ನವದೆಹಲಿ: ಕರ್ನಾಟಕದ ರಾಜಕಾರಣಿ ಆರ್.ರೋಷನ್ ಬೇಗ್ ಸಚಿವರಾಗಿದ್ದ ವೇಳೆ ಯಲ್ಲಿ ರಾಜಕೀಯ ಪ್ರಭಾವ ಬಳಸಿ ₹50 ಕೋಟಿಗೂ ಅಧಿಕ ಬೆಲೆಬಾಳುವ ಸರ್ಕಾರಿ ಭೂಮಿಯನ್ನುನಿಯಮಬಾಹಿರವಾಗಿ ಮಂಜೂರು ಮಾಡಿಸಿಕೊಂಡಿರುವುದು ಜಾರಿ ನಿರ್ದೇಶನಾಲಯದ (ಇ.ಡಿ.) ತನಿಖೆಯಿಂದ ಬಯಲಾಗಿದೆ.
ಐ ಮಾನಿಟರಿಂಗ್ ಅಡ್ವೈಸರಿ (ಐಎಂಎ) ಹಗರಣ ದಲ್ಲಿ ಬೇಗ್ ಅವರನ್ನು ಬಂಧಿಸಲಾಗಿತ್ತು. ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ, ಕಳೆದ ವರ್ಷ ಏಪ್ರಿಲ್‌ನಲ್ಲಿ ಬೇಗ್ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಬೇಗ್ ಅವರ ಭೂ ಅಕ್ರಮದ ಬಗ್ಗೆ ಹೆಚ್ಚುವರಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿ ಜಾರಿ ನಿರ್ದೇಶನಾ ಲಯದ ಹೆಚ್ಚುವರಿ ನಿರ್ದೇಶಕರಾದ ಮೋನಿಕಾ ಶರ್ಮಾ ಅವರು ಕರ್ನಾಟಕ ಸರ್ಕಾರದ ಭ್ರಷ್ಟಾಚಾರ ನಿಗ್ರಹದಳಕ್ಕೆಪತ್ರ ಬರೆದಿದ್ದಾರೆ.
‘ಬೇಗ್ 1984ರಿಂದ 2019ರ ಅವಧಿಯಲ್ಲಿ ಏಳು ಬಾರಿ ಶಾಸಕರಾಗಿ ಚುನಾಯಿತರಾಗಿದ್ದರು. 1996ರಿಂದ 1999ರವರೆಗೆ ಗೃಹ ಸಚಿವ, 2014ರಿಂದ 2018ರ ವರೆಗೆ ನಗರಾಭಿವೃದ್ಧಿ, ಮೂಲಸೌಕರ್ಯ ಹಾಗೂ ಹಜ್ ಸಚಿವರಾಗಿದ್ದರು. ಬೇಗ್ ಅವರು ಸಚಿವ ಹಾಗೂ ಶಾಸಕ ಸ್ಥಾನದ ರಾಜಕೀಯ ಪ್ರಭಾವ ಬಳಸಿಕೊಂಡು ನಿಯಮಗಳನ್ನು ಉಲ್ಲಂಘಿಸಿ ಸರ್ಕಾರಿ ಜಾಗವನ್ನು ಭೂಕಬಳಿಕೆ ಮಾಡಿದ್ದಾರೆ’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ಅಕ್ರಮ ಭೂ ಹಂಚಿಕೆಯಲ್ಲಿ ಬೇಗ್, ಕರ್ನಾಟಕದ ಆಗಿನ ಮುಖ್ಯಮಂತ್ರಿ, ಸಚಿವರು, ಬಿಬಿಎಂಪಿಯ ಆಗಿನ ಆಯುಕ್ತರು ಹಾಗೂ ಅಧಿಕಾರಿಗಳು, ಕಿಯೋನಿಕ್ಸ್‌ನ ಆಗಿನ ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳು ಭಾಗಿ ಯಾಗಿದ್ದಾರೆ. ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ಅವ ಕಾಶ ಇದೆ’ ಎಂದೂ ಅವರು ಹೇಳಿದ್ದಾರೆ.
ಕೆಐಎಡಿಬಿ ಲೋಪ: ಎಂ.ಎಸ್.ನಾರ್ತ್ ಮೀಡಿಯಾ ಇನ್ಫೊಟೆಕ್ ಸಂಸ್ಥೆಗೆ ಕೆಐಎಡಿಬಿ ಬೆಂಗಳೂರಿನ ಜಾಲ ಹೋಬಳಿಯ ಅರೆ ಬಿನ್ನಮಂಗಲ ಗ್ರಾಮದ ಸರ್ವೆ ಸಂಖ್ಯೆ 1ರಲ್ಲಿ 2 ಎಕರೆ ಹಂಚಿಕೆ ಮಾಡಿತ್ತು. ಆದರೆ, ಸಂಸ್ಥೆಯು ಕಟ್ಟಡ ನಕ್ಷೆ ಅನುಮೋದನೆ ಪಡೆದಿರಲಿಲ್ಲ. ಜತೆಗೆ, ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿ 2 ಎಕರೆ ಮಂಜೂರು ಮಾಡಲಾಗಿತ್ತು. 2018ರಿಂದ 2021ರ ಅವಧಿಯಲ್ಲಿ ಕೈಗಾರಿಕೆ ಆರಂಭಿಸದೆ ಷರತ್ತು ಉಲ್ಲಂಘಿಸಲಾಗಿದೆ. ಆದರೆ, ಈ ಕಂಪನಿಯ ವಿರುದ್ಧ ಕೆಐಎಡಿಬಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದೂ ಅವರು ಬೊಟ್ಟು ಮಾಡಿದ್ದಾರೆ.
ಪ್ರತಿಕ್ರಿಯೆಗೆ ರೋಷನ್ ಬೇಗ್ ಲಭ್ಯರಾಗಲಿಲ್ಲ.
ಕಡಿಮೆ ಬೆಲೆಗೆ₹30 ಕೋಟಿ ಜಾಗ ಹಂಚಿಕೆ!
ಬೇಗ್ ಮಾಲಿಕತ್ವದ ಡ್ಯಾನಿಷ್ ಪಬ್ಲಿಕೇಷನ್ ಸಂಸ್ಥೆಗೆ ಬೆಂಗಳೂರಿನಲ್ಲಿ ₹30 ಕೋಟಿ ಬೆಲೆ ಬಾಳುವ ಜಾಗವನ್ನು ₹1.68 ಕೋಟಿಗೆ ಹಂಚಿಕೆ ಮಾಡಲಾಗಿದೆ. ಈ ಮೂಲಕ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಲಾಗಿದೆ.
ತಿಮ್ಮಯ್ಯ ರಸ್ತೆಯಲ್ಲಿರುವ 20 ಸಾವಿರ ಚದರ ಅಡಿ ಜಾಗವನ್ನು ಮಂಜೂರು ಮಾಡುವಂತೆ ಡ್ಯಾನಿಷ್ ಸಂಸ್ಥೆಯು 2005ರ ಜುಲೈ 20ರಂದು ಮನವಿ ಸಲ್ಲಿಸಿತ್ತು. ಕರ್ನಾಟಕದ ಮುಖ್ಯಮಂತ್ರಿ ಅವರಿಗೂ ಆಗಸ್ಟ್ 2ರಂದು ಮನವಿ ನೀಡಿತ್ತು. ಈ ಜಾಗ ಮಂಜೂರು ಮಾಡುವಂತೆ ಮುಖ್ಯಮಂತ್ರಿಯಾಗಿದ್ದ ಎನ್.ಧರ್ಮಸಿಂಗ್ ಅವರು ಪಾಲಿಕೆಗೆ 2005ರ ಸೆಪ್ಟೆಂಬರ್ 27ರಂದು ನಿರ್ದೇಶನ ನೀಡಿದ್ದರು.
ಆಗಿನ ಮಾರುಕಟ್ಟೆ ಮೌಲ್ಯದ ಶೇ 50ರಷ್ಟು ದರ ವಿಧಿಸಿ 10 ಸಾವಿರ ಚದರ ಅಡಿ ಜಾಗವನ್ನು ಹಂಚಿಕೆ ಮಾಡಬಹುದು ಎಂದು ಬಿಬಿಎಂಪಿಯು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಬಳಿಕ,ಸಚಿವ ಸಂಪುಟವು ಮಾರುಕಟ್ಟೆ ಮೌಲ್ಯದ ಶೇ 20ರ ದರದಲ್ಲಿ ಈ ಜಾಗವನ್ನು ಹಂಚಿಕೆ ಮಾಡಲು ಒಪ್ಪಿಗೆ ನೀಡಿತ್ತು. ಸಂಸ್ಥೆಯು ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ಮುಂದಾಗಿರುವುದರಿಂದ ಹಂಚಿಕೆ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಪಾಲಿಕೆಯು ಸರ್ಕಾರವನ್ನು ಕೋರಿತ್ತು. ಆದರೆ, 2007ರ ಫೆಬ್ರುವರಿ 22ರಂದು ಸಂಸ್ಥೆಗೆ ₹1.68 ಕೋಟಿಗೆ ಕ್ರಯಪತ್ರ ಮಾಡಿಕೊಡಲಾಗಿತ್ತು.
1 ಎಕರೆಯಿಂದಲೇ ₹11.95 ಕೋಟಿ ಬಾಡಿಗೆ
ಬೆಂಗಳೂರಿನ ಬೇಗೂರು ಹೋಬಳಿಯ ಕೋನಪ್ಪನ ಅಗ್ರಹಾರ ಗ್ರಾಮದ ಪ್ಲಾಟ್ ನಂ. 105ರಲ್ಲಿ ರೋಷನ್ ಬೇಗ್ ಮಾಲೀಕತ್ವದ ಸುಬಿ ಎಲೆಕ್ಟ್ರಾನಿಕ್ಸ್ ಸಂಸ್ಥೆಗೆ ಕಿಯೋನಿಕ್ಸ್ ಸಂಸ್ಥೆಯು 1 ಎಕರೆ 097 ಗುಂಟೆ ಜಾಗವನ್ನು (4,464 ಮೀಟರ್) 2006ರ ಫೆಬ್ರುವರಿ 19ರಂದು ಗುತ್ತಿಗೆ ಕಂ ಮಾರಾಟ ಕರಾರು ಮಾಡಿತ್ತು.ಸುಬಿ ಎಲೆಕ್ಟ್ರಾನಿಕ್ ಪ್ರೆಸ್ಟಿಜ್ ಎಸ್ಟೇಟ್ಸ್ ಪ್ರಾಜೆಕ್ಟ್ ಜತೆಗೆ ಜಂಟಿ ಅಭಿವೃದ್ಧಿ ಒಪ್ಪಂದ ಮಾಡಿಕೊಂಡು ಈ ಜಾಗವನ್ನು ಅಭಿವೃದ್ಧಿಪಡಿಸಿದೆ. ಈ ಜಾಗದ ಬಾಡಿಗೆಯಿಂದಲೇ 2011–12ರಿಂದ 2020–21ರ ನಡುವಿನ 10 ವರ್ಷಗಳ ಅವಧಿಯಲ್ಲಿ ₹11.95 ಕೋಟಿ ಪಡೆದಿರುವುದು ಇ.ಡಿ. ತನಿಖೆ ವೇಳೆ ಪತ್ತೆಯಾಗಿದೆ.
ಈ ಜಾಗ ಹಂಚಿಕೆ ಮಾಡುವಂತೆ ಸುಬಿ ಸಂಸ್ಥೆಯು 1994ರಲ್ಲಿ ಕಿಯೋನಿಕ್ಸ್‌ಗೆ ಮನವಿ ಸಲ್ಲಿಸಿತ್ತು. 1 ಎಕರೆ 097ಗುಂಟೆ ಜಾಗವನ್ನು 1994ರ ಸೆಪ್ಟೆಂಬರ್‌ನಲ್ಲಿ ಕಿಯೋನಿಕ್ಸ್ ಹಂಚಿಕೆ ಮಾಡಿತ್ತು. ಹಣ ಪಾವತಿಸದ ಕಾರಣಕ್ಕೆ 1997ರ ಏಪ್ರಿಲ್‌ನಲ್ಲಿ ಹಂಚಿಕೆಯನ್ನು ರದ್ದು ಮಾಡಲಾಗಿತ್ತು.
ಶೇ 18ರ ಬಡ್ಡಿ ಜತೆಗೆ ಎಕರೆಗೆ₹14 ಲಕ್ಷ ಪಾವತಿಸುವ ಷರತ್ತಿನೊಂದಿಗೆ 1998ರ ಜನವರಿಯಲ್ಲಿ ಜಾಗವನ್ನು ಎರಡನೇ ಬಾರಿ ಹಂಚಿಕೆ ಮಾಡಲಾಗಿತ್ತು. ಷರತ್ತು ಪಾಲಿಸದ ಕಾರಣಕ್ಕೆ 2003ರಲ್ಲಿ ಹಂಚಿಕೆಯನ್ನು ರದ್ದುಪಡಿಸಲಾಗಿತ್ತು. ಆ ಬಳಿಕ ಯಾವುದೇ ಪ್ರಕ್ರಿಯೆ ನಡೆಸದೆ ಕಿಯೋನಿಕ್ಸ್ ಸಂಸ್ಥೆಯು 2006ರಲ್ಲಿ ಮೂರನೇ ಸಲ ಹಂಚಿಕೆ ಮಾಡಿತ್ತು. ನಿಯಮಬಾಹಿರವಾಗಿ 2010ರಲ್ಲಿ ಕ್ರಯಪತ್ರ ಮಾಡಿಕೊಡಲಾಗಿತ್ತು ಎಂಬುದು ತನಿಖೆಯಿಂದ ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.