ADVERTISEMENT

ಬ್ಯಾಗ್‌ ಖರೀದಿ | ನಿಯಮ ಉಲ್ಲಂಘಿಸಿದ್ದ ರೋಹಿಣಿ ಸಿಂಧೂರಿ: ವರದಿಯಲ್ಲಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2023, 4:01 IST
Last Updated 28 ಫೆಬ್ರುವರಿ 2023, 4:01 IST
   

ಬೆಂಗಳೂರು: ‘ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ರೋಹಿಣಿ ಸಿಂಧೂರಿ, ಆ ಜಿಲ್ಲಾ ವ್ಯಾಪ್ತಿಯ ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳಿಗೆ‌ 14,71,458 ಬಟ್ಟೆ ಬ್ಯಾಗ್‌ಗಳನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ₹ 52ರಂತೆ ಖರೀದಿಸಲು ಅನುಮೋದನೆ ನೀಡುವ ವೇಳೆ ನಿಯಮ ಉಲ್ಲಂಘಿಸಿದ್ದರು’ ಎಂದು ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಾಥಮಿಕ ವಿಚಾರಣಾ ವರದಿಯಲ್ಲಿ ವಸತಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ಜೆ. ರವಿಶಂಕರ್ ಉಲ್ಲೇಖಿಸಿರುವುದು ಬಹಿರಂಗವಾಗಿದೆ.

ರೋಹಿಣಿ ಸಿಂಧೂರಿ ವಿರುದ್ಧ ಈಚೆಗೆ ಆರೋಪ ಮಾಡಿದ್ದ ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್‌ ಅವರು, ‘ಅಗ್ಗದ ಬ್ಯಾಗ್‌ಗಳನ್ನೂ ಅತಿ ಹೆಚ್ಚು ಬೆಲೆಗೆ ಸಿಂಧೂರಿ ಖರೀದಿಸಿದ್ದ ಪ್ರಕರಣ ಹಾಗೂ ರವಿಶಂಕರ್‌ ಅವರು ಸಲ್ಲಿಸಿದ್ದ ಪ್ರಾಥಮಿಕ ವಿಚಾರಣಾ ವರದಿಯನ್ನು ಉಲ್ಲೇಖಿಸಿದ್ದರು.

ಬಟ್ಟೆ ಬ್ಯಾಗ್‌ ಖರೀದಿಯಲ್ಲಿ ರೋಹಿಣಿ ಸಿಂಧೂರಿ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿ ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್‌ ಮತ್ತು ಶೈಲೇಂದ್ರ ವಿ. ಭೀಮರಾವ್‌ ಎಂಬವರು ನೀಡಿದ್ದ ದೂರಿನ ಮೇಲೆ ವಿಚಾರಣೆಗಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ರವಿಶಂಕರ್ ಅವರನ್ನು ನೇಮಿಸಿತ್ತು.

ADVERTISEMENT

ರವಿಶಂಕರ್‌ ವರದಿಯಲ್ಲಿ ಏನಿದೆ?: ‘ಬಟ್ಟೆ ಬ್ಯಾಗ್‌ಗಳನ್ನು ಪಾರದರ್ಶಕ ಕಾಯ್ದೆ ಹಾಗೂ ನಿಯಮಾವಳಿಗಳ ನಿಯಮ 4 (ಎಚ್‌) ಅನ್ವಯ ವಿನಾಯಿತಿ ಹೊಂದಿರುವ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಮೂಲಕ ₹ 52ಕ್ಕೆ ನಿಗದಿಪಡಿಸಿ ಖರೀದಿಸುವ ಮೊದಲು ಮುಕ್ತ ಮಾರುಕಟ್ಟೆಯಲ್ಲಿ ಇದೇ ಬಟ್ಟೆ ಬ್ಯಾಗ್‌ಗಳು ₹ 10ರಿಂದ 13ಕ್ಕೆ ಸಿಗಬಹುದಾದ ಸಾಧ್ಯತೆ ಪರಿಶೀಲಿಸಬೇಕಿತ್ತು. ಆ ಮೂಲಕ, ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುವ ಸಾಧ್ಯತೆಯನ್ನು ಗಮನಿಸಬೇಕಿತ್ತು’ ಎಂದು ವರದಿಯಲ್ಲಿದೆ.

‘ಪಾಲಿಕೆಯ ಸಾಮಾನ್ಯ ಸಭೆಯ ಘಟನೋತ್ತರ ಅನುಮೋದನೆಯ ಮೇರೆಗೆ ಖರೀದಿಗೆ ಜಿಲ್ಲಾಧಿಕಾರಿಯಾಗಿದ್ದ ಸಿಂಧೂರಿ ಅನುಮೋದನೆ ನೀಡಿದ್ದರು. ಆದರೆ, ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಸಿಂಧೂರಿಯವರು ಪಾಲಿಕೆಯ ಸಭೆ ಅಥವಾ ಇತರ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳಿಂದ ಘಟನೋತ್ತರ ಅನುಮೋದನೆ ಪಡೆದಿರುವ ಮಾಹಿತಿ ಇಲ್ಲ’ ಎಂದೂ ವರದಿಯಲ್ಲಿದೆ.

‘ಆರ್ಥಿಕ ಅಧಿಕಾರ ಉಲ್ಲಂಘನೆ’
ರವಿಶಂಕರ್‌ ಅವರ ವಿಚಾರಣಾ ವರದಿ ಮೇಲೆ ಡಿಪಿಎಆರ್‌ಗೆ ಅಭಿಪ್ರಾಯ ನೀಡಿರುವ ನಗರಾಭಿವೃದ್ಧಿ ಇಲಾಖೆ, ‘ಪಾರದರ್ಶಕ ಕಾಯ್ದೆ ಹಾಗೂ ನಿಯಮಾವಳಿಗಳ ನಿಯಮ 4 (ಎಚ್‌) ಅನ್ವಯ ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಯಾವುದೇ ಸರ್ಕಾರಿ ಸಂಸ್ಥೆಗಳು ಟೆಂಡರ್‌ ಮೂಲಕ ಸಾಮಗ್ರಿಗಳನ್ನು ಖರೀದಿಸಬೇಕು. ಅಲ್ಲದೆ, ನಿಗಮದಿಂದ ಕೇವಲ ಬಟ್ಟೆಗಳನ್ನು ಮಾತ್ರ ಖರೀದಿಸಬಹುದಾಗಿದೆ. ಬಟ್ಟೆಗಳ ಬ್ಯಾಗ್‌ ಖರೀದಿಸಿರುವುದು ನಿಯಮ ಉಲ್ಲಂಘನೆ. ಜಿಲ್ಲಾಧಿಕಾರಿಗೆ ಆರ್ಥಿಕ ಪ್ರತ್ಯಾಯೋಜನೆಯ ಅಧಿಕಾರ ₹ 5 ಕೋಟಿ ಮಾತ್ರ ಇದೆ. ಆದರೆ, ಬಟ್ಟೆ ಬ್ಯಾಗ್‌ ಖರೀದಿ ಮೊತ್ತ ₹ 5 ಕೋಟಿಯನ್ನು ಮೀರಿದ್ದು, ಆರ್ಥಿಕ ಅಧಿಕಾರದ ಪ್ರತ್ಯಾಯೋಜನೆಯು ಉಲ್ಲಂಘನೆಯಾಗಿದೆ’ ಎಂದು ತಿಳಿಸಿದೆ.

‘ಕೇಂದ್ರ ಸರ್ಕಾರದ ಯೋಜನೆಯಾದ ಸ್ವಚ್ಛ ಭಾರತ್‌ ಮಿಷನ್‌ ಅಡಿಯಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಚಟುವಟಿಕೆಗೆ ನಿಗದಿಪಡಿಸಿದ ಅನುದಾನದಲ್ಲಿ ಬ್ಯಾಗ್‌ಗಳನ್ನು ಖರೀದಿಸಿ, ವಿತರಿಸಲು ಅವಕಾಶ ಇಲ್ಲ. ಅಲ್ಲದೆ, ಐಇಸಿ ಚಟುವಟಿಕೆಗೆ ಸಂಬಂಧಪಟ್ಟಂತೆ ಅನುದಾನ ವೆಚ್ಚ ಮಾಡುವಾಗ ಕ್ರಿಯಾಯೋಜನೆ ತಯಾರಿಸಿ ರಾಜ್ಯ ಉನ್ನತಾಧಿಕಾರ(ಎಸ್‌ಎಚ್‌ಪಿಸಿ) ಸಮಿತಿಯ ಮುಂದೆ ಮಂಡಿಸಿ ಅನುಮೋದನೆ ಪಡೆಯಬೇಕು. ಈ ಪ್ರಕರಣದಲ್ಲಿ ಈ ಪ್ರಕ್ರಿಯೆಯನ್ನೂ ಪಾಲಿಸಿಲ್ಲ’ ಎಂದೂ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.