ADVERTISEMENT

ವಿಧಾನಸೌಧಕ್ಕೆ ಕಾರು ಬೇಕೆಂದು ₹45 ಲಕ್ಷ ವಂಚನೆ

ಆರ್‌.ಎಂ.ಸಿ ಯಾರ್ಡ್‌ ಠಾಣೆಯಲ್ಲಿ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2019, 19:53 IST
Last Updated 22 ಫೆಬ್ರುವರಿ 2019, 19:53 IST
   

ಬೆಂಗಳೂರು: ‘ವಿಧಾನಸೌಧ ಅಧಿಕಾರಿಗಳ ಬಳಕೆಗೆ ಬಾಡಿಗೆ ರೂಪದಲ್ಲಿ ಕಾರುಗಳನ್ನು ಜೋಡಿಸಿದರೆ (ಅಟ್ಯಾಚ್‌) ಪ್ರತಿ ತಿಂಗಳು ಸಾವಿರಾರು ರೂಪಾಯಿ ಗಳಿಸಬಹುದು’ ಎಂದು ಆಮಿಷವೊಡ್ಡಿದ್ದ ವಂಚಕರ ಜಾಲ, 15 ಜನರಿಂದ ₹45 ಲಕ್ಷ ಪಡೆದುಕೊಂಡು ವಂಚಿಸಿದೆ.

ವಂಚನೆಗೀಡಾಗಿರುವ ಬಿ.ಜೆ.ರಾಜಪ್ಪ ಎಂಬುವರು ಹೂಡಿದ್ದ ಖಾಸಗಿ ಮೊಕದ್ದಮೆಯ ವಿಚಾರಣೆ ನಡೆಸಿ ನ್ಯಾಯಾಲಯ ನೀಡಿದ್ದ ಆದೇಶದನ್ವಯ ಆರ್‌.ಎಂ.ಸಿ ಯಾರ್ಡ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಆಡಳಿತ ಮತ್ತು ಸಿಬ್ಬಂದಿ ನಿರ್ವಹಣಾ ಇಲಾಖೆಯ ನೌಕರ ಎನ್ನಲಾದ ಸಂಪತ್, ಪೀಣ್ಯದ ಕೃಷ್ಣ ಹಾಗೂ ನಾಗಮಂಗಲದ ಇ.ಎಚ್.ಮಂಜುನಾಥ್ ಎಂಬುವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.

ದೂರಿನ ವಿವರ: ‘ನಾನು ಬಾಡಿಗೆ ಇದ್ದ ಮನೆಯ ಮಾಲೀಕನ ಮಗ ಕೃಷ್ಣ, ‘₹3 ಲಕ್ಷ ಕೊಟ್ಟು ಇನ್ನೋವಾ ಕಾರು ಖರೀದಿಸಿ ವಿಧಾನಸೌಧದ ಅಧಿಕಾರಿಗಳ ಬಳಕೆಗೆ ಅಟ್ಯಾಚ್‌ ಮಾಡಿಸಿದರೆಪ್ರತಿ ತಿಂಗಳು ₹34 ಸಾವಿರ ಬಾಡಿಗೆ ಕೊಡುತ್ತಾರೆ’ ಎಂದಿದ್ದ. ಅದನ್ನು ನಂಬಿ, ಇನ್ನೋವಾ ಕಾರಿಗೆ ಪ್ರತಿ ತಿಂಗಳು ₹40 ಸಾವಿರ ಹಾಗೂ ಟಾಟಾ ಇಂಡಿಕಾ ಕಾರಿಗೆ ₹25 ಸಾವಿರ ಬಾಡಿಗೆ ನೀಡುವಂತೆ ಒಪ್ಪಂದ ಮಾಡಿಕೊಂಡು ಎರಡು ಕಾರುಗಳನ್ನು 2017ರ ಅಗಸ್ಟ್‌ನಲ್ಲಿ ಆತನಿಗೆ ಕೊಟ್ಟಿದ್ದೆ’ ಎಂದು ರಾಜಪ್ಪ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಅದಾಗಿ ಕೆಲವು ದಿನಗಳ ನಂತರ ಆರೋಪಿ ಕೃಷ್ಣ, ಸಂಪತ್ ಹಾಗೂ ಇ.ಎಚ್.ಮಂಜುನಾಥ್‌ನನ್ನು ಪರಿಚಯ ಮಾಡಿಸಿದ್ದ. ‘ನಿಮ್ಮ ಸಂಬಂಧಿಕರು ಹಾಗೂ ಸ್ನೇಹಿತರು ಯಾರಾದರೂ ಇದ್ದರೆ ಹೇಳಿ, ಅವರ ಹೆಸರಿನಲ್ಲಿ ಕಾರು ಖರೀದಿಸಿ ಅಟ್ಯಾಚ್‌ ಮಾಡಿಸೋಣ. ಅವರಿಗೆ ಪ್ರತಿ ತಿಂಗಳು ಹಣ ಬರುತ್ತದೆ’ ಎಂದಿದ್ದರು. ಅದನ್ನು ನಂಬಿ, 15 ಮಂದಿಯಿಂದ ತಲಾ ₹3 ಲಕ್ಷದಂತೆ ಒಟ್ಟು ₹45 ಲಕ್ಷವನ್ನು ಆರೋಪಿಗಳಿಗೆ ಕೊಡಲಾಗಿತ್ತು’ ಎಂದು ಉಲ್ಲೇಖಿಸಿದ್ದಾರೆ.

‘ಎರಡು ತಿಂಗಳು ಬಾಡಿಗೆ ಹಣ ಕೊಟ್ಟಿದ್ದ ಆರೋಪಿಗಳು, ಆ ನಂತರ ಕೊಟ್ಟಿರಲಿಲ್ಲ. ವಿಚಾರಿಸಿದಾಗ, ‘ವಿಧಾನಸಭಾ ಚುನಾವಣೆ ಇದ್ದು, ಹಣ ತಡವಾಗಿ ಬರಲಿದೆ’ ಎಂದಿದ್ದರು. ಚುನಾವಣೆ ಮುಗಿದ ಮೇಲೂ ಹಣ ಬಂದಿರಲಿಲ್ಲ. ಆರೋಪಿಗಳು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರು’ ಎಂದು ದೂರಿನಲ್ಲಿ ಹೇಳಿದ್ದಾರೆ.

ನಕಲಿ ಒಪ್ಪಂದ ಪತ್ರ: ‘ಹಣ ಪಡೆಯುವ ವೇಳೆ ಆರೋಪಿಗಳು, ಆಡಳಿತ ಮತ್ತು ಸಿಬ್ಬಂದಿ ನಿರ್ವಹಣಾ ಇಲಾಖೆಯ ಒಪ್ಪಂದ ಪತ್ರ ನೀಡಿದ್ದರು. ಆರೋಪಿಗಳು ನಾಪತ್ತೆಯಾಗಿದ್ದರಿಂದ, ಆ ಪತ್ರವನ್ನು ತೆಗೆದುಕೊಂಡು ಇಲಾಖೆಯ ಕಚೇರಿಗೆ ಹೋಗಿ ವಿಚಾರಿಸಲಾಗಿತ್ತು. ಆದರೆ, ಆ ಪತ್ರವೇ ನಕಲಿ ಎಂಬುದು ತಿಳಿಯಿತು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.