ಬೆಂಗಳೂರು: ರಾಜ್ಯದಲ್ಲಿರುವ ದಾಖಲೆರಹಿತ ಜನವಸತಿಗಳನ್ನು ಹೊಸ ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಸಿದ್ದರಾಮಯ್ಯ ನೇತೃತ್ವದ ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನ ಆಮೆಗತಿಯಲ್ಲಿ ಸಾಗಿದೆ.
ರಾಜ್ಯ 27 ಜಿಲ್ಲೆಗಳಲ್ಲಿ 2,742 ದಾಖಲೆರಹಿತ ಜನವಸತಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ, ಕೇವಲ 633 ಜನವಸತಿಗಳನ್ನು ಮಾತ್ರ ಈವರೆಗೆ ಹೊಸ ಕಂದಾಯ ಗ್ರಾಮಗಳಾಗಿ ರಚಿಸಿ ಗೆಜೆಟ್ ಹೊರಡಿಸಲಾಗಿದೆ. 67 ಗ್ರಾಮಗಳಿಗೆ ಸಂಬಂಧಿಸಿ ಗೆಜೆಟ್ ಹೊರಡಿಸಲು ಸಿದ್ಧತೆ ನಡೆದಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.
‘ಕಂದಾಯ ಗ್ರಾಮ ಭಾಗ್ಯ’ ದಕ್ಕದ ಕಾರಣಕ್ಕೆ ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕರಹಟ್ಟಿ, ಮಜರೆ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್, ಕಾಲೊನಿ ಮತ್ತು ಇತರೆ ಪ್ರದೇಶ ನಿವಾಸಿಗಳಿಗೆ ಹಕ್ಕು ದಾಖಲೆಗಳನ್ನು ನೀಡುವ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಅಲ್ಲದೆ, ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ದಾಖಲೆಗಳನ್ನು ಪರಿಷ್ಕರಿಸಿ ಕಾರ್ಯ ಕೂಡಾ ಸ್ಥಗಿತಗೊಂಡಿದೆ.
ದಾಖಲೆರಹಿತ ಜನವಸತಿಗಳು ತುಮಕೂರು ಜಿಲ್ಲೆಯಲ್ಲಿ (509) ಅತಿಹೆಚ್ಚು ಇವೆ. ನಂತರದ ಸ್ಥಾನದಲ್ಲಿ ಚಿತ್ರದುರ್ಗ (277) ಮತ್ತು ಚಿಕ್ಕಬಳ್ಳಾಪುರ (204) ಇದೆ. ದಕ್ಷಿಣಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ದಾಖಲೆರಹಿತ ಜನವಸತಿಗಳು ಇಲ್ಲ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.
ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಯೋಜನೆ ವಿಧಾನಸಭಾ ಚುನಾವಣೆ, ಇದೀಗ ಉಪ ಚುನಾವಣೆ ಮತ್ತಿತರ ಕಾರಣಗಳಿಗೆ ಸ್ಥಗಿತಗೊಂಡಿದೆ. ಅದರಲ್ಲೂ ಯೋಜನೆ ಜಾರಿ ಉತ್ತರ ಕರ್ನಾಟಕ ಭಾಗದಲ್ಲಿ ಬಳ ನಿಧಾನವಾಗಿದೆ. ಜಿಲ್ಲಾಧಿಕಾರಿಗಳ ಬೆನ್ನು ಬಿದ್ದರೂ ಯೋಜನೆ ಅನುಷ್ಠಾನ ತ್ವರಿತಗೊಂಡಿಲ್ಲ. ಈ ಬಗ್ಗೆ, ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮತ್ತೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ದಾಖಲೆರಹಿತ ಜನವಸತಿ ಪ್ರದೇಶಗಳಲ್ಲಿ ನೆಲೆಸಿರುವ ಬಡವರು, ಅಲೆಮಾರಿಗಳನ್ನು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷ ಣಿಕವಾಗಿ ಅತ್ಯಂತ ಹಿಂದುಳಿದ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರ 2016ರ ಮಾರ್ಚ್‌ನಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿತ್ತು. ಆ ಮೂಲಕ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿ ಮಾಡುವ ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಈ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ತಲುಪಿಸುವು ಉದ್ದೇಶವಾಗಿತ್ತು.ತಹಶೀಲ್ದಾರ್, ಉಪ ಆಯುಕ್ತರು, ಭೂ ದಾಖಲೆಗಳ ಉಪ ನಿರ್ದೇಶಕರು (ಡಿಡಿಎಲ್‌ಆರ್) ಜಂಟಿ ಸರ್ವೆ ಹಾಗೂ ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿ ಪರಿಶೀಲಿಸಿ ದಾಖಲೆ ರಹಿತ ಜನವಸತಿಗಳನ್ನು ಗುರುತಿಸಲಾಗಿದೆ.
* ಯೋಜನೆ ಅನುಷ್ಠಾನ ತ್ವರಿತಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತೆ ನೆನಪಿನ ಓಲೆ ಕಳುಹಿಸಲಾಗಿದೆ. ವಿಡಿಯೋ ಸಂವಾದದಲ್ಲೂ ನಿರ್ದೇಶನ ನೀಡಲಾಗಿದೆ
–ರಾಜ್‌ಕುಮಾರ್ ಖತ್ರಿ, ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ
2,742
ದಾಖಲೆರಹಿತ ಜನವಸತಿಗಳ ಸಂಖ್ಯೆ
2,358
ಪ್ರಾಥಮಿಕ ಅಧಿಸೂಚನೆಗೆ ನಿಗದಿಪಡಿರುವುದು ಪ್ರಸ್ತಾವನೆ
384
ಜಿಲ್ಲಾಧಿಕಾರಿಗಳ ಬಳಿ ಬಾಕಿ ಇರುವ ಪ್ರಸ್ತಾವನೆ
1,410
ಈವರೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವುದು
700
ಅಂತಿಮ ಅಧಿಸೂಚನೆ ಹೊರಡಿಸಿರುವುದು
ರಾಜ್ಯದಲ್ಲಿರುವ ದಾಖಲೆರಹಿತ ಜನವಸತಿಗಳ ಚಿತ್ರಣ
ಜಿಲ್ಲೆ; ದಾಖಲೆರಹಿತ ಜನವಸತಿ; ‘ಕಂದಾಯ ಗ್ರಾಮ’ವಾಗಿ ಗೆಜೆಟ್ ಪ್ರಕಟ
ಬೆಂಗಳೂರು (ನ); 29; 0
ಬೆಂಗಳೂರು (ಗ್ರಾ); 61; 32
ಚಿಕ್ಕಬಳ್ಳಾಪುರ; 204; 98
ಚಿತ್ರದುರ್ಗ; 277; 89
ದಾವಣಗೆರೆ; 165; 42
ಕೋಲಾರ; 72; 57
ಶಿವಮೊಗ್ಗ; 35; 18
ತುಮಕೂರು; 509; 56
ರಾಮನಗರ; 47; 8
ಮೈಸೂರು; 112; 18
ಚಾಮರಾಜನಗರ; 64; 20
ಚಿಕ್ಕಮಗಳೂರು; 20; 0
ದಕ್ಷಿಣ ಕನ್ನಡ; 0; 0
ಹಾಸನ; 33; 0
ಕೊಡಗು; 3; 0
ಮಂಡ್ಯ; 77; 17
ಉಡುಪಿ; 8; 0
ಬೆಳಗಾವಿ; 157; 74
ವಿಜಯಪುರ; 161; 14
ಬಾಗಲಕೋಟೆ; 21; 0
ಧಾರವಾಡ; 18; 8
ಗದಗ; 31; 11
ಹಾವೇರಿ; 30; 6
ಉತ್ತರ ಕನ್ನಡ; 2; 2
ಕಲಬುರ್ಗಿ; 151; 0
ಬೀದರ್; 97; 12
ಬಳ್ಳಾರಿ; 157; 49
ರಾಯಚೂರು; 87; 0
ಕೊಪ್ಪಳ; 32; 2
ಯಾದಗಿರಿ; 93; 0
ಒಟ್ಟು; 2,742; 633
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.