ಉಡುಪಿ: ಕಾರ್ಕಳ ತಾಲ್ಲೂಕಿನ ಬೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಗಿರಿ ರಸ್ತೆಯಲ್ಲಿ ನಾಥೂರಾಮ್ ಗೋಡ್ಸೆ ನಾಮಫಲಕ ಅಳವಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದರಿಂದ ತೆರವುಗೊಳಿಸಲಾಗಿದೆ.
ಗೋಡ್ಸೆ ನಾಮಫಲಕ ಹಾಕಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ನಾಮಫಲಕ ತೆರವಿಗೆ ಒತ್ತಾಯಿಸಿದರು. ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದರು. ಬಳಿಕ ಬೋಳ ಗ್ರಾಮ ಪಂಚಾಯಿತಿ ಸಿಬ್ಬಂದಿ ಗೋಡ್ಸೆ ನಾಮಫಲಕ ತೆರವುಗೊಳಿಸಿದರು.
ಘಟನೆ ಸಂಬಂಧ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಎಚ್.ಪ್ರಸನ್ನ ಅವರು, ‘ಗೋಡ್ಸೆ ನಾಮಫಲಕವನ್ನು ಬೋಳ ಗ್ರಾಮ ಪಂಚಾಯಿತಿ ಕಡೆಯಿಂದಯಿಂದ ಹಾಕಿಲ್ಲ. ರಸ್ತೆಗೆ ನಾಥೂರಾಮ್ ಗೋಡ್ಸೆ ಹೆಸರಿಡುವ ಯಾವ ನಿರ್ಣಯವನ್ನೂ ಗ್ರಾಮ ಪಂಚಾಯಿತಿ ತೆಗೆದುಕೊಂಡಿರಲಿಲ್ಲ. ಪಂಚಾಯಿತಿಯ ಗಮನಕ್ಕೆ ಬಾರದಂತೆ ನಾಮಫಲಕ ಹಾಕಲಾಗಿದೆ. ವಿಷಯ ತಿಳಿದ ಕೂಡಲೇ ತೆರವುಗೊಳಿಸಲಾಗಿದೆ. ಕಾರ್ಕಳ ಇಒಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವಂತೆ ಹಾಗೂ ಫಲಕ ಹಾಕಿದವರ ವಿರುದ್ಧ ಠಾಣೆಗೆ ದೂರು ನೀಡುವಂತೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.