ADVERTISEMENT

ಆರ್‌ಟಿಇ | 18 ವರ್ಷದವರೆಗೂ ವಿಸ್ತರಿಸಲು ಚರ್ಚೆ: ರಿತೇಶ್‌ಕುಮಾರ್ ಸಿಂಗ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 16:05 IST
Last Updated 25 ನವೆಂಬರ್ 2024, 16:05 IST
<div class="paragraphs"><p>ವಿಧಾನಸೌಧದಲ್ಲಿ&nbsp;ಸೋಮವಾರ ಆಯೋಜಿಸಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂಸತ್‌ನಲ್ಲಿ ಯಾದಗಿರಿಯ ವಿದ್ಯಾರ್ಥಿ ಸಣ್ಣವೀರ ಮಾತನಾಡಿದರು.&nbsp;&nbsp;</p></div>

ವಿಧಾನಸೌಧದಲ್ಲಿ ಸೋಮವಾರ ಆಯೋಜಿಸಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂಸತ್‌ನಲ್ಲಿ ಯಾದಗಿರಿಯ ವಿದ್ಯಾರ್ಥಿ ಸಣ್ಣವೀರ ಮಾತನಾಡಿದರು.  

   

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ 14 ವರ್ಷದವರೆಗಿನ ಮಕ್ಕಳಿಗೆ ನೀಡಲಾಗುತ್ತಿರುವ ಉಚಿತ ಶಿಕ್ಷಣವನ್ನು ಅಮೆರಿಕ ಮಾದರಿಯಲ್ಲಿ 18 ವರ್ಷಗಳವರೆಗೂ ವಿಸ್ತರಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ಕುಮಾರ್‌ ಸಿಂಗ್‌ ಹೇಳಿದರು.

ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ವಿಧಾನಸೌಧದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂಸತ್‌ನಲ್ಲಿ ವಿದ್ಯಾರ್ಥಿನಿ ಹಾಸನದ ಪೂರ್ವಿಕಾ ಅವರ ಪ್ರಶ್ನೆಗೆ ಅವರು ಉತ್ತರಿಸಿದರು.

ADVERTISEMENT

ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ವಿದ್ಯಾರ್ಥಿನಿಯರಿಗೆ ಈಗಾಗಲೇ ಪಿಯುವರೆಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಎಲ್ಲರಿಗೂ 18 ವರ್ಷದವರೆಗೆ ವಿಸ್ತರಿಸುವ ಕುರಿತು ಮುಖ್ಯಮಂತ್ರಿ, ಶಿಕ್ಷಣ ಸಚಿವರ ಗಮನಕ್ಕೆ ತರಲಾಗುವುದು ಎಂದರು.

ಶಿಕ್ಷಕರ ಕೊರತೆ ನೀಗಿಸಲು ಸರ್ಕಾರ ಹಂತಹಂತವಾಗಿ ಕ್ರಮ ಕೈಗೊಂಡಿದೆ. ಕಳೆದ ವರ್ಷ 13 ಸಾವಿರ ಶಿಕ್ಷಕರ ನೇಮಕ ಮಾಡಿಕೊಂಡಿದೆ. 50 ಸಾವಿರ ಅತಿಥಿ ಶಿಕ್ಷಕರ ಸೇವೆ ಪಡೆಯಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿನ ಶಿಕ್ಷಕರ ಕೊರತೆ ನೀಗಿಸಲು 5,300 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಯಾದಗಿರಿಯ ವಿದ್ಯಾರ್ಥಿ ಸಣ್ಣವೀರ ಅವರ ಸಲಹೆಯಂತೆ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್‌ ಭಾಷಾ ಶಿಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳಲು ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಮಕ್ಕಳ ಮೇಲಿನ ದೌರ್ಜನ್ಯ, ರಕ್ಷಣೆ, ಮೊಬೈಲ್‌ ಗೀಳು, ಶಾಲಾ ಶೌಚಾಲಯ ಸ್ವಚ್ಛತೆ, ಖಾಸಗಿ ಶಾಲೆಗಳಿಗೂ ಮೊಟ್ಟೆ ವಿತರಣೆ, ಶುದ್ಧ ಕುಡಿಯುವ ನೀರು, ಅಂಗವಿಕಲರ ಬವಣೆ ಮೊದಲಾದ ಸಮಸ್ಯೆ, ಸೌಲಭ್ಯ ಒದಗಿಸುವ ಕುರಿತು ಮಕ್ಕಳು ಬೇಡಿಕೆ ಮಂಡಿಸಿದರು. ಹಲವು ಪ್ರಶ್ನೆಗಳನ್ನು ಕೇಳಿ, ಉತ್ತರ ಪಡೆದರು. 

ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸಂಚಾಲಕ ವಾಸುದೇವ್ ಶರ್ಮಾ ಎನ್.ವಿ ಪ್ರಸ್ತಾವಿಕ ಮಾತನಾಡಿದರು. ಯೂನಿಸೆಫ್‌ನ ಮಕ್ಕಳ ರಕ್ಷಣಾ ತಜ್ಞ ಸೋನಿಕುಟ್ಟಿ ಜಾರ್ಜ್‌, ವಕೀಲರಾದ ಅಂಜಲಿ ರಾಮಣ್ಣ, ಸಿವಿಕ್‌ ಬೆಂಗಳೂರು ಸಂಸ್ಥೆಯ ಕಾರ್ಯದರ್ಶಿ ಕಾತ್ಯಾಯಿನಿ ಚಾಮರಾಜ್ ಉಪಸ್ಥಿತರಿದ್ದರು.

‘ತಂದೆಯ ಹೆಸರು ನಮೂದು ಐಚ್ಚಿಕವಾಗಲಿ‘

ಶಾಲಾ ಕಾಲೇಜು ಪ್ರವೇಶ ನೇಮಕಾತಿ ಸೇರಿದಂತೆ ಎಲ್ಲ ಅರ್ಜಿಗಳಲ್ಲೂ ತಾಯಿಯ ಹೆಸರು ನಮೂದಿಸುವುದನ್ನು ಕಡ್ಡಾಯಗೊಳಿಸಿ ತಂದೆಯ ಹೆಸರು ಐಚ್ಚಿಕ ಮಾಡಬೇಕು. ಇದರಿಂದ ದೇವದಾಸಿಯ ಮಕ್ಕಳೂ ಸೇರಿದಂತೆ ಹಲವರಿಗೆ ಅನುಕೂಲವಾಗುತ್ತದೆ ಎಂದು ವಿಜಯನಗರದ ಇಂದೂ ಮನವಿ ಮಾಡಿದರು. ‘ತಂದೆ ಹೆಸರು ಬರೆಯುವುದು ಕಡ್ಡಾಯವೇನಲ್ಲ ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರ ಹೆಸರು ನಮೂದಿಸಿದರೂ ಸಾಕು. ಕೆಲವು ಕಡೆ ಅಂತಹ ಸಮಸ್ಯೆ ಇದ್ದರೆ ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ರಿತೇಶ್‌ ಕುಮಾರ್ ಭರವಸೆ ನೀಡಿದರು.  

ಸಿ.ಎಂ.ಗೆ ಕಾದು ಬೇಸರಗೊಂಡ ಮಕ್ಕಳು ಮಕ್ಕಳ ಹಕ್ಕುಗಳ ಸಂಸತ್‌ನಲ್ಲಿ ಮುಖ್ಯಮಂತ್ರಿ ಜತೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಕ್ಕಳು ಒಂದು ಗಂಟೆ ಮೊದಲೇ ಬಂದು ಕಾಯುತ್ತಿದ್ದರು. ಆದರೆ ಸಿದ್ದರಾಮಯ್ಯ ಬರಲೇ ಇಲ್ಲ. ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕಾರ್ಯಕ್ರಮ ನಡೆಸಿಕೊಟ್ಟರು. ಮುಖ್ಯಮಂತ್ರಿ ಜತೆ ಸಂವಾದ ಸಾಧ್ಯವಾಗದಕ್ಕೆ ಮಕ್ಕಳು ಬೇಸರ ವ್ಯಕ್ತಪಡಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.