ಕೋಲಾರ: ರಾಜಧನ ವಂಚನೆ, ಗಣಿ ಪರವಾನಗಿ ಷರತ್ತು ಉಲ್ಲಂಘನೆ ಹಾಗೂ ಒತ್ತುವರಿ ಜಮೀನಿನಲ್ಲಿ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಮಾಲೂರು ಕ್ಷೇತ್ರದ ಶಾಸಕ, ಕಾಂಗ್ರೆಸ್‌ನ ಕೆ.ವೈ.ನಂಜೇಗೌಡ ಹಾಗೂ ಅವರ ಸಹೋದರಿ ಸೇರಿದಂತೆ 20 ಮಂದಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ₹ 92.05 ಕೋಟಿ ದಂಡ ವಿಧಿಸಿದೆ.
ದಂಡ ಪಾವತಿಗೆ ಒಂದು ತಿಂಗಳ ಗಡುವು ನೀಡಿರುವ ಇಲಾಖೆ ಹಿರಿಯ ಭೂವಿಜ್ಞಾನಿ ಲೋಕೇಶ್ ಅವರು ಕಲ್ಲು ಗಣಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ, ಕ್ವಾರಿಗಳನ್ನು ಬಂದ್ ಮಾಡಿಸಿದ್ದಾರೆ.
ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಹರದಕೊತ್ತೂರು, ಕಣಗಲ, ಬನಹಳ್ಳಿ, ಅನಿಮಿಟ್ನಹಳ್ಳಿ ಗ್ರಾಮಗಳಲ್ಲಿ ಗುತ್ತಿಗೆ ಪ್ರದೇಶದ ಅಕ್ಕಪಕ್ಕದ ಸರ್ಕಾರಿ ಭೂಮಿ ಒತ್ತುವರಿ ಮಾಡಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ್ದ ಸಂಬಂಧ ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ ಅವರು ವಿಧಾನಸಭೆಯ ಅರ್ಜಿ ಸಮಿತಿಗೆ 2017ರಲ್ಲಿ ದೂರು ಕೊಟ್ಟಿದ್ದರು.
ಅರ್ಜಿ ಸಮಿತಿಯು ಆ ದೂರಿನ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಕಾರ್ಯಪಡೆ ಸಮಿತಿಗೆ ಆದೇಶಿಸಿತ್ತು. ಈ ಆದೇಶದ ಅನ್ವಯ ಕಂದಾಯ, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ನೂಟವೆ ಹಾಗೂ ಬನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜಂಟಿ ಸರ್ವೆ ನಡೆಸಿ ಕ್ವಾರಿ ಮಾಲೀಕರು ಗುತ್ತಿಗೆ ಪ್ರದೇಶದ ಅಕ್ಕಪಕ್ಕದ ಜಮೀನು ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿದ್ದಾರೆ ಎಂದು ವರದಿ ಸಲ್ಲಿಸಿದ್ದರು.
ವರದಿಗೆ ಆಕ್ಷೇಪ: ಈ ವರದಿ ಸಮರ್ಪಕವಾಗಿಲ್ಲ ಎಂದು ಕ್ವಾರಿ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ನಿಕಟಪೂರ್ವ ಜಿಲ್ಲಾಧಿಕಾರಿ ಜಿ.ಸತ್ಯವತಿ ಅವರು ವೈಜ್ಞಾನಿಕ ರೀತಿಯಲ್ಲಿ ಗಣಿ ಗುತ್ತಿಗೆ ಪ್ರದೇಶಗಳ ಸರ್ವೆ ನಡೆಸಿ, ನಕ್ಷೆ ಸಿದ್ಧಪಡಿಸಬೇಕೆಂದು ಸೂಚಿಸಿ ಭೂಮಾಪನ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಫೆ.24ರಂದು ಪತ್ರ ಬರೆದಿದ್ದರು.
ಜಿಲ್ಲಾಧಿಕಾರಿ ಪತ್ರದ ಹಿನ್ನೆಲೆಯಲ್ಲಿ ಭೂಮಾಪನ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೇಂದ್ರ ಕಚೇರಿ ಹಾಗೂ ಸ್ಥಳೀಯ ಕಚೇರಿ ಅಧಿಕಾರಿಗಳು ಬಯೋಟೆಕ್ ಸಲ್ಯೂಷನ್ಸ್ ಲಿಮಿಟೆಡ್ ಏಜೆನ್ಸಿ ಮೂಲಕ ಗಣಿ ಗುತ್ತಿಗೆ ಪ್ರದೇಶದಲ್ಲಿ ಡ್ರೋಣ್, ಡಿಫೆನ್ಸಿಯಲ್ ಗ್ಲೋಬಲ್ ಪೊಸೆಸಿಂಗ್ ಸಿಸ್ಟಮ್ (ಡಿಜಿಪಿಎಸ್) ಹಾಗೂ ಸರಪಳಿ ಸರ್ವೆ ಮಾಡಿಸಿದ್ದು, ಕ್ವಾರಿ ಮಾಲೀಕರು ಗುತ್ತಿಗೆ ಪ್ರದೇಶದ ಆಚೆಗೆ ಗಣಿಗಾರಿಕೆ ನಡೆಸಿರುವುದು ದೃಢಪಟ್ಟಿದೆ.
ಬೊಕ್ಕಸಕ್ಕೆ ನಷ್ಟ: ಜತೆಗೆ ಗಣಿ ಪರವಾನಗಿಯಲ್ಲಿ ನಿಗದಿಪಡಿಸಿದ್ದ ಮಿತಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಭೂಮಿಯಿಂದ ಕಲ್ಲು ತೆಗೆದು ಸಾಗಿಸಿರುವುದು, ಪರವಾನಗಿಯೇ ಇಲ್ಲದೆ ವರ್ಷಾನುಗಟ್ಟಲೇ ಗಣಿಗಾರಿಕೆ ನಡೆಸಿರುವುದು ಹಾಗೂ ರಾಜಧನ ವಂಚಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವುದು ಸರ್ವೆಯಿಂದ ಗೊತ್ತಾಗಿದೆ.
ಸರ್ವೆ ವರದಿ ಆಧರಿಸಿ ಹಿರಿಯ ಭೂವಿಜ್ಞಾನಿ ಲೋಕೇಶ್ ಅವರು ರಾಜ್ಯ ಉಪಖನಿಜ ರಿಯಾಯಿತಿ ನಿಯಮಾವಳಿ (ಕೆಎಂಎಂಸಿಆರ್) 1994ರ ಸೆಕ್ಷನ್ 42 ಮತ್ತು 44(3) ಅನ್ವಯ ಗುತ್ತಿಗೆ ಷರತ್ತು ಉಲ್ಲಂಘನೆ ಆರೋಪದಡಿ ಕ್ವಾರಿ ಮಾಲೀಕರಿಗೆ ರಾಜಧನದ 5 ಪಟ್ಟು ಹೆಚ್ಚು ದಂಡ ವಿಧಿಸಿದ್ದಾರೆ.
* ಬಹುತೇಕ ಕ್ವಾರಿ ಮಾಲೀಕರು ಪರವಾನಗಿ ಷರತ್ತು ಉಲ್ಲಂಘಿಸಿದ್ದಾರೆ. 59 ಕ್ವಾರಿಗಳ ರಾಜಧನ ವಂಚನೆ ಪ್ರಮಾಣ ₹ 200 ಕೋಟಿ ಮೀರಲಿದೆ.
-ಲೋಕೇಶ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ
* ಸರ್ಕಾರಕ್ಕೆ ನಿಯಮಾನುಸಾರ ರಾಜಧನ ಸಂದಾಯ ಮಾಡಿದ್ದೇನೆ. ಇದಕ್ಕೆ ಸಂಬಂಧಪಟ್ಟ ದಾಖಲೆಪತ್ರಗಳ ಸಮೇತ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನೋಟಿಸ್‌ಗೆ ಹಿಂಬರಹ ನೀಡುತ್ತೇನೆ.
-ಕೆ.ವೈ.ನಂಜೇಗೌಡ, ಶಾಸಕ
ಅಂಕಿ ಅಂಶ...
* 59 ಮಂದಿ ಜಿಲ್ಲೆಯ ಕಲ್ಲು ಗಣಿಗಾರಿಕೆ ಪರವಾನಗಿದಾರರು
* 215 ಎಕರೆ ಕಲ್ಲು ಗಣಿಗಾರಿಕೆ ಪ್ರದೇಶ
* 26 ಕ್ವಾರಿಗಳ ಸರ್ವೆ ಕಾರ್ಯ ಮುಕ್ತಾಯ
* 33 ಕ್ವಾರಿಗಳ ಸರ್ವೆ ಕಾರ್ಯ ಪ್ರಗತಿಯಲ್ಲಿದೆ
ಮುಖ್ಯಾಂಶಗಳು
* ಷರತ್ತು ಉಲ್ಲಂಘನೆ– ಒತ್ತುವರಿ ಜಮೀನಿನಲ್ಲಿ ಗಣಿಗಾರಿಕೆ
* ಡ್ರೋಣ್– ಡಿಜಿಪಿಎಸ್ ಸರ್ವೆಯಿಂದ ದೃಢಪಟ್ಟ ಅಕ್ರಮ
* ದಂಡ ಪಾವತಿಗೆ ತಿಂಗಳ ಗಡುವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.