ಬೆಂಗಳೂರು: ಇಂದಿನಿಂದ ಮೂರು ದಿನಗಳ ಕಾಲ ಯಲಹಂಕ ವಾಯುನೆಲೆಯಲ್ಲೆ ಲೋಹದ ಹಕ್ಕಿಗಳ ಕಲರವ ಆರಂಭವಾಗಿದ್ದು, ಕೋವಿಡ್ ಕಾಣಿಸಿಕೊಂಡ ಬಳಿಕ ಯಲಹಂಕದ ವಾಯುನೆಲೆಯಲ್ಲಿ ಏರ್ಪಡಿಸಲಾಗಿರುವ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನದ 13ನೇ ಆವೃತ್ತಿ ಏರೋ ಇಂಡಿಯಾ-2021 ಆಗಿದೆ.
ವೈಮಾನಿಕ ಪ್ರದರ್ಶನಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಅಧಿಕೃತ ಚಾಲನೆ ನೀಡಿದ್ದು, 'ಆತ್ಮನಿರ್ಭರ' ಪರಿಕಲ್ಪನೆಯಡಿಯಲ್ಲಿ 78 ವಿದೇಶಿ ಕಂಪನಿಗಳು ಸೇರಿದಂತೆ 600ಕ್ಕೂ ಹೆಚ್ಚು ಕಂಪನಿಗಳು ಏರೋ ಇಂಡಿಯಾದಲ್ಲಿ ಭಾಗವಹಿಸಲಿವೆ.
ಏರೋ ಇಂಡಿಯಾ 2021ಕ್ಕೆ ಚಾಲನೆ ಸಿಕ್ಕ ಬಳಿಕ ರಾಷ್ಟ್ರಧ್ವಜ, ಭಾರತೀಯ ವಾಯು ಸೇನೆ ಹಾಗೂ ಏರೋ ಇಂಡಿಯಾ 2021ರ ಧ್ವಜ ಹೊತ್ತ ಎಲ್‌ಯುಹೆಚ್ ಹೆಲಿಕಾಪ್ಟರ್‌ಗಳು ಮೊದಲು ಪ್ರದರ್ಶನ ನೀಡಿದವು. ನಂತರ ರಫೇಲ್ ಜೆಟ್‌ಗಳು ಸಹ ಹಾರಾಟ ನಡೆಸಿದವು.
ಎಚ್‌ಎಎಲ್ ನಿರ್ಮಿತ ಲಘು ಬಳಕೆಯ ಹೆಲಿಕಾಪ್ಟರ್ ಮತ್ತು ಎರಡು ಧ್ರುವ ಸುಧಾರಿತ ಲಘು ಹೆಲಿಕಾಪ್ಟರ್ (ಎಲ್‌ಸಿಎಚ್) ಇಂಗ್ಲಿಷ್ ಅಕ್ಷರ ವಿ ಆಕಾರದಲ್ಲಿ ಸಾಗಿಬಂದವು. ಇದರೊಂದಿಗೆ ಲಘು ಯುದ್ಧ ಹೆಲಿಪಕಾಪ್ಟರ್‌ಗಳ ಗುಂಪು ಸಾಗಿಬಂದ ಬಳಿಕ 4 ರುದ್ರ ಲಘು ಯುದ್ಧ ಹೆಲಿಕಾಪ್ಟರ್‌ಗಳು (ಎಲ್‌ಸಿಎಚ್) ಜೊತೆಯಲ್ಲೇ ಹಾರಿ ಬಂದ ಪರಿ ಅಂಬರಕ್ಕೆ ವಜ್ರದುಂಗುರ ತೊಡಿಸಿದಂತೆ ಕಂಡಿತು.
ಆತ್ಮನಿರ್ಭರ: ಈ ಬಾರಿ ಎಚ್‌ಎಎಲ್ ‘ಆತ್ಮನಿರ್ಭರ’ ಚಿತ್ತಾರ ಮೂಡಿಸಿತು. ಲಘು ಯುದ್ಧ ಹೆಲಿಕಾಪ್ಟರ್, ಹಾಕ್–ಐ, ಇಂಟರ್ ಮೀಡಿಯೇಟ್ ಜೆಟ್ ಟ್ರೈನರ್ (ಐಜೆಟಿ) ಹಾಗೂ ಎರಡು ತರಬೇತಿ ವಿಮಾನಗಳು (ಎಚ್‌ಟಿಟಿ–40) ಮತ್ತು ಡಾರ್ನಿಯರ್ 228 ವಿಮಾನಗಳ ಬಳಗ ವೈಮಾನಿಕ ಕ್ಷೇತ್ರದಲ್ಲಿ ದೇಸಿ ಹೆಜ್ಜೆಗುರುತುಗಳನ್ನು ಮೂಡಿಸುವ ಭರವಸೆ ನೀಡಿದವು.
ಎ 145 ವಾಯುಜನ್ಯ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ ಅಳವಡಿಸಿದ ನೇತ್ರಾ ವಿಮಾನ ರಾಜಗಾಂಭೀರ್ಯದಿಂದ ಸಾಗಿತು. ಸಂಪೂರ್ಣ ಸ್ವದೇಶೀ ತಂತ್ರಜ್ಞಾನ ಆಧಾರಿತ ಈ ವ್ಯವಸ್ಥೆಯನ್ನು ಬ್ರಜಿಲ್ ನಿರ್ಮಿತ ಎಂಬ್ರಾಯರ್ 145 ವಿಮಾನದಲ್ಲಿ ಅಳವಡಿಸಲಾಗಿದೆ. ಬಳಿಕ ಒಂದು ಸಿ–17 ಗ್ಲೋಬ್‌ಮಾಸ್ಟರ್ ವಿಮಾನ ಮತ್ತು ಸುಖೋಯ್ 30 ಎಂಕೆ-1 ವಿಮಾನಗಳು ವೀ ಆಕಾರದಲ್ಲಿ ಚಿತ್ತಾರ ಮೂಡಿಸಿದವು. ಇದರೊಂದಿಗೆ ಎರಡು ತೇಜಸ್ ಲಘು ಯುದ್ಧ ವಿಮಾನಗಳ ಗುಂಪು ಸದ್ದು ಮೊಳಗಿಸುತ್ತಾ ನಭದಲ್ಲಿ ಚಿಮ್ಮಿತು.
ಗಮನ ಸೆಳೆದ ಬ್ರಹ್ಮಾಸ್ತ್ರ: ನಂತರ ನುಗ್ಗಿ ಬಂದಿದ್ದು ಭಾರತದ ವಾಯುಪಡೆಯ ಹೊಸ ಬ್ರಹ್ಮಾಸ್ತ್ರ ರಫೇಲ್. ಮೂರು ರಫೇಲ್ ವಿಮಾನಗಳು ಚಿತ್ತಾಕರ್ಷಕ ವಿನ್ಯಾಸಗಳನ್ನು ಪ್ರದರ್ಶಿಸಿದವು.
ಒಂದು ಸುಖೋಯ್ 30ಎಂಕೆ–1, ಎರಡು ಜಾಗ್ವಾರ್ ವಿಮಾನಗಳು, ಎರಡು ಹಾಕ್ ವಿಮಾನಗಳ ಸೇರಿ 5 ವಿಮಾನಗಳ ಸಮೂಹ ಮೂಡಿಸಿದ ಗರುಡ ಚಿತ್ತಾರ ಪ್ರೇಕ್ಷಕರನ್ನು ಸಮ್ಮೋಹನಗೊಳಿಸಿತು.
ಆಗಸದಲ್ಲಿ ಮೂಡಿದ ತ್ರಿಶೂಲ:ಮೂರು ಸುಖೋಯ್ 30 ಎಂಕೆ–1 ವಿಮಾನಗಳು ಅಕ್ಷರಶಃಯಲಹಂಕದ ಬಾನಿನ ಉದ್ದಗಲವನ್ನು ಆವರಿಸಿ ಬಿಟ್ಟವು. ಕಿವಿಗಡಚಿಕ್ಕುವ ಸದ್ದು ಮೊಳಗಿಸುತ್ತಾ ಮಿಂಚಿನ ವೇಗದಲ್ಲಿ ಸಂಚರಿಸುತ್ತಾ ಆರ್ಭಟಿಸಿದ ಈ ಯುದ್ಧ ವಿಮಾನಗಳು ಪ್ರಶಾಂತವಾದ ನೀಲಾಗಸದಲ್ಲಿ ನರ್ತಿಸಿದವು.
ಅಮೆರಿಕದ ಬಿ1ಬಿ ಬಹೂಪಯೋಗಿ ಬಾಂಬರ್ ವಿಮಾನವು ಪ್ರದರ್ಶನದ ಆಕರ್ಣಣೆಯಾಗಿತ್ತು. ತೇಜಸ್ ವಿಮಾನದ ಜೊತೆಯಲ್ಲೇ ಈ ವಿಮಾನ ಸಾಗಿಬಂತು.
ಇವೆಲ್ಲವುಗಳಿಗಿಂತಲೂ ಪ್ರೇಕ್ಷಕರ ಮನದಲ್ಲಿಅಚ್ಚಳಿಯದೆ ದಾಖಲಾಗಿದ್ದು ಸೂರ್ಯಕಿರಣ ಮತ್ತು ಸಾರಂಗ ತಂಡಗಳ ಚಿನ್ನಾಟ. ನೀಲಾಂಬರದಲ್ಲಿ ಹೊಗೆಯ ಗೆರೆಗಳನ್ನು ಬರೆಯುತ್ತಾ ಶರವೇಗದಲ್ಲಿ ಸಾಗಿದ ಕಡುಗೆಂಪು ಪಟ್ಟಿಗಳಿರುವ ಸೂರ್ಯಕಿರಣ ವಿಮಾನಗಳ ರೋಮಾಂಚನಕಾರಿ ವಿನ್ಯಾಸಗಳನ್ನು ಮನ ತುಂಬಿಕೊಳ್ಳುವುದೋ ಅಥವಾ ಕುಣಿದು ಕುಪ್ಪಳಿಸುತ್ತಿದ್ದ ಸಾರಂಗ ತಂಡದ ಹೆಲಿಕಾಪ್ಟರ್‌ಗಳು ಬಾನಿನಲ್ಲಿ ಮೂಡಿಸಿದ ಬಣ್ಣದೋಕುಳಿಯನ್ನು ಕಣ್ಣಿಗೆ ತುಂಬಿಸಿಕೊಳ್ಳುವುದೋ ಎಂದು ಪ್ರೇಕ್ಷಕರು ದ್ವಂದ್ವದಲ್ಲಿ ಮುಳುಗುವಂತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.