ಬೆಂಗಳೂರು: ಸುರಂಗ ರಸ್ತೆ, ನಮ್ಮ ಮೆಟ್ರೊ ಡಬಲ್ ಡೆಕ್ಕರ್, ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಸೇರಿದಂತೆ ನಗರದ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ₹1,31,500 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜಿಸಿದ್ದಾರೆ.
ನಗರದಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸಲು ಹಾಗೂ ವ್ಯಾಪಾರ ಮತ್ತು ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಬೆಂಗಳೂರನ್ನು ಅಭಿವೃದ್ಧಿಗೊಳಿಸಲು ಯೋಜನೆಗಳನ್ನು ರೂಪಿಸಲಾಗಿದೆ. ಮೂಲಸೌಕರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಮೇಲೆ ನಗರದ ಚಿತ್ರಣವೇ ಬದಲಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೀರ್ಘಕಾಲೀನ ಅಭಿವೃದ್ಧಿಗಾಗಿ ಮೂಲಸೌಕರ್ಯಗಳ ಮೇಲೆ ಬಂಡವಾಳ ಹೂಡಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ರಾಜ್ಯ ಜಿಎಸ್‌ಡಿಪಿ ಅಭಿವೃದ್ಧಿ ದರವನ್ನು ಶೇ 14ರಷ್ಟು ಸಾಧಿಸುವ ಗುರಿ ಹೊಂದಲಾಗಿದೆ. ಪ್ರಮುಖ ಯೋಜನೆಗಳಿಗೆ ₹16,750 ಕೋಟಿ ಸಹಾಯ ಪಡೆಯಲು ವಿಶ್ವಬ್ಯಾಂಕ್ ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಜತೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಸಾಲಗಳಲ್ಲಿ, ಬೆಂಗಳೂರು ವಿಪತ್ತು ನಿರ್ವಹಣೆಗೆ ₹3,500 ಕೋಟಿ, ನಗರ ನೀರು ಸರಬರಾಜು ಆಧುನೀಕರಣಕ್ಕೆ ₹1,200 ಕೋಟಿ, ಕರಾವಳಿ ಕರ್ನಾಟಕದಲ್ಲಿ ಸಾಗರ ಸಂಬಂಧಿ ಆರ್ಥಿಕತೆ ಅಭಿವೃದ್ಧಿಗೆ ₹600 ಕೋಟಿ, ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ₹3,650 ಕೋಟಿ, ಹವಾಮಾನ ಪೂರಕ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ₹3,600 ಕೋಟಿ, ಸರ್ಕಾರಿ ಶಾಲೆಗಳ ಮೂಲಸೌಕರ್ಯಕ್ಕಾಗಿ ₹2,800 ಕೋಟಿ, ಸಾರ್ವಜನಿಕ ಸಾರಿಗೆಗೆ ಎಲೆಕ್ಟ್ರಿಕ್ ಬಸ್‌ಗಳಿಗಾಗಿ ₹1,400 ಕೋಟಿಯನ್ನು ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ನಗರದ ಸುರಂಗ ರಸ್ತೆ ನಿರ್ಮಾಣ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಯೋಜನೆಯಾಗಿದೆ. ಹೆಬ್ಬಾಳದಿಂದ ಜಯನಗರ (19 ಕಿ.ಮೀ) ಮತ್ತು ಮಾರತ್‌ಹಳ್ಳಿಯಿಂದ ಮೈಸೂರು ರಸ್ತೆ (24 ಕಿ.ಮೀ) - ನಗರದ ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮಕ್ಕೆ ಸಂಪರ್ಕ ಕಲ್ಪಿಸುವ ಎರಡು ಸುರಂಗಗಳನ್ನು ನಿರ್ಮಿಸುವ ಯೋಜನೆ ಇದೆ. ಬಿಬಿಎಂಪಿಯ ₹14,000 ಕೋಟಿ ಸಾಲ ಪಡೆದು, ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳ (ಟಿಡಿಆರ್) ಮೂಲಕ ₹5,000 ಕೋಟಿ ಸಂಗ್ರಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಹಣಕಾಸು ಸಾಲಿನ ಆರಂಭಿಕ ಏಳು ತಿಂಗಳ ಅವಧಿಯಲ್ಲಿ ಕರ್ನಾಟಕ ರಾಜ್ಯ ಗಣನೀಯ ಆರ್ಥಿಕ ಪ್ರಗತಿ ಸಾಧಿಸಿದ್ದು, ₹1,03,683 ಕೋಟಿ ಆದಾಯ ಸಂಗ್ರಹಿಸಿದೆ.
ಗುರಿ: ಪ್ರಸ್ತುತ ಹಣಕಾಸು ವರ್ಷದಲ್ಲಿ ₹1,95,525 ಕೋಟಿ ಆದಾಯ ಸಂಗ್ರಹ ಗುರಿ ಹೊಂದಲಾಗಿದೆ. ಈಗಾಗಲೇ ಶೇ 53ರಷ್ಟು ಗುರಿ ಸಾಧಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯ ಆದಾಯ ಸಂಗ್ರಹದಲ್ಲಿ ಶೇ 11.2ರಷ್ಟು ಪ್ರಗತಿಯನ್ನು ದಾಖಲಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಉದ್ಯಮ ಸ್ನೇಹಿ ನೀತಿಗಳು ಹಾಗೂ ಉತ್ತಮ ಆರ್ಥಿಕ ನೀತಿಗಳಿಂದಾಗಿ ವಿದೇಶಿ ಬಂಡವಾಳ ಹೂಡಿಕೆಯಲ್ಲೂ ಹೆಚ್ಚಿನ ಪ್ರಗತಿ ಸಾಧ್ಯವಾಗಿದೆ. 2024-25ರ ಪ್ರಥಮ ತ್ರೈಮಾಸಿಕದಲ್ಲಿ ರಾಜ್ಯವು ₹2.2 ಶತಕೋಟಿ ನೇರ ವಿದೇಶಿ ಬಂಡವಾಳ ಆಕರ್ಷಿಸಿದ್ದು, ಗುಜರಾತ್ ರಾಜ್ಯವನ್ನು ಹಿಂದಿಕ್ಕಿ ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನಕ್ಕೆ ಏರಿದೆ ಎಂದಿದ್ದಾರೆ.
ಪ್ರಸ್ತುತ ಸಾಲಿನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಬಜೆಟ್‌ನಲ್ಲಿ ಘೋಷಿಸಿರುವ ₹52,009 ಕೋಟಿ ಪೈಕಿ ಈಗಾಗಲೇ ₹24,235 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಫಲಾನುಭವಿಗಳಿಗೆ ನಿಗದಿತ ಅವಧಿಯ ಒಳಗಾಗಿ ಯೋಜನೆಗಳ ಲಾಭ ತಲುಪುವಂತಾಗಲು ಇ ಆಡಳಿತ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಲಾಗುತ್ತಿದೆ. ಎಲ್ಲ ಪ್ರಮುಖ ಆದಾಯ ಸಂಗ್ರಹ ವಲಯಗಳಲ್ಲಿ ರಾಜ್ಯ ಉತ್ತಮ ಸಾಧನೆ ಮಾಡಿದೆ. ಕೆಲವು ಸುಧಾರಣಾ ಕ್ರಮಗಳಿಂದಾಗಿ ಮುದ್ರಾಂಕ ಮತ್ತು ಅಬಕಾರಿ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ. ಗಣಿಗಾರಿಕೆ ಕ್ಷೇತ್ರದಲ್ಲಿ ಹಲವು ವರ್ಷಗಳ ತೊಡಕುಗಳನ್ನು ನಿವಾರಿಸುವ ಮೂಲಕ ಈ ವಲಯದಲ್ಲಿ ನಿರೀಕ್ಷೆಗೂ ಹೆಚ್ಚಿನ ಸಾಧನೆ ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಬಂಡವಾಳ ಹೂಡಿಕೆಗಳ ನಡುವೆ ಸಮತೋಲನ ಸಾಧಿಸಿ ರಾಜ್ಯವು ಸುಸ್ಥಿರ ಅಭಿವೃದ್ಧಿಯ ಹೊಸ ಮಾದರಿಯನ್ನು ಪರಿಚಯಿಸಿದೆ. ಮೂಲಸೌಕರ್ಯ ಅಭಿವೃದ್ಧಿ, ಆರ್ಥಿಕ ಸುಧಾರಣೆಗಳು, ಎಲ್ಲರನ್ನು ಒಳಗೊಂಡ ಅಭಿವೃದ್ಧಿಯನ್ನು ಸಾಧಿಸುವ ಗುರಿ ಹೊಂದುವ ಮೂಲಕ ರಾಜ್ಯ ದೂರಗಾಮಿ ಆರ್ಥಿಕ ಅಭಿವೃದ್ಧಿ ಮತ್ತು ಹಣಕಾಸು ನಿರ್ವಹಣೆಯಲ್ಲಿ ಮುಂಚೂಣಿಗೆ ಬರಲು ಸಾಧ್ಯವಾಗಿದೆ ಎಂದಿದ್ದಾರೆ.
l 40 ಕಿ.ಮೀ ಉದ್ದದ ಸುರಂಗ ರಸ್ತೆ; ₹40 ಸಾವಿರ ಕೋಟಿ
l ನಮ್ಮ ಮೆಟ್ರೊ 3ನೇ ಹಂತ ವಿಸ್ತರಣೆ (80 ಕಿ.ಮೀ); ₹40 ಸಾವಿರ ಕೋಟಿ
l ಬೆಂಗಳೂರು ಬ್ಯುಸಿನೆಸ್ ಕಾರಿಡಾರ್; ₹27 ಸಾವಿರ ಕೋಟಿ
l 100 ಕಿ.ಮೀ ಎತ್ತರಿಸಿದ ಕಾರಿಡಾರ್; ₹12 ಸಾವಿರ ಕೋಟಿ
l ಡಬಲ್ ಡೆಕ್ಕರ್ ಮೆಟ್ರೊ ಹಳಿಗಳು; ₹9 ಸಾವಿರ ಕೋಟಿ
l ಪೆರಿಫೆರಲ್ ರಸ್ತೆ ; ₹3 ಸಾವಿರ ಕೋಟಿ
l ಸ್ಕೈಡೆಕ್ ಯೋಜನೆ; ₹500 ಕೋಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.