ADVERTISEMENT

‘ವೇಣುಗೋಪಾಲ್‌ ಒಬ್ಬ ಬಫೂನ್, ಸಿದ್ದು ಅಹಂಕಾರಿ, ದಿನೇಶ್ ಫ್ಲಾಪ್‌ ಅಧ್ಯಕ್ಷ’

ಶಾಸಕ ರೋಷನ್ ಬೇಗ್ ವಾಗ್ದಾಳಿ 

​ಪ್ರಜಾವಾಣಿ ವಾರ್ತೆ
Published 21 ಮೇ 2019, 11:04 IST
Last Updated 21 ಮೇ 2019, 11:04 IST
ಚಿತ್ರ: ಎಎನ್‌ಐ ಟ್ವಿಟರ್‌
ಚಿತ್ರ: ಎಎನ್‌ಐ ಟ್ವಿಟರ್‌   

ಬೆಂಗಳೂರು: ಶಾಸಕ ರೋಷನ್ ಬೇಗ್ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂಸಿದ್ದರಾಮಯ್ಯ ವಿರುದ್ಧ ಬಂಡಾಯ ಸಾರಿದ್ದು, ಗುಂಡೂರಾವ್ ಅವರದು ‘ಫ್ಲಾಪ್ ಶೋ’ ಎಂದು ಹರಿಹಾಯ್ದಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಹಂಕಾರಿ ಮತ್ತು ಕೆ.ಸಿ.ವೇಣುಗೋಪಾಲ ಜೋಕರ್ ಎಂದು ಗೇಲಿ ಮಾಡಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಡಿಮೆ ಸೀಟುಗಳನ್ನು ಪಡೆದರೆ ಅದಕ್ಕೆ ಈ ಮೂವರೇ ಕಾರಣ ಎಂದು ಹೇಳಿದರು.

ADVERTISEMENT

ಮುಸ್ಲಿಮರು ಯಾವುದೇ ಒಂದು ಪಕ್ಷಕ್ಕೆ ನಿಷ್ಠರಾಗಿರಬೇಕಾಗಿಲ್ಲ. ಎನ್‌ಡಿಎ ಅಧಿಕಾರಕ್ಕೆ ಬಂದರೆ ಹೊಂದಿಕೊಂಡು ಹೋಗಬೇಕಾಗುತ್ತದೆ ಎಂದಿದ್ದಾರೆ.

‘ವೇಣುಗೋಪಾಲ್‌ ಅವರಂತಹ ಬಫೂನ್, ಸಿದ್ದರಾಮಯ್ಯ ಅವರಂತಹ ಅಹಂಕಾರಿ ಮತ್ತ ದಿನೇಶ್ ಗುಂಡೂರಾವ್ ಅವರಂತಹ ಪ್ಲಾಫ್ ಅಧ್ಯಕ್ಷರಿಂದ ಕಾಂಗ್ರೆಸ್ ಉದ್ಧಾರ ಆಗಲ್ಲ’ ಎಂದು ವಾಗ್ದಾಳಿ ನಡೆಸಿದರು.

ಲೋಕಸಭಾ ಟಿಕೆಟ್ ಕೊಡುವಾಗಲೇ ನಾನು ಅಸಮಾಧಾನ ವ್ಯಕ್ತಪಡಿಸಿದ್ದೆ. ಕ್ರಿಶ್ಚಿಯನ್ ಸಮುದಾಯಕ್ಕೆ ಒಂದೂ ಸೀಟ್ ಕೊಟ್ಟಿರಲಿಲ್ಲ. ಈ ಹಿಂದೆ ಅಲ್ಪಸಂಖ್ಯಾತರಿಗೆ ಮೂರು ಸೀಟ್‌ ಕೊಡುತ್ತಿದ್ದರು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಕಡೆಗಣನೆ ಮಾಡಲಾಗಿದೆ.

ಎಕ್ಸಿಟ್ ಪೋಲ್ ನೋಡಿದಾಗ ಇದು ಫ್ಲಾಪ್‌ ಶೋ ಅಂತಾ ಬೇಸರ ವ್ಯಕ್ತಪಡಿಸಿದೆ. ಸಿಎಲ್‌ಪಿ ಲೀಡರ್ ದುರಾಹಕಾರದಿಂದ ಈ ರೀತಿ ಫಲಿತಾಂಶ ಬರುತ್ತಿದೆ. ಕುಮಾರಸ್ವಾಮಿ ಮನೆ ಬಾಗಿಲಿಗೆ ಹೋಗಿ ಸಿಎಂ ಮಾಡಿದರು. ಆನಂತರ ನಾನೇ ಸಿಎಂ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಕಳೆದ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ 79 ಸ್ಥಾನ ಬರುವುದಕ್ಕೆ ಕಾರಣ. ಲಿಂಗಾಯಿತ ಧರ್ಮ ಒಡೆದಿದ್ದರಿಂದ25ರಿಂದ 30 ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು. ನನ್ನನ್ನು, ರಾಮಲಿಂಗರೆಡ್ಡಿ ಅವರನ್ನೂ ಕೈಬಿಟ್ಟರು. ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ. ಧರ್ಮ ಒಡೆಯೋದು, ಜಾತಿಗಳ ನಾಯಕರನ್ನು ಬೈಯೋದು ಮಾಡಿದರೆ ಜನ ಒಪ್ಪುತ್ತಾರಾ? ಎಂದು ಪ್ರಶ್ನಿಸಿದರು.

ಯಾವಾಗಲೂ ಒಕ್ಕಲಿಗರನ್ನು ಬೈಯುತ್ತಾರೆ. ಕುಮಾರಸ್ವಾಮಿ, ದೇವೇಗೌಡ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ.ಮಾನ ಮರ್ಯಾದೆ ಇದ್ದರೆ ಕೆಪಿಸಿಸಿ ಅಧ್ಯಕ್ಷ, ಸಿಎಲ್‌ಪಿ ನಾಯಕ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಗುಡುಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.