ಬಿಜೆಪಿದಯವಿಟ್ಟು ಪಠ್ಯವನ್ನು ಒದಗಿಸಿ.ರಾಜ್ಯ ಘಟಕದಲ್ಲಿ ‘ಒಡಕಿ’ನ ಧ್ವನಿ ಮತ್ತೆ ಭುಗಿಲೆದ್ದಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಬಣ, ಮುನ್ನಡೆಸುತ್ತಿರುವ ವಕ್ಫ್ ವಿರುದ್ಧದ ಹೋರಾಟ ಎರಡನೇ ದಿನಕ್ಕೆ ಕಾಲಿಡುತ್ತಿದ್ದಂತೆಯೇ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದಲ್ಲಿ ಬಿರುಕಿರುವುದನ್ನು ಒಪ್ಪಿಕೊಂಡಿದ್ದಾರೆ. ತಮ್ಮ ಬಣದವರೇ ಮುಂದಿನ ಮುಖ್ಯಮಂತ್ರಿ ಎಂದು ಯತ್ನಾಳ ಹೇಳಿದ್ದಾರೆ.
ದಾವಣಗೆರೆ: ‘ಬಿಜೆಪಿಯಲ್ಲಿ ಒಡಕು ಇರುವುದು ನಿಜ. ಕೆಲವರು ಒಡಕು ಸೃಷ್ಟಿಸುತ್ತಿರುವ ವಿಚಾರ ಕೇಂದ್ರದ ನಾಯಕರ ಗಮನಕ್ಕೆ ಬಂದಿದೆ. ಕೆಲವೇ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಪಕ್ಷ ಸಂಘಟನೆಗೆ ಶ್ರಮಿಸುತ್ತೇವೆ’ ಎಂದು ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ಪಕ್ಷದ ಹಿತದೃಷ್ಟಿಯಿಂದ ಚರ್ಚೆ ಮಾಡೋಣ. ಸಮಸ್ಯೆಯಿದ್ದರೆ ಸರಿಪಡಿಸಿಕೊಂಡು ಮುಂದೆ ಸಾಗೋಣ. ಪಕ್ಷ ಬಲಪಡಿಸುವ ಕೆಲಸ ಮಾಡೋಣ ಬನ್ನಿ ಎಂದು ಭಿನ್ನಾಭಿಪ್ರಾಯ ಇರುವವರಲ್ಲಿ ಮನವಿ ಮಾಡುತ್ತೇನೆ’ ಎಂದರು.
ಯತ್ನಾಳ ಸ್ವ ಪ್ರತಿಷ್ಠೆ: ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ಯತ್ನಾಳ ಅವರು ಸ್ವಪ್ರತಿಷ್ಠೆಯಿಂದ ಹೋರಾಟ ಮಾಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ. ಪ್ರತ್ಯೇಕ ಹೋರಾಟ ನಡೆಸುವುದನ್ನು ಕೈಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಿದರೆ ಪಕ್ಷವು ಬಲಗೊಳ್ಳುತ್ತದೆ’ ಎಂದರು.
‘ಉಪಚುನಾವಣೆಗಳಲ್ಲಿ ಈ ರೀತಿ ಹಿನ್ನಡೆ ಆಗಬಹುದು ಎಂಬುದನ್ನು ಊಹಿಸಿರಲಿಲ್ಲ. ಎಲ್ಲಿ ಕೊರತೆ ಆಗಿದೆ ಎಂಬುದನ್ನು ಎಲ್ಲರೂ ಕುಳಿತು ಚರ್ಚೆ ಮಾಡು ತ್ತೇವೆ. ಈ ಸೋಲಿಗೆ ವಿಜಯೇಂದ್ರ ಕಾರಣ ಅನ್ನೋ ಪ್ರಶ್ನೆ ಬರುವುದಿಲ್ಲ’ ಎಂದರು
ಕಲಬುರಗಿ: ‘ರಾಜ್ಯದ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ಜನರು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದು, ನಮ್ಮ ತಂಡದವರೇ ಮುಖ್ಯಮಂತ್ರಿಯಾಗಲಿದ್ದಾರೆ. ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಅಧಿಕಾರ ನಮಗೇ ಸಿಗಲಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಕ್ಫ್ ಮಂಡಳಿ ವಿರುದ್ಧ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ‘ನಮ್ಮ ಹೋರಾಟವು ವಕ್ಫ್ ನ್ಯಾಯಮಂಡಳಿ ರದ್ದುಗೊಳ್ಳುವವರೆಗೂ ಮುಂದುವರಿಯಲಿದೆ. ಬಿಜೆಪಿಯ ಕೆಲ ಶಾಸಕರು, ಅಧ್ಯಕ್ಷರು ಈ ಹೋರಾಟದಿಂದ ದೂರವಿರಬಹುದು. ಅದಕ್ಕೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದರು.
‘ಬೆಂಗಳೂರಿನಲ್ಲಿ ಕುಳಿತಿರುವವರಿಗೆ (ಯಡಿಯೂರಪ್ಪ, ವಿಜಯೇಂದ್ರ) ಹೆದರಿ ಬಿಜೆಪಿಯ ಕೆಲ ಮುಖಂಡರು ನಮ್ಮ ಹೋರಾಟಕ್ಕೆ ಬಂದಿಲ್ಲ. ದೊಡ್ಡ ಮಠಗಳ ಸ್ವಾಮಿಗಳೂ ಬಂದಿಲ್ಲ. ಅವರು ತಮ್ಮ ಶಿಕ್ಷಣ ಸಂಸ್ಥೆಗಳ ಫೈಲ್‌ಗೆ ಅನುಮೋದನೆ ಮಾಡಿಸಿಕೊಳ್ಳಲು ಮುಖ್ಯಮಂತ್ರಿ ಚೇಂಬರ್‌ನಲ್ಲಿ ಕುಳಿತಿರುತ್ತಾರೆ’ ಎಂದು ವ್ಯಂಗ್ಯವಾಡಿದರು.
ಜಿ.ಎಂ. ಸಿದ್ದೇಶ್ವರ, ರಮೇಶ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ರಾಜಕುಮಾರ ಪಾಟೀಲ ತೇಲ್ಕೂರ ಭಾಗವಹಿಸಿದ್ದರು.
ಬೆಂಗಳೂರು: ಬೆಳಗಾವಿಯ ವಿಧಾನಮಂಡಲ ಅಧಿವೇಶನಕ್ಕೂ ಮೊದಲೇ (ಡಿ.9) ಭಿನ್ನಮತೀಯರ ವಿರುದ್ಧ ಕ್ರಮ ತೆಗೆದುಕೊಳ್ಳಲು ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಬೇಕು ಎಂದು ಬಿಜೆಪಿಯ ಸಂಘಟನಾ ಪರ್ವ ಸಭೆಯಲ್ಲಿ ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರು ಒತ್ತಾಯಿಸಿದರು.
ಪಕ್ಷದ ಸಂಘಟನೆಯ ಉದ್ದೇಶದಿಂದ ಕರೆಯಲಾಗಿದ್ದ ಈ ಸಭೆಯಲ್ಲಿ, ಯತ್ನಾಳ ಅವರ ನೇತೃತ್ವದಲ್ಲಿ ನಡೆಯುತ್ತಿರುವ ವಕ್ಫ್ ವಿರುದ್ಧದ ಹೋರಾಟದ ಬಗ್ಗೆ ಆಕ್ಷೇಪ ವ್ಯಕ್ತವಾಯಿತು.
‘ಹೋರಾಟಗಳನ್ನು ಪಕ್ಷದ ವತಿಯಿಂದಲೇ ನಡೆಸಬೇಕು. ಪರ್ಯಾಯವಾಗಿ ನಡೆಸುವುದರಿಂದ ಪಕ್ಷಕ್ಕೆ ಹಿನ್ನಡೆ ಆಗುತ್ತದೆ’ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಬೀದರ್ ಜಿಲ್ಲಾ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹೇಳಿದರು. ಇದಕ್ಕೆ ಇತರ ಜಿಲ್ಲೆಗಳ ಜಿಲ್ಲಾಧ್ಯಕ್ಷರೂ ಧ್ವನಿಗೂಡಿಸಿದರು ಎಂದು ಸಭೆಯಲ್ಲಿದ್ದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.