುದು

********

* ವಸತಿ ಮತ್ತಿತರ ಯೋಜನೆಗೆ ನಗರಾಭಿವೃದ್ಧಿ ಇಲಾಖೆಯವರು ಭೂಮಿ ಸ್ವಾಧೀನದ ಬಗ್ಗೆ ಅಧಿಸೂಚನೆ ಹೊರಡಿಸುತ್ತಾರೆ. 20–30 ವರ್ಷಗಳಾದರೂ ಅದನ್ನು ಇಲಾಖೆಯ ವಶಕ್ಕೆ ತೆಗೆದುಕೊಳ್ಳುವುದಿಲ್ಲ. ಇಂತಹ ಯೋಜನೆಗಳಿಗೆ ಭೂಮಿ ಕೊಟ್ಟವರು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ

- ಯದುಕುಮಾರ್, ಮೈಸೂರು

ಅಶೋಕ: ಈ ಸಮಸ್ಯೆ ಮೊದಲಿನಿಂದಲೂ ಇದೆ. ನಗರಾಭಿವೃದ್ಧಿ ಇಲಾಖೆಯು ಅಧಿಸೂಚನೆ ಹೊರಡಿಸಿದ ಭೂಮಿಯನ್ನು ಇಟ್ಟುಕೊಳ್ಳುವುದೂ ಇಲ್ಲ, ಬಿಟ್ಟು ಕೊಡುವುದೂ ಇಲ್ಲ. ಈ ಬಗ್ಗೆ ಹಲವು ದೂರುಗಳು ಬಂದಿವೆ. ಸ್ವಾಧೀನ ಪಡಿಸಿಕೊಳ್ಳಲು ಹೊರಡಿಸಲಾದ ಭೂಮಿಯ ಸರ್ವೆ ಸಂಖ್ಯೆಯನ್ನು ಕಳುಹಿಸಿ. ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರೊಂದಿಗೆ ಈ ಕುರಿತು ಮಾತನಾಡುತ್ತೇನೆ.

********

*ವೃದ್ಧಾಪ್ಯ ವೇತನ ಸಿಗುತ್ತಿಲ್ಲ. ತಹಶೀಲ್ದಾರ್‌ ಕಚೇರಿಗೆ ಹಲವು ಬಾರಿ ಅಲೆದಾಡಿದರೂ ಪ್ರಯೋಜನವಾಗಿಲ್ಲ.

- ದೇವಯ್ಯ, ಚಿಕ್ಕನಾಯಕನಹಳ್ಳಿ

ಅಶೋಕ: 60 ವರ್ಷ ಮೇಲ್ಪಟ್ಟವರು ಕಚೇರಿಗೆ ಅಲೆದಾಡುವ ಪ್ರಮೇಯವೇ ಇಲ್ಲ. ಸರ್ಕಾರವೇ ಸ್ವಯಂಪ್ರೇರಿತವಾಗಿ ನಾಗರಿಕರ ಆದಾಯ ಮತ್ತು ವಯೋಮಿತಿ ಆಧರಿಸಿ, ಮಾಸಾಶನ ನೀಡುತ್ತದೆ. ಆಧಾರ್‌ ಕಾರ್ಡ್‌ನಲ್ಲಿ 60 ವರ್ಷ ಆಗಿದ್ದರೂ ಸಾಕು. ಬಿಪಿಎಲ್ ಕಾರ್ಡ್‌ ಹೊಂದಿರಬೇಕು. ನವೋದಯ ಮೊಬೈಲ್ ಆ್ಯಪ್ ಮೂಲಕ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಪಿಂಚಣಿ ಮಂಜೂರು ಮಾಡಲಾಗುತ್ತಿದೆ.

********

* ಕೈಬರಹದ ದಾಖಲೆಯಲ್ಲಿ ನನ್ನ ಹೆಸರು ಇದೆ. ಆದರೆ, ಕಂಪ್ಯೂಟರ್‌ನಲ್ಲಿ ದಾಖಲಾಗಿರುವ ಕಡತಗಳಲ್ಲಿ ಹೆಸರು ಇಲ್ಲ. 20 ವರ್ಷಗಳಿಂದಲೂ ಈ ಸಮಸ್ಯೆಯನ್ನು ಬಗೆಹರಿಸುತ್ತಿಲ್ಲ

- ಶರಣಪ್ಪ ಸುಕಾಲಿ, ಬಾಗಲಕೋಟೆ

ಅಶೋಕ: ಪಹಣಿಯಲ್ಲಿ ಹೆಸರಿರುವ ಉಳಿದವರು ತಕರಾರು ತೆಗೆದಿದ್ದರೆ ಸಮಸ್ಯೆ ಆಗುತ್ತದೆ. ಕ್ಷೇತ್ರದ ಶಾಸಕರನ್ನು ಸಂಪರ್ಕಿಸಿ. ಇಲ್ಲದಿದ್ದರೆ, ಕಂದಾಯ ಅದಾಲತ್‌ ನಡೆಯುತ್ತಿದ್ದು, ಜಿಲ್ಲಾಧಿಕಾರಿ, ತಹಶೀಲ್ದಾರ್‌ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳೇ ಹಳ್ಳಿಗೆ ಬರುತ್ತಾರೆ. ಆ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿ. ಸ್ಥಳದಲ್ಲಿಯೇ ಸಮಸ್ಯೆ ಇತ್ಯರ್ಥವಾಗುತ್ತದೆ.

********

* ನಾಡಕಚೇರಿಗಳಲ್ಲಿ ಸರ್ವರ್‌ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ. ಯಾವುದೇ ದಾಖಲೆ ಕೇಳಿದರೂ ಕಂಪ್ಯೂಟರ್ ಆಪರೇಟರ್‌ ಲಂಚ ಕೇಳುತ್ತಾರೆ.

- ಮುನಿರಾಜು, ಚಿಕ್ಕಬಳ್ಳಾಪುರ

ಅಶೋಕ: ಬ್ಯಾಟರಿ ವ್ಯವಸ್ಥೆ, ತಂತ್ರಾಂಶ ಅಭಿವೃದ್ಧಿ ಸೇರಿದಂತೆ ಸರ್ವರ್‌ ಸಮಸ್ಯೆ ಪರಿಹರಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಂಪ್ಯೂಟರ್‌ ಹೆಸರು, ಹುದ್ದೆ ಮತ್ತಿತರ ವಿವರಗಳನ್ನು ಒಳಗೊಂಡ ಲಿಖಿತ ದೂರು ನೀಡಿದರೆ ತಕ್ಷಣವೇ ಅಂತಹ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

********

* ತಳವಾರ ಸಮುದಾಯದವರಿಗೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ನೀಡುತ್ತಿಲ್ಲ. ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿ

- ವಿಶ್ವನಾಥ, ಬೆಳಗಾವಿ

ಅಶೋಕ: ತಳವಾರ ಸಮುದಾಯದವರು ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಪ್ರಮಾಣಪತ್ರ ನೀಡಲೇಬೇಕು. ಈ ಬಗ್ಗೆ ಸಂಬಂಧಪಟ್ಟ ತಹಶೀಲ್ದಾರ್ ಜೊತೆ ಮಾತನಾಡುತ್ತೇನೆ.

ಅಂಕಿ–ಅಂಶ

ಬಗರ್‌ಹುಕುಂ: ಅರ್ಜಿ ಸಲ್ಲಿಕೆಗೆ ಅವಕಾಶ

* ಸುಮಾರು ವರ್ಷಗಳಿಂದ ಜಮೀನು ಉಳುಮೆ ಮಾಡುತ್ತಿದ್ದೇವೆ. ಪೋಡಿ ಆಗಿಲ್ಲ, ಸಮೀಕ್ಷೆಯೂ ಆಗಿಲ್ಲ. ಪೋಡಿಗೆ ಅರ್ಜಿ ಸಲ್ಲಿಸಿ ಎರಡು ವರ್ಷವಾದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರದಿಂದಲೇ ಜಮೀನು ಮಂಜೂರು ಆಗಿದ್ದರೂ ಪಹಣಿ ಕೊಡುತ್ತಿಲ್ಲ.

- ಶಿವರಾಜ್ ಕುಣಿಗಲ್, ಸಿದ್ಲಿಂಗು ಮಳವಳ್ಳಿ, ಧನಂಜಯ ಶಿರಾ, ಲಿಂಗಪ್ಪ ಅರಸೀಕೆರೆ

ಅಶೋಕ: ಸರ್ಕಾರಿ ಜಮೀನಿನಲ್ಲಿ 15–20 ವರ್ಷಗಳಿಂದ ಉಳುಮೆ ಮಾಡುತ್ತಿರುವವರಿಗೆ ಆಯಾ ಜಮೀನನ್ನು ಅವರಿಗೇ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅರ್ಜಿ ಸಲ್ಲಿಸಲುಅರ್ಹ ರೈತರಿಗೆ ಒಂದು ವರ್ಷದವರೆಗೆ ಕಾಲಾವಕಾಶವನ್ನೂ ನೀಡಲಾಗಿದೆ.

ಆದರೆ, 100 ಎಕರೆ ಇದ್ದರೆ, 150 ಎಕರೆಯವರೆಗೆ ಮಂಜೂರು ಮಾಡಿರುವುದರಿಂದ ರಾಜ್ಯದೆಲ್ಲೆಡೆ ಇಂತಹ ಸಮಸ್ಯೆ ಇದೆ. ಜನರ ಬಳಿ ದಾಖಲೆ ಇರುತ್ತದೆ, ಆದರೆ ಸರ್ಕಾರದ ಬಳಿ ಇಂತಹ ದಾಖಲೆಗಳೇ ಇರುವುದಿಲ್ಲ. 2 ಲಕ್ಷದಿಂದ 3 ಲಕ್ಷ ಜನರಿಗೆ ಇಂತಹ ಸಮಸ್ಯೆ ಆಗಿದೆ. ಈ ಜಮೀನುಗಳ ಪೋಡಿಗೆ ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ ನೀಡುವ ಚಿಂತನೆ ಇದೆ.

ಸರ್ಕಾರದಿಂದ ಭೂಮಿ ಮಂಜೂರು ಆಗಿದ್ದರೂ ಪಹಣಿ ಆಗಿಲ್ಲ ಎಂದರೆ, ಸಂಬಂಧಪಟ್ಟ ಕ್ಷೇತ್ರದ ಶಾಸಕರನ್ನು ಸಂಪರ್ಕಿಸಿ. ಅವರ ನೇತೃತ್ವದಲ್ಲಿಯೇ ಸಮಿತಿ ರಚಿಸಲಾಗಿದೆ. ಅಲ್ಲಿಯೇ ಸಮಸ್ಯೆ ಇತ್ಯರ್ಥವಾಗುತ್ತದೆ.

********

ಸ್ಮಶಾನ ಒತ್ತುವರಿ ಮಾಡಿದರೆ ಕಠಿಣ ಕ್ರಮ

* ಚಿಂತಾಮಣಿ ತಾಲ್ಲೂಕಿನ ಕೈವಾರ ಪಂಚಾಯಿತಿಯ ಬನಹಳ್ಳಿ ಗ್ರಾಮದಲ್ಲಿ ಸ್ಮಶಾನ ಭೂಮಿಯನ್ನು ಕೆಲವು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ.

- ಆನಂದ ಕೈವಾರ, ಚಿಂತಾಮಣಿ

ಅಶೋಕ: ಗ್ರಾಮಕ್ಕೊಂದು ಸ್ಮಶಾನ ಇರಲೇಬೇಕು. ಸ್ಮಶಾನ, ಗೋಮಾಳದಂತಹ ಜಾಗವನ್ನು ಒತ್ತುವರಿ ಮಾಡಿಕೊಂಡಿರುವವರು ಎಂಥ ಪ್ರಭಾವಿಗಳಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನೇರವಾಗಿ ನನಗೇ ದೂರು ನೀಡಬಹುದು.

********

ಮಾಜಿ ಯೋಧರಿಗೆ ನಿವೇಶನ

* ಮಾಜಿ ಸೈನಿಕರಿಗೆ ಸರ್ಕಾರದಿಂದ ಜಮೀನು ಕೊಡಬೇಕು ಎಂದು ಆದೇಶ ಇದೆ. ಆದರೆ, ಜಿಲ್ಲಾಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ.

- ವಿಜಯಕುಮಾರ್, ವಿಜಯಪುರ

ಅಶೋಕ: ಮಾಜಿ ಯೋಧರಿಗೆ ಜಮೀನು ಕೊಡುವ ಬಗ್ಗೆ ಆದೇಶವಿದೆ. ಆದರೆ, ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಅವು ಇತ್ಯರ್ಥವಾಗಬೇಕು. ಅಲ್ಲದೆ, ಅರ್ಜಿ ಹಾಕಿದವರಿಗೆಲ್ಲ ಮೊದಲು ಜಮೀನು ಕೊಡಲಾಗುತ್ತಿತ್ತು. ಈಗ ಸರ್ಕಾರಿ ಜಮೀನು ಕೂಡ ಹೆಚ್ಚು ಲಭ್ಯವಿಲ್ಲ. ಜಮೀನು ಕೊಡಲು ಆಗದಿದ್ದರೆ ನಿವೇಶನವಾದರೂ ನೀಡಬೇಕು ಎಂಬ ಚಿಂತನೆ ಇದೆ. ಯುದ್ಧದಲ್ಲಿ ಮರಣ ಹೊಂದಿರುವ ಸೈನಿಕರ ಕುಟುಂಬದವರಿಗೆ, ಗಾಯಗೊಂಡ ಯೋಧರಿಗೆ ಆದ್ಯತೆ ಮೇರೆಗೆ ನಿವೇಶನ ನೀಡಲಾಗುವುದು.

********

ಹಕ್ಕಿ–ಪಿಕ್ಕಿ ಹಾಡಿಗಳಿಗೆ ‘ಗ್ರಾಮ ಸೌಲಭ್ಯ’

ಹಕ್ಕಿ–ಪಿಕ್ಕಿ ಮತ್ತು ಕುರುಬ ಸಮುದಾಯದವರು ವಾಸವಿರುವ ಹಾಡಿಗಳನ್ನು ಗ್ರಾಮಗಳು ಎಂದು ಘೋಷಿಸುವ ಪ್ರಕ್ರಿಯೆ ನಡೆಯುತ್ತಿದೆ. ಇವುಗಳನ್ನು ಗ್ರಾಮಗಳಾಗಿ ಪರಿವರ್ತಿಸಲು ಆದೇಶವನ್ನೂ ಮಾಡಲಾಗಿದೆ. ಹಾಡಿಗಳಿಗೆ ಗ್ರಾಮದ ಸ್ವರೂಪ ನೀಡಿದರೆ, ಎಲ್ಲ ಮೂಲಸೌಲಭ್ಯ ದೊರೆಯಲಿದೆ ಎಂದು ಅಶೋಕ ಹೇಳಿದರು.

********

ಪ್ರಸ್ತಾವ ಸಲ್ಲಿಸಿದರೆ ಸ್ವಂತ ಕಟ್ಟಡ

‘ರಾಜ್ಯದಲ್ಲಿ ಉಪ ನೋಂದಣಾಧಿಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿಯೇ ಹೆಚ್ಚಿವೆ. ಇವು ಇಕ್ಕಟ್ಟಾಗಿದ್ದು ಜನರಿಗೂ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಉಪನೋಂದಣಾಧಿಕಾರಿಗಳು ಈ ಬಗ್ಗೆ ಪ್ರಸ್ತಾವ ಸಲ್ಲಿಸಿದರೆ, ಸ್ವಂತ ಕಟ್ಟಡ ಒದಗಿಸುವ ವ್ಯವಸ್ಥೆ ಮಾಡಲಾಗುವುದು’ ಎಂದು ಸಚಿವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.