ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಎಚ್‌ಎಸ್) 23ನೇ ವಾರ್ಷಿಕ ಘಟಿಕೋತ್ಸವವು ಭಾನುವಾರ (ಫೆ.7) ಬೆಳಿಗ್ಗೆ 10 ಗಂಟೆಗೆ ನಿಮ್ಹಾನ್ಸ್ ಸಮಾವೇಶ ಕೇಂದ್ರದಲ್ಲಿ ನಡೆಯಲಿದೆ. ವಿವಿಧ ವಿಭಾಗಗಳಲ್ಲಿ 122 ಚಿನ್ನದ ಪದಕ ಹಾಗೂ 8 ನಗದು ಬಹುಮಾನಗಳಿಗೆಈ ಬಾರಿ ಒಟ್ಟು 111 ವಿದ್ಯಾರ್ಥಿಗಳು ಭಾಜನರಾಗಿದ್ದಾರೆ.
ಇಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್. ಸಚ್ಚಿದಾನಂದ ಅವರು ಮಾತನಾಡಿ, ‘ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ರಾಜ್ಯಪಾಲ ಹಾಗೂ ವಿವಿ ಕುಲಾಧಿಪತಿ ವಜುಭಾಯ್ ವಾಲಾ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ಉಪಸ್ಥಿತರಿರಲಿದ್ದಾರೆ. ಆರೋಗ್ಯ ವಿಜ್ಞಾನಗಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಅಲಂಗಾರ್ ಸತ್ಯರಂಜನ್ ದಾಸ್ ಹೆಗ್ಡೆ ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಗೌರವ ಪದವಿ ಪ್ರದಾನ ಮಾಡಲಾಗುವುದು’ ಎಂದು ತಿಳಿಸಿದರು.
‘ವಿವಿಧ ವಿಷಯಗಳಲ್ಲಿ 33,629 ಅಭ್ಯರ್ಥಿಗಳು ಈ ಬಾರಿ ಪದವಿ ಪಡೆಯಲು ಅರ್ಹರಾಗಿದ್ದಾರೆ. 30 ಪಿಎಚ್.ಡಿ, 115 ಸೂಪರ್ ಸ್ಪೆಷಾಲಿಟಿ, 5,824 ಸ್ನಾತಕೋತ್ತರ ಪದವಿ, 351 ಸ್ನಾತಕೋತ್ತರ ಡಿಪ್ಲೊಮಾ ಪದವಿ, 79 ಫೆಲೋಷಿಪ್ ಕೋರ್ಸ್, 9 ಸರ್ಟಿಫಿಕೇಟ್ ಕೋರ್ಸ್ ಹಾಗೂ 27,221 ಸ್ನಾತಕ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ವಿವಿಯ ಎಲ್ಲ ವಿಭಾಗಗಳ ಒಟ್ಟಾರೆ ಫಲಿತಾಂಶ ಈ ಬಾರಿ ಶೇ 82 ರಷ್ಟಿದೆ’ ಎಂದು ವಿವರಿಸಿದರು.
ಸೀಮಿತ ಮಂದಿಗೆ ಅವಕಾಶ: ‘ಕೋವಿಡ್ ಕಾರಣ ಆಹ್ವಾನಿತ ಗಣ್ಯರು, ಚಿನ್ನದ ಪದಕ ಹಾಗೂ ನಗದು ಬಹುಮಾನ ವಿಜೇತರು ಮತ್ತು ಪಿಎಚ್.ಡಿ ಪಡೆಯುವವರಿಗೆ ಮಾತ್ರ ಸಭಾಂಗಣದಲ್ಲಿ ನಡೆಯುವ ಘಟಿಕೋತ್ಸವ ಸಮಾರಂಭಕ್ಕೆ ಪ್ರವೇಶ ನೀಡಲಾಗುತ್ತದೆ. ಕೊರೊನಾ ಸೋಂಕು ತಗುಲಿರದ ಬಗ್ಗೆ ಆರ್‌ಟಿ–ಪಿಸಿಆರ್ ಪರೀಕ್ಷಾ ವರದಿಯನ್ನು ಹೊಂದಿರಬೇಕು. ಉಳಿದವರು ಆನ್‌ಲೈನ್ ಮೂಲಕ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ. ವಿದ್ಯಾರ್ಥಿಗಳಿಗೆ ಪ್ರದಾನ ಮಾಡುವ ಚಿನ್ನದ ಪದಕಗಳು 22 ಕ್ಯಾರೆಟ್ ಬಂಗಾರವಾಗಿದ್ದು, ತಲಾ 5 ಗ್ರಾಂ ತೂಕವನ್ನು ಹೊಂದಿರುತ್ತವೆ’ ಎಂದು ತಿಳಿಸಿದರು.
ಮೂರು ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ
‘ವಿಶ್ವವಿದ್ಯಾಲಯದಿಂದ ಚಿಕ್ಕಬಳ್ಳಾಪುರದಲ್ಲಿ ಮೂರು ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗುತ್ತದೆ. ಪ್ರತಿ ಕೇಂದ್ರಕ್ಕೆ ₹ 8.9 ಕೋಟಿ ವೆಚ್ಚವಾಗಲಿದೆ. ಪದವಿ ಪಡೆದು ಹೊರಬರುವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆಗೆ ಈ ಪ್ರಾಥಮಿಕ ಆರೋಗ್ಯ ಕೇಂದ್ರಗಳು ನೆರವಾಗಲಿವೆ. ಅಲ್ಲಿ ವಸತಿ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳು ಇರಲಿವೆ. ಮುಂದಿನ ದಿನಗಳಲ್ಲಿ ಬೇರೆ ಕಡೆ ಕೂಡ ನಿರ್ಮಿಸಲಾಗುವುದು’ ಎಂದು ಡಾ.ಎಸ್. ಸಚ್ಚಿದಾನಂದ ವಿವರಿಸಿದರು.
‘ಜೀವರಕ್ಷಾ ಟ್ರಸ್ಟ್ ಅಡಿಯಲ್ಲಿ ಹೃದಯಾಘಾತ, ಅಪಘಾತ ಸೇರಿದಂತೆ ವಿವಿಧ ತುರ್ತು ಚಿಕಿತ್ಸೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲ ಪೊಲೀಸ್ ಸಿಬ್ಬಂದಿ, ಆಟೋ ರಿಕ್ಷಾ ಚಾಲಕರು, ಸಾರಿಗೆ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರ ನಡುವೆ ಇರುವವರಿಗೆ ಈ ಬಗ್ಗೆ ತರಬೇತಿ ನೀಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.