ADVERTISEMENT

ನಂದಿ ಬೆಟ್ಟ ಸೇರಿ ರಾಜ್ಯದ ಹಲವೆಡೆ ರೋಪ್‌ವೇ ನಿರ್ಮಾಣ: ಆನಂದ್‌ಸಿಂಗ್

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2023, 20:57 IST
Last Updated 28 ಫೆಬ್ರುವರಿ 2023, 20:57 IST
   

ಬೆಂಗಳೂರು: ರಾಜ್ಯದ ಹಲವೆಡೆ ರೋಪ್‌ವೇಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. ನಂದಿಬೆಟ್ಟದಲ್ಲಿ ₹ 96 ಕೋಟಿ ವೆಚ್ಚದ ರೋಪ್‌ವೇ ನಿರ್ಮಾಣ ಕಾಮಗಾರಿಗೆ ಮಾರ್ಚ್ 15ರ ಒಳಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್ ಹೇಳಿದರು.

ಅಂಜನಾದ್ರಿ ಬೆಟ್ಟದಲ್ಲಿ ₹ 20 ಕೋಟಿ ವೆಚ್ಚದಲ್ಲಿ ಅತಿಥಿಗಳ ಕೊಠಡಿ ನಿರ್ಮಿಸಲಾಗುತ್ತಿದೆ. ರೋಪ್‌ವೇ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಗಿದೆ. ಅಗತ್ಯವಿರುವ ಖಾಸಗಿ ಜಮೀನು ಬಳಸಿಕೊಳ್ಳಲು ಮಾತುಕತೆ ನಡೆದಿದೆ. ಕೇಂದ್ರ ಸರ್ಕಾರದ ಪರ್ವತಮಾಲಾ ಯೋಜನೆ ಅಡಿ ಉತ್ತರ ಕನ್ನಡ ಜಿಲ್ಲೆಯ ಯಾನ, ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ, ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಬೆಟ್ಟಗಳಲ್ಲಿ ರೋಪ್‌ವೇ ನಿರ್ಮಾಣಕ್ಕೆ ಸರ್ವೆಕಾರ್ಯ ನಡೆದಿದೆ. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದ ಹಲವು ಬೆಟ್ಟಗಳಲ್ಲಿ ನಿರ್ಮಾಣ ಕಾರ್ಯ ಆರಂಭಿಸಲಾಗುವುದು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಿಹಾರಧಾಮಗಳ ಸಂಸ್ಥೆಗೆ ₹ 15 ಕೋಟಿ ಲಾಭ:

ADVERTISEMENT

ಎರಡು ವರ್ಷಗಳ ಹಿಂದೆ ₹ 1 ಕೋಟಿ ನಷ್ಟ ಅನುಭವಿಸಿದ್ದ ಜಂಗಲ್ ಲಾಡ್ಜಸ್‌ ಅಂಡ್ ರೆಸಾರ್ಟ್ಸ್‌ 2022–23ನೇ ಸಾಲಿನಲ್ಲಿ ₹ 15 ಕೋಟಿ ಲಾಭ ಗಳಿಸಿದೆ. ರಾಜ್ಯದಲ್ಲಿ 26 ರೆಸಾರ್ಟ್‌ಗಳನ್ನು ಸಂಸ್ಥೆ ನಡೆಸುತ್ತಿದ್ದು, ಇನ್ನೂ ನಾಲ್ಕು ಹೊಸ ರೆಸಾರ್ಟ್‌ಗಳನ್ನು ಶೀಘ್ರ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಂಸ್ಥೆಗೆ ಮಂಜೂರಾದ 650 ಹುದ್ದೆಗಳಲ್ಲಿ 187 ಕಾಯಂ ನೌಕರರು ಇದ್ದಾರೆ. 357 ನೌಕರರು ಗುತ್ತಿಗೆ ಆಧಾರದಲ್ಲಿ, 294 ನೌಕರರು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. 50 ನೌಕರರನ್ನು ಈಚೆಗೆ ಕಾಯಂ ಮಾಡಲಾಗಿದೆ. ನೌಕರರ ಮಕ್ಕಳ ಶಿಕ್ಷಣಕ್ಕೆ ನೆರವು, ಸಾಲ ಸೌಲಭ್ಯ ನೀಡಲಾಗುತ್ತಿದೆ. ಕಬಿನಿ, ಎಚ್‌.ಡಿ.ಕೋಟೆಯ ಕೆಲ ಸರ್ಕಾರಿ ಶಾಲೆಗಳಿಗೆ ದೇಣಿಗೆ ನೀಡಲಾಗಿದೆ ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಂಗಲ್ ಲಾಡ್ಜಸ್‌ ಅಂಡ್ ರೆಸಾರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮನೋಜ್‌ ಕುಮಾರ್, ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಜಿ.ಜಗದೀಶ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.