ADVERTISEMENT

ರಸ್ತೆಗಿಳಿಯದ ಲಾರಿ, ಟ್ರಕ್: ಮತ್ತೆ ಮುಷ್ಕರದ ಎಚ್ಚರಿಕೆ

ದೇಶವ್ಯಾಪಿ ಹಮ್ಮಿಕೊಂಡಿದ್ದ ಮುಷ್ಕರ ಬೆಂಬಲಿಸಿ ನಗರದಲ್ಲೂ ಟ್ರಕ್‌ಗಳ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 21:33 IST
Last Updated 26 ಫೆಬ್ರುವರಿ 2021, 21:33 IST
ಮುಷ್ಕರದ ವೇಳೆ ಯಶವಂತಪುರದಲ್ಲಿ ಕಾರ್ಯಾಚರಣೆ ನಿಲ್ಲಿಸಿದ್ದ ಸರಕು ಸಾಗಾಣಿಕೆ ವಾಹನಗಳು –ಪ್ರಜಾವಾಣಿ ಚಿತ್ರ
ಮುಷ್ಕರದ ವೇಳೆ ಯಶವಂತಪುರದಲ್ಲಿ ಕಾರ್ಯಾಚರಣೆ ನಿಲ್ಲಿಸಿದ್ದ ಸರಕು ಸಾಗಾಣಿಕೆ ವಾಹನಗಳು –ಪ್ರಜಾವಾಣಿ ಚಿತ್ರ   

ಬೆಂಗಳೂರು: ತೈಲ ದರ ಇಳಿಕೆ, ಇ-ವೇ ಬಿಲ್ ನಿಯಮಾವಳಿ ರದ್ದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಲಾರಿ ಮತ್ತು ಟ್ರಕ್ ಸೇರಿದಂತೆ ಸರಕು ಸಾಗಾಣಿಕೆ ವಾಹನ ಮಾಲೀಕರು ದೇಶವ್ಯಾಪಿ ಶುಕ್ರವಾರ ಹಮ್ಮಿಕೊಂಡಿದ್ದ ಮುಷ್ಕರ ಬೆಂಬಲಿಸಿ ನಗರದಲ್ಲೂ ಲಾರಿ ಹಾಗೂ ಟ್ರಕ್‌ಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದವು.

ಬೆಂಗಳೂರು-ತುಮಕೂರು ಹೆದ್ದಾರಿಯ ಮಾದನಾಯಕನಹಳ್ಳಿ ನೈಸ್ ರಸ್ತೆ ಜಂಕ್ಷನ್‍ನಲ್ಲಿರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘಗಳ ಒಕ್ಕೂಟದ ವತಿಯಿಂದ ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲಾಯಿತು. ಇದರಿಂದ ಕಿಲೋಮೀಟರ್ಗ‌ಟ್ಟಲೆ ವಾಹನಗಳು ನಿಲ್ಲಬೇಕಾಯಿತು. ಪ್ರತಿಭಟನೆಯಿಂದ ವಾಹನ ದಟ್ಟಣೆ ಹಾಗೂ ಸವಾರರು ಹೈರಾಣಾದರು.‌

ಬೇಡಿಕೆಗಳನ್ನು ಈಡೇರಿಸುವಂತೆ ಲಾರಿ ಮಾಲೀಕರು ಹೆದ್ದಾರಿ ತಡೆಗೂ ಮುಂದಾಗಿದ್ದರು. ಆದರೆ, ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ಇದರಿಂದ ಮಾಲೀಕರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.

ADVERTISEMENT

ಅಗತ್ಯ ವಸ್ತುಗಳನ್ನು ಪೂರೈಸುವ ವಾಹನಗಳನ್ನು ಹೊರತುಪಡಿಸಿ, ಉಳಿದೆಲ್ಲಾ ವಾಹನಗಳು ರಸ್ತೆಗೆ ಇಳಿಯಲಿಲ್ಲ. ರಾಜ್ಯದಾದ್ಯಂತ ಸುಮಾರು ಆರು ಲಕ್ಷ ಲಾರಿಗಳು ಸ್ತಬ್ಧವಾಗಿದ್ದವು.

‘ತೈಲ ದರ ಏರಿಕೆ, ಬಿಎಸ್ 6 ವಾಹನಗಳ ಬಿಡಿಭಾಗಗಳ ದರ ಹೆಚ್ಚಳ ಹಾಗೂ ತೆರಿಗೆಹೆಚ್ಚಳದಿಂದ ಸರಕು ಸಾಗಾಣಿಕೆ ಉದ್ಯಮಕ್ಕೆ ಬಹಳ ತೊಂದರೆಯಾಗಿದೆ. ಬೇರೆ ರಾಜ್ಯಗಳಲ್ಲಿ ತೈಲದರ ಇಳಿಸಲಾಗಿದೆ. ಡೀಸೆಲ್ ಮೇಲೆ ಪ್ರತಿ ಲೀಟರ್‌ಗೆ ₹3 ಕಡಿಮೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದೇವೆ’ ಎಂದು ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಆಗ್ರಹಿಸಿದರು.

‘ಇ–ವೇ ಬಿಲ್‌ನ ಪ್ರಮಾಣವನ್ನು ಕಡಿಮೆ ಮಾಡಬೇಕು. ರಾಜ್ಯದಲ್ಲಿ ಕೂಡಲೇ ಡೀಸೆಲ್‌ ದರ ಕಡಿಮೆ ಮಾಡಬೇಕು.ನೈಸ್‌ ರಸ್ತೆಯಲ್ಲಿ ಹಲವು ಟೋಲ್‌ಗಳಿದ್ದು, ಕೂಡಲೇ ಫಾಸ್ಟ್‌ ಟ್ಯಾಗ್ ಅಳವಡಿಸಬೇಕು. ಮರಳು ನೀತಿ ಜಾರಿ ಮಾಡಬೇಕು’ ಎಂದು

ಗುಜರಿ ನೀತಿ ಬೇಡ:‘ಕೇಂದ್ರ ಸರ್ಕಾರದ ಗುಜರಿ ನೀತಿ ಜಾರಿಗೆ ನಮ್ಮ ವಿರೋಧವಿದೆ. ವಾಹನ ಉತ್ಪಾದಕ ಕಂಪನಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಈ ನೀತಿ ರೂಪಿಸಲಾಗಿದೆ. ಈ ಹೊಸ ನೀತಿಯಿಂದ ಲಾರಿ ಮಾಲೀಕರೂ ಬೀದಿಗೆ ಬರಲಿದ್ದಾರೆ. ಒಂದು ವೇಳೆ ನೀತಿ ಜಾರಿಯಾದರೆ, ಹಳೆಯ ವಾಹನಗಳಿಗೆ ಸೂಕ್ತ ಬೆಲೆ ನೀಡಬೇಕು ಹಾಗೂ ಹೊಸ ವಾಹನಗಳ ಖರೀದಿಗೆ ಪೂರಕ ಕೊಡುಗೆಗಳನ್ನು ನೀಡಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.