ADVERTISEMENT

ಕೋಲಾರ: ಆರ್‌ಎಸ್‌ಎಸ್‌ ಮುಖಂಡನಿಗೆ ಚಾಕುವಿನಿಂದ ಹಲ್ಲೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 21:30 IST
Last Updated 6 ಆಗಸ್ಟ್ 2022, 21:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಾಲೂರು (ಕೋಲಾರ): ನಗರದ ಮಾರಿಕಾಂಬಾ ರಸ್ತೆಯಲ್ಲಿ ಶನಿವಾರ ಗಲಾಟೆ ಬಿಡಿಸಲು ಮುಂದಾದ ಆರ್‌ಎಸ್‌ಎಸ್‌ ಜಿಲ್ಲಾ ಸಹ ಶಾರೀರಕ್‌ ಪ್ರಮುಖ್‌ ರವಿಕುಮಾರ್‌ ಎಂಬುವರಿಗೆ ಯುವಕರಿಬ್ಬರು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.

39 ವರ್ಷದ ರವಿಕುಮಾರ್‌ ಅವರ ಬಲ ಕಿವಿ, ಕೈಗೆ ಏಟು ಬಿದ್ದಿದ್ದು, ಅಪಾಯದಿಂದ ಪಾರಾಗಿದ್ದಾರೆ. ಅವರ ಮಾಲೀಕತ್ವದ ಸ್ಟೀಲ್‌ ಪಾತ್ರೆ ಅಂಗಡಿ ಮುಂದೆ ಈ ಕೃತ್ಯ ನಡೆದಿದೆ. ‘ಇಬ್ಬರೂ ನನ್ನನ್ನು ಕೊಲ್ಲುವ ಉದ್ದೇಶ ಹೊಂದಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹಲ್ಲೆ ನಡೆಸಿದ ಆರೋಪಿ ಸೈಯದ್ ವಾಸೀಂನನ್ನು ಪಟ್ಟಣ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿಗೆ ಶೋಧ ನಡೆಸಿದ್ದಾರೆ.

ADVERTISEMENT

‘ಇಬ್ಬರು ಯುವಕರು ಬೈಕ್‌ ನಿಲುಗಡೆ ವಿಚಾರವಾಗಿ ಜಗಳವಾಡುತ್ತಿದ್ದರು. ರವಿಕುಮಾರ್, ಜಗಳವಾಡದಂತೆ ಬುದ್ಧಿವಾದ ಹೇಳಿದ್ದಾರೆ. ಆಗ ಸೈಯದ್‌ ವಾಸೀಂ ಎಂಬಾತ ಕೀ ಬಂಚ್‌ನಲ್ಲಿರುವ ಸಣ್ಣ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆತ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದು, ಆತನಿಗೂ ಸಣ್ಣಪುಟ್ಟ ಗಾಯ ಗಳಾಗಿವೆ. ಆತನ ಪೂರ್ವಪರ ಪರಿಶೀಲಿಸಲಾಗುತ್ತಿದೆ. ರವಿಯ ಹಿನ್ನೆಲೆಬಗ್ಗೆಯೂ ಮಾಹಿತಿಕಲೆ ಹಾಕುತ್ತಿದ್ದೇವೆ’ ಎಂದು ಹೇಳಿದರು.

‘ಮೇಲ್ನೋಟಕ್ಕೆ ಉದ್ವೇಗದಲ್ಲಿ ನಡೆದ ಘಟನೆ ಇದಾಗಿದೆ ಎಂದು ತಿಳಿದು ಬಂದಿದೆ. ಹಲ್ಲೆಗೆ ಬೇರೆ ಏನಾದರೂ ಕಾರಣ ಇದೆಯೋ ಎಂಬುದರ ಬಗ್ಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ. ಆರೋಪಿ ಗಾಂಜಾ ಸೇವನೆ, ಮದ್ಯಪಾನ ಮಾಡಿದ್ದನೇ ಎಂಬ ಬಗ್ಗೆ ರಕ್ತದ ಮಾದರಿ ಪರೀಕ್ಷೆ ಮಾಡಿಸಲಾಗುವುದು’ ಎಂದರು.

ಘಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಪುರಸಭೆಯ ಇಬ್ಬರು ಬಿಜೆಪಿ ಸದಸ್ಯರು, ಪಕ್ಷದ ಕಾರ್ಯಕರ್ತರು ಪಟ್ಟಣದ ಮಾರಿಕಾಂಬಾ ವೃತ್ತದಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಿದರು.

ಕೋಲಾರ ಪೊಲೀಸ್‌ ವರಿಷ್ಠಾಧಿ ಕಾರಿ ಡಿ. ದೇವರಾಜ್‌ ಸ್ಥಳಕ್ಕೆ ಧಾವಿಸಿ ಪ್ರತಿಭಟನಕಾರರನ್ನು ಚದುರಿಸಿದರು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.